ಸಾರಾಂಶ
- ಹೊನ್ನಾಳಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಶಾಂತನಗೌಡ ಸೂಚನೆ - - - ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪುರಸಭೆ ಸದಸ್ಯರು ಸ್ನೇಹಪೂರ್ವಕವಾಗಿ, ಗೊಂದಲವಿಲ್ಲದೇ ತನ್ನನ್ನು ಸಹಕಾರದಿಂದ ಬಳಸಿಕೊಂಡರೆ ಪಟ್ಟಣದ ಅಭಿವೃದ್ದಿಗೆ ಸದಾ ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೇಳಿದರು.ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಎ.ಕೆ.ಮೈಲಪ್ಪ ಅಧ್ಯಕ್ಷತೆ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು. ಸಂಜೆ 4 ಗಂಟೆಗೆ ಸಭೆ ಕರೆದರೆ ವಿಷಯಗಳ ಸಂಪೂರ್ಣ ಚರ್ಚೆ ಅಸಾಧ್ಯ ಎಂದು ಕೆಲ ಸದಸ್ಯರು ಪ್ರಶ್ನಿಸಿ, ಹಾಜರಾತಿ ಪುಸ್ತಕಕ್ಕೆ ಸಹಿ ಹಾಕಲು ಹಿಂದೇಟು ಹಾಕಿದರು. ಆಗ ಶಾಸಕರು ಉತ್ತರಿಸಿ, ಕಾರ್ಯಕ್ರಮಗಳ ಒತ್ತಡಗಳಿಂದಾಗಿ ತಾವೇ ಸಂಜೆ ಸಭೆಯನ್ನು ಕರೆಯಿರಿ ಎಂದು ಹೇಳಿದ್ದೆ. ಇನ್ನು ಮುಂದೆ ಸದಸ್ಯರ ಅಪೇಕ್ಷೆಯಂತೆ ಬೆಳಗ್ಗೆಯೇ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದರು.
ಹೊನ್ನಾಳಿ ಪುರಸಭೆ ವ್ಯಾಪ್ತಿಗೆ ಸೇರಿದ ಮಲ್ಲದೇವರಕಟ್ಟೆ ಸರ್ವೆ ನಂ.4ರಲ್ಲಿ 29.17 ಎಕರೆ ಜಮೀನಿನಲ್ಲಿ ಪುರಸಭೆ ವ್ಯಾಪ್ತಿ ನಿವೇಶನರಹಿತರಿಗೆ ಆಶ್ರಯ ಯೋಜನೆಯಡಿ ನಿವೇಶನ ಹಂಚಿಕೆ ಮಾಡುವ ಮೊದಲು 29 ಎಕರೆ ಜಾಗವನ್ನು ಸ್ವಚ್ಛ ಮಾಡಿಸಿ, ಸುತ್ತಲು ತಂತಿಬೇಲಿ ಹಾಕಿ, ಮಾರ್ಕ್ ಮಾಡಿಸಬೇಕು ಎಂದು ಶಾಸಕರು ಮುಖ್ಯಾಧಿಕಾರಿ ಲೀಲಾವತಿ ಅವರಿಗೆ ಸೂಚಿಸಿದರು.ಜಮೀನು ಸ್ವಚ್ಛತೆಗೆ ಸರ್ಕಾರ ಅನುದಾನ ಬಿಡುಗಡೆ ಮಾಡಿಲ್ಲ. ಪುರಸಭೆ ಸಾಮಾನ್ಯ ನಿಧಿಯಲ್ಲೇ ಅನುದಾನ ಬಳಸಿ, ಸ್ವಚ್ಛತೆ ಮಾಡಿಸಿ, ಈ ಬಗ್ಗೆ ಕ್ರಿಯಾ ಯೋಜನೆ ತಯಾರಿಸಿಕೊಂಡು ಮಾರ್ಕ್ ಮಾಡಬೇಕು. ಈ ಹಿಂದೆ ನಿವೇಶನ ಸಂಬಂಧ ಸಾರ್ವಜನಿಕರಿಂದ ಅರ್ಜಿಗಳು ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ಅರ್ಜಿಗಳನ್ನು ಇಟ್ಟುಕೊಂಡು ಮತ್ತೆ ಅರ್ಜಿ ಕರೆಯೋಣ. ಆಗ ಪ್ರಾಮಾಣಿಕವಾಗಿ ಯಾರಿಗೆ ನಿವೇಶನ ಇಲ್ಲವೋ ಅಂಥವರಿಗೆ ನಿವೇಶನ ಸೌಲಭ್ಯ ನೀಡೋಣ. ಇದರಲ್ಲಿ ರಾಜಕೀಯ ಅಥವಾ ಪಕ್ಷಪಾತ ಬೇಡ ಎಂದರು.
ಇತ್ತೀಚೆಗೆ ಪುರಸಭೆ ವ್ಯಾಪ್ತಿಗೆ ಸೇರಿದ ದೇವನಾಯಕನಹಳ್ಳಿ ಹಾಗೂ ಹಿರೇಕಲ್ಮಠದ ಗ್ರಾಮಸ್ಥರಿಗೆ ಇ-ಸ್ವತ್ತು ನೀಡುವಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ಈ ಬಗ್ಗೆ ಸದಸ್ಯರಿಂದ ಅಥವಾ ಸಾರ್ವಜನಿಕರಿಂದ ಮತ್ತೆ ದೂರು ಬರಬಾರದು ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.2023ರ ಫೆಬ್ರವರಿಯಿಂದ 2024ರ ಆಗಸ್ಟ್ ಮಾಸದವರೆಗಿನ ಜಮಾ ಖರ್ಚನ್ನು ಸಭೆ ಅಂತ್ಯದಲ್ಲಿ ಓದಿ ದಾಖಲಿಸುವುದಕ್ಕೆ ಸಭೆ ತೀರ್ಮಾನಿಸಿತು. ಪುರಸಭಾಧ್ಯಕ್ಷ ಎ.ಕೆ. ಮೈಲಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಸಾವಿತ್ರಮ್ಮ ವಿಜೇಂದ್ರಪ್ಪ, ಸದಸ್ಯರಾದ ಕೆ.ವಿ.ಶ್ರೀಧರ್, ಬಾಬು ಹೋಬಳದಾರ್, ರಂಗನಾಥ್, ಭಾವಿಮನೆ ರಾಜಣ್ಣ, ಧರ್ಮಪ್ಪ, ಎಂ.ಸುರೇಶ್, ಹೊಸಕೇರಿ ಸುರೇಶ್, ರಾಜೇಂದ್ರ, ಸುಮಾ ಮಂಜುನಾಥ್, ಸುಮಾ ಸತೀಶ್, ರಂಜಿತ ವಡ್ಡಿ ಚನ್ನಪ್ಪ, ಅನುಶಂಕರ್ ಚಂದ್ರು, ತನ್ವೀರ್, ಸವಿತಾ ಮಹೇಶ್ ಹುಡೇದ್, ಪದ್ಮಾ ಪ್ರಶಾಂತ್, ಉಷಾ ಗಿರೀಶ್, ಮುಖ್ಯಾಧಿಕಾರಿ ಲೀಲಾವತಿ ಇತರರು ಉಪಸ್ಥಿತರಿದ್ದರು.
- - - -15ಎಚ್.ಎಲ್.ಐ2;ಹೊನ್ನಾಳಿ ಪುರಸಭೆ ಸಾಮಾನ್ಯ ಸಭೆಯಲ್ಲಿ ಶಾಸಕ ಶಾಂತನಗೌಡ ಮಾತನಾಡಿದರು.