ಸಾರಾಂಶ
ಬಳ್ಳಾರಿ: ರಾಜ್ಯಕ್ಕೆ ಅನುದಾನ ನೀಡುವಂತೆ ಕೋರಲು ದೆಹಲಿಗೆ ತೆರಳಿ ಕೇಂದ್ರ ನಾಯಕರಿಗೆ ಹೂವಿನಹಾರ, ಶಾಲು ಹಾಕಿ, ಟೋಪಿ ಇಟ್ಟು, ಕೈ ಮುಗಿದರೂ ಅವರ ಮನಸ್ಸು ಕರಗಲಿಲ್ಲ. ನಾವು ಕೊಟ್ಟ ಮನವಿಯನ್ನು ಕಸದ ಬುಟ್ಟಿಗೆ ಎಸೆದರು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ನಡೆ ಹಾಗೂ ಕರ್ನಾಟಕದ ಬಗೆಗಿನ ನಿರ್ಲಕ್ಷ್ಯ ಧೋರಣೆ ಕುರಿತು ವಿವರಿಸಿದ ಅವರು, ನಮ್ಮ ಪಾಲಿನ ತೆರಿಗೆ ಹಣ ನೀಡಿ ಸ್ವಾಮಿ ಎಂದು ಇನ್ನೆಷ್ಟು ಪರಿಪರಿಯಾಗಿ ಬೇಡಿಕೊಳ್ಳಬೇಕು? ಎಂದು ಪ್ರಶ್ನಿಸಿದರು.ರಾಜ್ಯದ ಪ್ರಗತಿಗೆ ಕೇಂದ್ರದಿಂದ ಯಾವುದೇ ಅನುದಾನ ನೀಡದೇ ನಿರ್ಲಕ್ಷಿಸಲಾಗುತ್ತಿದೆ. ಬರ ಪರಿಹಾರ ನೀಡುವ ಕೋರಿಕೆಗೂ ಕೇಂದ್ರ ಸರಿಯಾಗಿ ಸ್ಪಂದಿಸಲಿಲ್ಲ ಎಂದು ಅವರು ದೂರಿದರು.
ಕೇಂದ್ರದ ತೆರಿಗೆ ಪಾಲಿನಲ್ಲಿ ಶೇ.23ರಷ್ಟು ಕಡಿತವಾಗಿದೆ. ಇದರಿಂದ ರಾಜ್ಯಕ್ಕೆ ₹15ರಿಂದ 20 ಸಾವಿರ ಕೋಟಿ ವಂಚನೆಯಾಗಿದೆ. ದೇಶದಲ್ಲಿಯೇ ಅತಿಹೆಚ್ಚು ತೆರಿಗೆ ಕಟ್ಟುವ ಸ್ಥಾನದಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಹೀಗಿದ್ದರೂ ರಾಜ್ಯದ ಪ್ರಗತಿಯ ವಿಚಾರದಲ್ಲಿ ಕೇಂದ್ರ ಸರ್ಕಾರದ ಸಹಕಾರವಿಲ್ಲ. ನಮ್ಮ ಮನವಿಗಳನ್ನು ಆಲಿಸುವ ಸೌಜನ್ಯವೂ ಅವರಿಗಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರದಿಂದ ₹5300 ಕೋಟಿ ಕೊಡಬೇಕಿತ್ತು. ಆದರೆ, ಈವರೆಗೆ ನಯಾಪೈಸೆ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಮೇಕೆದಾಟು ಯೋಜನೆಗೆ ಅನುದಾನ ನೀಡದೇ ಕಳೆದ ಆರು ವರ್ಷಗಳಿಂದ ಅನ್ಯಾಯ ಮಾಡುತ್ತಲೇ ಬರುತ್ತಿದೆ. ನೀರಾವರಿ ಯೋಜನೆ ಹಾಗೂ ಹಣಕಾಸು ವಿಚಾರದಲ್ಲಿ ಕೇಂದ್ರದ ತಾರತಮ್ಯ ಮುಂದುವರಿದಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಸುಪ್ರೀಂಕೋರ್ಟ್ ನಲ್ಲಿ ದಾವೆ ಹೂಡಿ ಕೇಂದ್ರದಿಂದ ಬರ ಪರಿಹಾರದ ಹಣ ಪಡೆಯುವ ಪರಿಸ್ಥಿತಿ ನಿರ್ಮಾಣವಾಯಿತು. ಕೇಂದ್ರದ ತೆರಿಗೆ ಪಾಲು ಸರಿಯಾಗಿ ಬಂದರೆ ರಾಜ್ಯದ ಪ್ರಗತಿಯಾಗಲಿದೆ. ಇದನ್ನು ಅವರು ಸಹ ಅರ್ಥ ಮಾಡಿಕೊಳ್ಳಬೇಕಲ್ಲವೇ ಎಂದರು.