ಎಂಇಎಸ್ ಪುಂಡರ ದೌರ್ಜನ್ಯಕ್ಕೆ ಕಡಿವಾಣ ಹಾಕಿ

| Published : Feb 25 2025, 12:46 AM IST

ಸಾರಾಂಶ

ಚನ್ನಪಟ್ಟಣ: ಬೆಳಗಾವಿ ಗಡಿಯಲ್ಲಿ ಎಂಇಎಸ್ ಪುಂಡರ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಅದು ಆಗದಿದ್ದರೆ ಸರ್ಕಾರ ಮನೆಗೆ ಹೋಗಲಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ: ಬೆಳಗಾವಿ ಗಡಿಯಲ್ಲಿ ಎಂಇಎಸ್ ಪುಂಡರ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು. ಅದು ಆಗದಿದ್ದರೆ ಸರ್ಕಾರ ಮನೆಗೆ ಹೋಗಲಿ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಕಾವೇರಿ ಸರ್ಕಲ್‌ನಲ್ಲಿ ಬೆಳಗಾವಿಯಲ್ಲಿ ಎಂಇಎಸ್ ಪುಂಡರ ದೌರ್ಜನ್ಯ ಖಂಡಿಸಿ ಕಕಜ ವೇದಿಕೆಯಿಂದ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಟಿಕೆಟ್ ಪಡೆಯಲು ಕನ್ನಡದಲ್ಲಿ ಮಾತನಾಡಿ ಎಂದ ನಿರ್ವಾಹಕನ ಮೇಲೆ ಮರಾಠಿ ಪುಂಡರು ಹಲ್ಲೆ ಮಾಡುವ ಜೊತೆಗೆ ನಿರ್ವಾಹಕನ ವಿರುದ್ಧ ಲೈಂಗಿಕ ದೌರ್ಜನ್ಯ ಕೇಸು ದಾಖಲಿಸಿರುವುದು ಖಂಡನೀಯ. ಸರ್ಕಾರ ಎಂಇಎಸ್ ಪುಂಡರ ಎಡೆಮುರಿ ಕಟ್ಟದಿದ್ದರೆ ಮನೆಗೆ ಹೋಗಲಿ ಎಂದು ಕಿಡಿಕಾರಿದರು.

ಕಕಜ ವೇದಿಕೆ ಜಿಲ್ಲಾಧ್ಯಕ್ಷ ಬೇವೂರು ಯೋಗೀಶ್‌ಗೌಡ ಮಾತನಾಡಿ, ಬೆಳಗಾವಿಯ ಗಡಿಯಲ್ಲಿ ಕನ್ನಡಿಗರ ಮೇಲೆ ಮರಾಠಿಗರು ನಿರಂತರ ದೌರ್ಜನ್ಯ ಮಾಡುತ್ತಾ ಬಂದಿದ್ದಾರೆ. ಇದೀಗ ಬಸ್‌ಗಳ ಮೇಲೆ ಕಲ್ಲು ತೂರಿದ್ದು ಸರ್ಕಾರ ಇಂತಹ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ಕರುನಾಡಿನಲ್ಲಿ ಕನ್ನಡಿಗರಿಗೆ ಜಾಗ ಇಲ್ಲವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿರುವ ಮರಾಠಿಗರ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವೇ ವೇದಿಕೆಯಿಂದ ಬೃಹತ್ ಹೋರಾಟ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಸಂದರ್ಭದಲ್ಲಿ ನಿವೃತ್ತ ಪ್ರಾಂಶುಪಾಲ ನಿಂಗೇಗೌಡ(ಎನ್‌ಜಿ), ನಿವೃತ್ತ ಅಧ್ಯಾಪಕ ಚ.ಶಿ.ವೆಂಕಟೇಗೌಡ, ಗಾಯಕ ಚೌ.ಪು. ಸ್ವಾಮಿ, ಸಿ.ವಿ.ರಾಮು, ಡಿಎಸ್‌ಎಸ್ ಸಂಚಾಲಕ ವೆಂಕಟೇಶ್ (ಸೇಟು), ಮಂಗಳವಾರಪೇಟೆ ಕೃಷ್ಣಪ್ರಸಾದ್, ಮರಿಅಂಕೇಗೌಡರು, ಮೆಣಸಿಗನಹಳ್ಳಿ ರಾಮಕೃಷ್ಣಪ್ಪ, ಜಯರಾಮು, ರಾಜು, ರ್‍ಯಾಂಬೋ ಸೂರಿ, ಅರಳಾಳುಸಂದ್ರ ಶಿವಣ್ಣ, ಸತೀಶ್ ಬೈರಾಪಟ್ಟಣ, ಪುರಿ ಸಿದ್ದು, ಆರ್, ಶಂಕರ್ ಇತರರಿದ್ದರು.

ಪೊಟೋ೨೪ಸಿಪಿಟಿ೪:

ಬೆಳಗಾವಿಯಲ್ಲಿ ಎಂಇಎಸ್ ಪುಂಡರ ದೌರ್ಜನ್ಯ ಖಂಡಿಸಿ ಚನ್ನಪಟ್ಟಣದಲ್ಲಿ ಕಕಜ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.