ಸಾರಾಂಶ
ಮುಂಡಗೋಡ: ಹೆಣ್ಣು ಅಂದರೆ ಜನ್ಮ ನೀಡುವ ದೇವರು ಎಂಬ ಭಾವನೆ ಇದ್ದು, ಪೂಜ್ಯನೀಯ ದೃಷ್ಟಿಯಿಂದ ನೋಡುವ ದೇಶ ನಮ್ಮದಾದರೂ ಜನರಲ್ಲಿ ಜ್ಞಾನದ ಕೊರತೆಯಿಂದ ಇಂದಿಗೂ ಭ್ರೂಣ ಹತ್ಯೆ ಪ್ರಕರಣಗಳು ನಡೆಯುತ್ತಲೇ ಇವೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಮುಂಡಗೋಡ ಜ್ಯೋತಿ ಆರೋಗ್ಯ ಕೇಂದ್ರದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಗ್ಲ್ಯಾಡಿಸ್ ತಿಳಿಸಿದರು.
ಪಟ್ಟಣದ ಲೊಯೋಲ ವಿಕಾಸ ಕೇಂದ್ರ ಸಭಾಂಗಣದಲ್ಲಿ ಯುವತಿಯರಿಗೆ ಜೀವನ ಕೌಶಲ್ಯ ಮತ್ತು ಮಾಸಿಕ ಋತುಚಕ್ರದ ಕುರಿತು ತರಬೇತಿ ಕಾರ್ಯಾಗಾರವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಹೆಣ್ಣು ಭ್ರೂಣಹತ್ಯೆ ಅಕ್ಷಮ್ಯ ಅಪರಾಧವಾಗಿದ್ದು, ಹೆಣ್ಣಿನ ಜೀವ, ಜೀವನಕ್ಕೆ ಜಗತ್ತಿನಲ್ಲಿ ಅಗ್ರಸ್ಥಾನವಿದೆ. ಹೆಣ್ಣಿನ ಆರೋಗ್ಯ ರಕ್ಷಣೆ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದ ಅವರು, ಹದಿಹರೆಯದ ಯುವತಿಯರ ಆರೋಗ್ಯ ಹಾಗೂ ಮಾಸಿಕ ಋತುಚಕ್ರ ಮತ್ತು ಶುಚಿತ್ವದ ಬಗ್ಗೆ ಇರುವ ವಿಡಿಯೋ ಕಿರುಚಿತ್ರ ತೋರಿಸುವುದರ ಮೂಲಕ ತರಬೇತಿ ನೀಡಿದರು.
ಲೊಯೋಲ ವಿಕಾಸ ಕೇಂದ್ರದ ವಸತಿನಿಲಯಗಳ ಮೇಲ್ವಿಚಾರಕರಾದ ದಿಲೀಪ್ ಕ್ಷೇವಿಯರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸುಸ್ಥಿರ ಅಭಿವೃದ್ಧಿ ಯೋಜನೆಯಡಿಯಲ್ಲಿ ಮಹಿಳೆಯರು ಮತ್ತು ಯುವತಿಯರಿಗಾಗಿ ಹಲವಾರು ತರಬೇತಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದೇವೆ. ಅದೇ ರೀತಿ ಹದಿಹರೆಯದ ಯುವತಿಯರಿಗೆ ಜೀವನ ಕೌಶಲ್ಯ ಹಾಗೂ ಆರೋಗ್ಯದ ಕುರಿತು ತರಬೇತಿಯನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಆಸಕ್ತಿಯಿಂದ ಭಾಗವಹಿಸಿ ಆಲಿಸಿ ಕಲಿತು ಅದನ್ನು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅಭಿವೃದ್ಧಿಯತ್ತ ಸಾಗಿ ಎಂದರು.ಸಂಪನ್ಮೂಲ ವ್ಯಕ್ತಿ ಮಂಗಳಾ ಮೋರೆ ಅವರು, ಯುವತಿಯರಿಗೆ ಜೀವನ ಕೌಶಲ್ಯಗಳ ಕುರಿತು ಚಟುವಟಿಕೆಗಳ ಮೂಲಕ ನಿರ್ಧಾರ ತೆಗೆದುಕೊಳ್ಳುವುದು, ಸಮಸ್ಯೆ ಪರಿಹಾರ, ವಿಮರ್ಶಾತ್ಮಕ ಆಲೋಚನೆ, ಸೃಜನಾತ್ಮಕ ಆಲೋಚನೆ, ವ್ಯಕ್ತಿ ವ್ಯಕ್ತಿಗಳ ನಡುವಿನ ಆಂತರಿಕ ಸಂಬಂಧ, ಪರಿಣಾಮಕಾರಿ ಸಂಪರ್ಕ, ಸಹಾನುಭೂತಿ, ಸ್ವ- ಅರಿವು, ಒತ್ತಡ ನಿರ್ವಹಿಸುವಿಕೆ ಹಾಗೂ ಭಾವನೆಗಳ ನಿರ್ವಹಿಸುವಿಕೆ ಬಗ್ಗೆ ಮಾಹಿತಿ ನೀಡಿದರು.
ತಾಲೂಕಿನ ೧೮ ಹಳ್ಳಿಗಳಿಂದ ೧೮೫ ಯುವತಿಯರು ಹಾಗೂ ಮುಂಡಗೋಡ ಲೊಯೋಲ ವಿಕಾಸ ಕೇಂದ್ರ ಸಿಬ್ಬಂದಿ ಇದ್ದರು. ಮೈನಳ್ಳಿ ವಸತಿನಿಲಯದ ಮಕ್ಕಳು ಪ್ರಾರ್ಥಿಸಿದರು. ಸ್ಫೂರ್ತಿ ದಡೆದವರ್ ಸಂವಿಧಾನ ಪ್ರಸ್ತಾವನೆಯನ್ನು ನಡೆಸಿಕೊಟ್ಟರು. ಮಲ್ಲಮ್ಮ ನೀರಲಗಿ ಅವರು ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಭರಮಣ್ಣ ಚಕ್ರಸಾಲಿ ಸ್ವಾಗತಿಸಿದರು. ತೇಜಸ್ವಿನಿ ಬೇಗೂರು ನಿರೂಪಿಸಿದರು. ಲಕ್ಷ್ಮಣ ಮುಳೆ ವಂದಿಸಿದರು.