ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಮಹದೇಶ್ವರ ಬೆಟ್ಟದ ಮ್ಯೂಸಿಯಂನಲ್ಲಿ ಎಣ್ಣೆ ಮಜ್ಜನ ಸೇವೆಯ ಇತಿಹಾಸದ ಕುರುಹುಗಳನ್ನು ಹಾಕದೇ, ಜಿಲ್ಲಾಡಳಿತ ನಮ್ಮ ಮನವಿಗೆ ಸ್ಪಂದಿಸದ ಹಿನ್ನೆಲೆಯಲ್ಲಿ ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿ ಹೈಕೋರ್ಟ್ ಸಕಾರಾತ್ಮಕವಾಗಿ ಸ್ಪಂದಿಸಿ ಮುಖ್ಯಮಂತ್ರಿಗಳು ಹಾಗೂ ಶ್ರೀ ಮಹದೇಶ್ವರ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿಯ ಜೊತೆ ನಿರ್ದೇಶನ ನೀಡಿದೆ. ಆದರೆ ಜಿಲ್ಲಾಡಳಿತವಾಗಲಿ, ಅಭಿವೃದ್ಧಿ ಪ್ರಾಧಿಕಾರವಾಗಲಿ ಸ್ಪಂದಿಸದೇ ವಿಳಂಬ ಧೋರಣೆ ತಾಳುತ್ತಿದೆ ಎಂದು ಮಹದೇಶ್ವರ ಸ್ವಾಮಿಯ ಎಣ್ಣೆ ಮಜ್ಜನ ಸೇವಾಕರ್ತ ಅಯ್ಯನ ಸರಗೂರು ಮಠದ ಸಿದ್ದಪ್ಪ ಆರೋಪಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಭಾನುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನಾದಿಕಾಲದಿಂದಲೂ ಮಹದೇಶ್ವರರ ಸ್ವ ಇಚ್ಛೆಯಂತೆ ಸೇವೆ ಮಾಡಿಕೊಂಡು ಬರುತ್ತಿರುವ ನಮಗೆ ಅವಮಾನ ಮಾಡುತ್ತಿದ್ದಾರೆ, ಮುಂದಿನ ದಿನಗಳಲ್ಲಿ ಈ ಕ್ರಮ ಪುನರಾವರ್ತನೆ ಆಗದಂತೆ ನೋಡಿಕೊಳ್ಳಬೇಕು ಎಂದರು. ಕ್ಷೇತ್ರದಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಹೊಸ ಯಾತ್ರಿ ಭವನಗಳಿಗೆ ಶ್ರೀ ಮಹದೇಶ್ವರಸ್ವಾಮಿಯವರಿಗೆ ಪ್ರಪ್ರಥಮ ಪಾದಯಾತ್ರೆ ಮಾಡಿದ್ದ ಸರಗೂರಿನ ಶರಣ, ಎಣ್ಣೆಮಜ್ಜನ ಸೇವಾಕರ್ತ ಶಿಮೂಗಪ್ಪ ಹಾಗೂ ರಾಮವ್ವ, ತಾಯಿಯವರ ಹೆಸರುಗಳನ್ನು ನಮೂದಿಸಲು ಹಾಗೂ ಪ್ರತಿವರ್ಷ ಶ್ರೀಕ್ಷೇತ್ರದಲ್ಲಿ ಬಿಡುಗಡೆ ಮಾಡುವ ವಾರ್ಷಿಕ ಕ್ಯಾಲೆಂಡರ್‌ನಲ್ಲಿ ಶ್ರೀ ರಾಮವ್ವ ಮತ್ತು ಮೂಗಪ್ಪರವರ ಭಾವಚಿತ್ರ ಅಳವಡಿಸಲು ಮನವಿ ಸಲ್ಲಿಸಿದ್ದೆವು.
ಕ್ಷೇತ್ರದ ದೀಪದ ಗಿರಿಯಲ್ಲಿ ಹೊಸದಾಗಿ ನಿರ್ಮಾಣ ಮಾಡಿರುವ ಮ್ಯೂಸಿಯಂನಲ್ಲಿ ಎಣ್ಣೆಮಜ್ಜನ ಸೇವಾಕರ್ತರಾದ ಶ್ರೀ ರಾಮವ್ವ ಮತ್ತು ಮೂಗಪ್ಪರವರ ಕನಿಷ್ಠ ಮೂರು ಚಿತ್ರಗಳನ್ನು ಅಳವಡಿಸಲು ಚಾಮರಾಜನಗರ, ಶಾಸಕರು ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಮಂತ್ರಿ ಎಚ್.ಸಿ. ಮಹದೇವಪ್ಪರವರನ್ನು ಖುದ್ದು ಭೇಟಿ ಮಾಡಿ ಮನವಿ ಸಲ್ಲಿಸಿದ್ದೆವು ಎಂದರು.ಶ್ರೀ ಮಹದೇಶ್ವರ ಸ್ವಾಮಿಯವರು ಜಂಗಮ ರೂಪದಲ್ಲಿ ಸರಗೂರಿನ ಶ್ರೀರಾಮವ್ವ ಮೂಗಪ್ಪರವರ ವಾಸಸ್ಥಳಕ್ಕೆ ಎಣ್ಣೆ ಮಜ್ಜನ ಸೇವೆಗೆ ಒಕ್ಕಲು ಪಡೆಯಲು ಬಂದಿದ್ದ ಸಂದರ್ಭದ ಕಾಲ್ಪನಿಕ ಭಾವಚಿತ್ರ. ರಾಮವ್ವ ಮೂಗಪ್ಪರವರು ಎಲ್ಲಾ ಸಮುದಾಯದ ಹಲವಾರು ಭಕ್ತರೊಡಗೂಡಿ ಎಣ್ಣೆಮಜ್ಜನ ಸೇವೆಗೆ ಪ್ರಪ್ರಥಮ ಪಾದಯಾತ್ರೆ ಕೈಗೊಂಡು ಹೋಗುವಾಗ, ಅಮಚವಾಡಿಯ ಪರಿಶಿಷ್ಟ ಜನಾಂಗದವರ ವಾದ್ಯ, ಪರಿಶಿಷ್ಟ ಜನಾಂಗದ ಸಿದ್ದಯ್ಯನಪುರದ ಕಡ್ಡಿಚಾಮಣ್ಣನ ದೀವಟ್ಟಿಗೆ, ವಾಲ್ಮೀಕಿ ಸಮುದಾಯದವರಿಂದ ಕೊಂಬು ಕಹಳೆ, ಹಾಲುಗಟ್ಟೆ ಕೊಪ್ಪಲಿನ ಹಾಲುಮತದವರಾದ ಕಂಬಳಿ, ಅರಕೆರೆಬನ್ನೂರು, ಮಾಲಂಗಿ, ಯಳಂದೂರಿನ ಒಕ್ಕಲಿಗ ಸಮುದಾಯದವರಿಂದ ಅಕ್ಕಿ, ಬೆಲ್ಲ, ಎಳ್ಳು, ಹೊಂಬಾಳೆ ಮತ್ತು ಎಳನೀರು ಮತ್ತು ತಲಕಾಡಿನ ಬಸ್ತಿಕೇರಿಯ ಧೂಪ ಇತ್ಯಾದಿಗಳನ್ನೊಳಗೊಂಡ ಮೆರವಣಿಗೆ ಭಾವಚಿತ್ರ ಅಳವಡಿಸಲು ಮನವಿ ಸಲ್ಲಿಸಿದ್ದೆವು, ಇದಕ್ಕೆ ಪ್ರತಿಕ್ರಿಯೆ ಸಿಗದಿದ್ದ ಕಾರಣ ನಾವು ಬೇರೆ ದಾರಿಯಿಲ್ಲದೆ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಬೇಕಾಯಿತು ಎಂದು ತಿಳಿಸಿದರು.
ಹೈಕೋರ್ಟ್ ಇತ್ಯರ್ಥ ಮಾಡಿ ನಮ್ಮ ಹಕ್ಕುಗಳನ್ನು ಪುರಸ್ಕರಿಸಲು ಮನವಿ ಮಾಡಿದೆ. ಅಪೂರ್ಣವಾಗಿರುವ ಮ್ಯೂಸಿಯಂನನ್ನು ಉದ್ಘಾಟನೆ ಮಾಡದೇ ನ್ಯಾಯಾಲಯದ ಆದೇಶವನ್ನು ಜಾರಿಗೊಳಿಸಿ ಇದರಿಂದ ಹಿಂದುಳಿದ ಸಮುದಾಯದ ಭಕ್ತವೃಂದದವರಿಗೂ ನ್ಯಾಯ ದೊರಕಿಸಿಕೊಡಬೇಕೆಂದು ತಿಳಿಸಿದೆ ಎಂದರು.ಇದೇ ತಿಂಗಳು ೨೪ ರಂದು ಶ್ರೀ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆಯ ನಂತರ ನಡೆಯುವ ಶ್ರೀ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಸಭೆಯಲ್ಲಿ ಇದರ ಬಗ್ಗೆ ವಿಸ್ತ್ರತವಾಗಿ ಚರ್ಚಿಸಿ ಹೈಕೋರ್ಟ್ ಆದೇಶವನ್ನು ಯಥಾವತ್ತಾಗಿ ಜಾರಿಗೊಳಿಸಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಚ್. ಪಿ. ರಾಮಸ್ವಾಮಿ, ಹರೀಶ್, ಸಂಜಯ್ ಇದ್ದರು.