ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅನುದಾನಕ್ಕೆ ಸಿಎಂ, ಡಿಸಿಎಂ ಮೇಲೆ ಒತ್ತಡ ಹಾಕಿ

| Published : Feb 08 2024, 01:31 AM IST

ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅನುದಾನಕ್ಕೆ ಸಿಎಂ, ಡಿಸಿಎಂ ಮೇಲೆ ಒತ್ತಡ ಹಾಕಿ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರದ ಪ್ರಭಾವಿ ಸಚಿವರಾದ ಮಂಕಾಳ ವೈದ್ಯ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆಗೊಳಿಸಬೇಕು.

ಭಟ್ಕಳ:

ಸರ್ಕಾರದ ಪ್ರಭಾವಿ ಸಚಿವರಾದ ಮಂಕಾಳ ವೈದ್ಯ ಅವರು ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಮೇಲೆ ಒತ್ತಡ ಹೇರಿ ಬಜೆಟ್‌ನಲ್ಲಿ ಹಿಂದಿನ ಸರ್ಕಾರ ಮಂಜೂರು ಮಾಡಿದ್ದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆಗೊಳಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಒತ್ತಾಯಿಸಿದರು.ಅವರು ಬುಧವಾರ ಮಧ್ಯಾಹ್ನ ಪಟ್ಟಣದ ಸಚಿವರ ಕಚೇರಿಗೆ ಆಗಮಿಸಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ಕುಮಟಾದಿಂದ ಹಮ್ಮಿಕೊಂಡ ಪಾದಯಾತ್ರೆ ಮುಕ್ತಾಯಗೊಳಿಸಿ ಮಾತನಾಡಿದರು. ಹಿಂದಿನ ಬಿಜೆಪಿ ಸರ್ಕಾರ ಕುಮಟಾದಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಂಜೂರಿಸಿತ್ತು. ಆದರೆ ಬದಲಾದ ರಾಜಕೀಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮಂಜೂರಿಯಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡಿಲ್ಲ. ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದೇ ಜನರು ಭಾರೀ ತೊಂದರೆ ಅನುಭವಿಸುತ್ತಿದ್ದು, ತುರ್ತು ಸಂದರ್ಭದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ, ಮಂಗಳೂರು, ಹುಬ್ಬಳ್ಳಿ, ಗೋವಾಕ್ಕೆ ಹೋಗಬೇಕಾದ ಅನಿವಾರ್ಯತೆ ಇದೆ ಎಂದರು.

ಸಚಿವ ಮಂಕಾಳ ವೈದ್ಯ ಅವರು ಚುನಾವಣೆ ಪೂರ್ವದಲ್ಲಿ ಜಿಲ್ಲೆಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡುವ ಭರವಸೆ ನೀಡಿದ್ದರು. ಇದೀಗ ಅವರು ಸಚಿವರಾಗಿ 9 ತಿಂಗಳು ಕಳೆದರೂ ಆಸ್ಪತ್ರೆಯ ಬಗ್ಗೆ ಮಾತನಾಡುತ್ತಿಲ್ಲ. ಅದರಂತೆ ಈ ಬಗ್ಗೆ ಒಂದು ಸಭೆಯನ್ನೂ ಕರೆದಿಲ್ಲ ಎಂದು ದೂರಿದ ಅವರು, ಬಜೆಟ್‌ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಹಣ ಬಿಡುಗಡೆ ಮಾಡದೇ ಇದ್ದಲ್ಲಿ ಸಚಿವ ಮಂಕಾಳ ವೈದ್ಯರ ಕಚೇರಿ ಮುಂದೆ ಆಮರಣಾಂತ ಉಪವಾಸ ಆರಂಭಿಸುತ್ತೇವೆ ಎಂದು ಎಚ್ಚರಿಸಿದರು. ಸರ್ಕಾರ ಸಮುದ್ರ ಮತ್ತು ಸಮುದ್ರ ತೀರದ ಪ್ಲಾಸ್ಟಿಕ್ ಸ್ವಚ್ಛಗೊಳಿಸಲು ₹840 ಕೋಟಿ ಹೊಸ ಯೋಜನೆಗೆ ಮುಂದಾಗಿದ್ದು, ಇಂತಹ ಯೋಜನೆ ಬದಲು ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಅಗತ್ಯವಾದ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ತೆರೆಯಲು ಬಜೆಟ್‌ನಲ್ಲಿ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಮುಖಂಡ ಚಿದಾನಂದ ಹರಿಜನ್ ಮಾತನಾಡಿ, ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಾಗಿ ನಾವು ಸಾಯಲು ಸಿದ್ಧರಿದ್ದೇವೆ. ಸರ್ಕಾರ ಆಸ್ಪತ್ರೆ ಬಗ್ಗೆ ನಿರ್ಲಕ್ಷ್ಯ ಮಾಡಿದಲ್ಲಿ ಭಟ್ಕಳದ ಸಚಿವರ ಕಚೇರಿ ಮುಂದೆ ಆಮರಣಾಂತ ಉಪವಾಸ ಮಾಡುತ್ತೇವೆ. ಆಸ್ಪತ್ರೆಗೆ ಹಣ ಮಂಜೂರಿಯಾಗುವ ತನಕ ನಮ್ಮ ಹೋರಾಟ ನಡೆಯಲಿದೆ ಎಂದರು.ಸಚಿವರ ಆಪ್ತಸಹಾಯಕ ನಾಗರಾಜ ನಾಯ್ಕ ಮನವಿ ಸ್ವೀಕರಿಸಿದರು. ಪ್ರಮುಖರಾದ ಉಮೇಶ ಹರಿಕಾಂತ, ವಿವೇಕ ನಾಯ್ಕ ಭಟ್ಕಳ, ಕೇಶವ ನಾಯ್ಕ, ದಯಾನಂದ ನಾಯ್ಕ, ಸಂದೀಪ ನಾಯ್ಕ ಸೇರಿದಂತೆ ಹಲವರಿದ್ದರು.