ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಸರ್ಕಾರ ಜಾರಿ ಗೊಳಿಸಿರುವ ಪಟಾಕಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಸ್ಥಳೀಯ ಪುರಸಭೆ ಅಧಿಕಾರಿ ವೆಂಕಟೇಶ್ ತಳವಾರ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.
ಕನ್ನಡಪ್ರಭ ವಾರ್ತೆ ಮುದಗಲ್
ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಯ ಹಿತದೃಷ್ಟಿಯಿಂದ ಸರ್ಕಾರ ಜಾರಿ ಗೊಳಿಸಿರುವ ಪಟಾಕಿ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಸ್ಥಳೀಯ ಪುರಸಭೆ ಅಧಿಕಾರಿ ವೆಂಕಟೇಶ್ ತಳವಾರ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿ ಆಗ್ರಹಿಸಿದರು.ಸರ್ಕಾರದ ಆದೇಶದಂತೆ ಅನುಮತಿಸಲಾದ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಅವಕಾಶ ಕಲ್ಪಿಸಬೇಕು. ಸರ್ಕಾರದ ಅನುಮತಿ ಇಲ್ಲದ ಹಾಗೂ ನಿಷೇಧಿತ ಪಟಾಕಿಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿರುವುದು ಕಂಡುಬಂದಲ್ಲಿ ತಕ್ಷಣವೇ ಅವುಗಳನ್ನು ವಶಪಡಿಸಿಕೊಂಡು ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಲ್ಲದೆ, ಪಟಾಕಿ ಮಾರಾಟ ಮಳಿಗೆಗಳಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳು ನಿಗಾವಹಿಸಬೇಕು. ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಿದಲ್ಲಿ ಸಂಬಂಧಪಟ್ಟ ಆಡಳಿತಾಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದರು.
ಸಾರ್ವಜನಿಕರ ಸುರಕ್ಷತೆ, ಪರಿಸರ ಸಂರಕ್ಷಣೆ ಹಾಗೂ ಸರ್ಕಾರದ ನಿಯಮಗಳ ಪಾಲನೆಗಾಗಿ ಯಾವುದೇ ಕಾರಣಕ್ಕೂ ನಿಷೇಧಿತ ಪಟಾಕಿಗಳ ಮಾರಾಟಕ್ಕೆ ಅವಕಾಶ ನೀಡಬಾರದು. ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಆಗ್ರಹಿಸಿದರು.ಈ ಸಂದರ್ಭದಲ್ಲಿ ಮಾನವ ಬಂಧುತ್ವ ವೇದಿಕೆ ಅಧ್ಯಕ್ಷ ಸಂಜೀವ ಚಲವಾದಿ, ಪಾಷಾ ಕಿಚ್ಚ, ಮಹಮ್ಮದ್, ದೇವರಾಜ ಯಾದವ್, ಸುದೀಪ್, ವಿಜಯಕುಮಾರ, ಪರಶುರಾಮ ಸೇರಿದಂತೆ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.