ಸಾರಾಂಶ
ಬ್ಯಾಕೋಡು: ಶರಾವತಿ ಕಣಿವೆಯ ಹೊಳೆಬಾಗಿಲು ಲಾಂಚ್ ತಟದಲ್ಲಿ ಪ್ರವಾಸಿಗರಿಗೆ ಸುರಕ್ಷತೆ ಇಲ್ಲ ಹಾಗೂ ಲಾಂಚ್ ಸಿಬ್ಬಂದಿ ಹಾಗೂ ಟ್ಯಾಕ್ಸಿ ಚಾಲಕರಿಂದ ಪ್ರತಿನಿತ್ಯ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯ. ದೌರ್ಜನ್ಯ ತಡೆಯುವಲ್ಲಿ ಪೊಲೀಸ್ ಇಲಾಖೆ ಮೌನ ವಹಿಸಿದೆ ಎಂದು ರೈತ ಸಂಘ ಜಿಲ್ಲಾ ಅಧ್ಯಕ್ಷ ದಿನೇಶ್ ಶಿರವಾಳ ಆರೋಪಿಸಿದರು.
ಈಚೆಗೆ ರೈತ ಸಂಘದ ಜಿಲ್ಲಾ ಉಪಾಧ್ಯಕ್ಷರ ಮೇಲೆ ಹೊಳೆಬಾಗಿಲು ಟ್ಯಾಕ್ಸಿ ವಾಹನ ಚಾಲಕರಿಂದ ನಡೆದ ದೌರ್ಜನ್ಯ ಖಂಡಿಸಿ, ಎಚ್.ಗಣಪತಿಯಪ್ಪ ಸ್ಥಾಪಿತ ಶಿವಮೊಗ್ಗ ಜಿಲ್ಲಾ ರೈತ ಸಂಘದ ಸದಸ್ಯರು ಹೊಳೆಬಾಗಿಲು ಲಾಂಚ್ ತಟದಲ್ಲಿ ಪ್ರತಿಭಟನೆ ನಡೆಸಿದರು.ಶರಾವತಿ ಹಿನ್ನೀರಿನ ಪ್ರಮುಖ ಸೂಕ್ಷ್ಮ ಪ್ರದೇಶಗಳಲ್ಲಿ ಹೊಳೆಬಾಗಿಲು ಸಹ ಒಂದಾಗಿದೆ. ಇಲ್ಲಿ ಸಿಸಿ ಕ್ಯಾಮೆರಾ ಆಳವಡಿಸುವಂತೆ ಪೊಲೀಸ್ ಇಲಾಖೆಗೆ ಹಲವು ಬಾರಿ ಸ್ಥಳೀಯರು ಮನವಿ ಮಾಡಿದ್ದಾರೆ. ಆದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಪರಿಣಾಮ ಇಂತಹ ಘಟನೆಗಳು ಹೆಚ್ಚುತ್ತಿವೆ. ಸೂಕ್ತ ಸಿಬ್ಬಂದಿ ನಿಯೋಜನೆ ಮಾಡದೇ ಇರುವುದರಿಂದ ಜನಸಾಮಾನ್ಯರು ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ ಎಂದರು.
ಪ್ರತಿಭಟನಾ ಸ್ಥಳಕ್ಕೆ ಕೆಡಿಪಿ ಸದಸ್ಯ ಜಿ.ಟಿ. ಸತ್ಯನಾರಾಯಣ ಆಗಮಿಸಿ, ಸ್ಥಳೀಯರಿಗೆ ಲಾಂಚ್‌ನಲ್ಲಿ ವಾಹನ ದಾಟಿಸಲು ಮೊದಲ ಆದ್ಯತೆಯನ್ನು ಉಪವಿಭಾಗಾಧಿಕಾರಿ ಅವರು ಈ ಹಿಂದೆಯೇ ನಿಗದಿ ಮಾಡಿದ್ದಾರೆ. ಸೂಕ್ತ ಪೊಲೀಸ್ ಬಂದೋಬಸ್ತ್ ಇಲ್ಲದೇ ಇಂತಹ ಘಟನೆಗಳು ಮರುಕಳಿಸುತ್ತಿವೆ. ಸ್ಥಳೀಯರಿಗೆ ತೊಂದರೆ ಆದಾಗ ಧಾವಿಸಿ ಅಲ್ಲಿ ಸಮಸ್ಯೆ ಬಗೆಹರಿಸಲು ವಾಹನ ಚಾಲಕರು ಹೋದಾಗ ಇಂತಹ ಘಟನೆಗಳು ಸಂಭವಿಸುತ್ತಿವೆ. ಇದಕ್ಕೆ ಇಲ್ಲಿಯ ವಾಹನ ಚಾಲಕರು ಮತ್ತು ಮಾಲೀಕರು ತಲೆ ಒಡ್ಡುವಂತಾಗಿದೆ. ದ್ವೀಪದ ಜನರಿಗೆ ಇರುವ ಆದ್ಯತೆ ಮರೀಚಿಕೆಯಾಗಿದೆ. ಇಲ್ಲಿ ನಡೆದ ಘಟನೆಗಳು ಆಕಸ್ಮಿಕವೇ ಹೊರತು, ಯಾರನ್ನು ಉದ್ದೇಶಪೂರ್ವಕವಾಗಿ ನಿಂದಿಸುವ ಉದ್ದೇಶ ಇಲ್ಲ ಎಂದರು,ಘಟನೆಗೆ ಕ್ಷಮೆ ಯಾಚಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು. ರಾಮಚಂದ್ರಪ್ಪ ಮನೆಘಟ್ಟ. ದಿನೇಶ್ ಶಿರವಾಳ. ರಮೇಶ್ ಕೆಳದಿ. ಕಾರ್ಗಲ್ ಸಬ್ ಇನ್‌ಸ್ಪೆಕ್ಟರ್ ಹೋಳಿ ಬಸಪ್ಪ ಹೋಳಿ, ಸಾಗರ ಗ್ರಾಮಾಂತರ ಠಾಣೆ ಅದಿಕಾರಿಗಳು, ಅರಣ್ಯ ಇಲಾಖೆಯ ಕೆಲವು ಅಧಿಕಾರಿಗಳು. ಟ್ಯಾಕ್ಸಿ ಚಾಲಕರ ಸಂಘ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಮುಂತಾದವರು ಹಾಜರಿದ್ದರು.
ಎರಡೂ ದಡದಲ್ಲಿ ಹೆಚ್ಚಿನ ಭದ್ರತೆ ವೈಫಲ್ಯದಿಂದ ಈ ರೀತಿ ಘಟನಾವಳಿಗಳು ನಡೆಯುವಂತಾಗಿದೆ. ಇದರಿಂದ ಸ್ಥಳೀಯರಿಗೆ ಅಭದ್ರತೆ ಕಾಡುತ್ತಿದ್ದು, ವಾಹನ ಚಾಲಕರು ಸ್ಥಳೀಯರಿಗೆ ಸೆಕ್ಯೂರಿಟಿ ಗಾರ್ಡ್‌ಗಳಾಗಿ ಕೆಲಸ ಮಾಡುತ್ತಿದ್ದಾರೆ. ಇವರ ನಡವಳಿಕೆಗಳನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳಬಾರದು- ಮಂಜಯ್ಯ ಸಂಸೆ, ಸ್ಥಳೀಯ ಮುಖಂಡ