ಕನ್ನಡಪ್ರಭ ವಾರ್ತೆ ಯಮಕನಮರಡಿ ಮೊಬೈಲ್‌ ಹಾವಳಿಯಿಂದಾಗಿ ಇತ್ತೀಚೆಗೆ ಜನರು ಮೊಬೈಲ್‌ ದಾಸರಾಗಿದ್ದು, ಓದಿನ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಹೇಳಿದರು.

ಕನ್ನಡಪ್ರಭ ವಾರ್ತೆ ಯಮಕನಮರಡಿ

ಮೊಬೈಲ್‌ ಹಾವಳಿಯಿಂದಾಗಿ ಇತ್ತೀಚೆಗೆ ಜನರು ಮೊಬೈಲ್‌ ದಾಸರಾಗಿದ್ದು, ಓದಿನ ಕಡೆಗೆ ಗಮನ ಹರಿಸುತ್ತಿಲ್ಲ ಎಂದು ಬೆಳಗಾವಿ ನಗರ ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಭಜಂತ್ರಿ ಹೇಳಿದರು.

ಯಮಕನಮರಡಿ ಹರಿಮಂದಿರದಲ್ಲಿ ನಡೆದ ಏಕನಾಥ್ ದಾದಾ ಗೋಸಾವಿ ಅವರ 23ನೇಯ ಪುಣ್ಯಸ್ಮರಣೆ ಹಾಗೂ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದೊಡ್ಡವರಿಂದ ಹಿಡಿದು ಚಿಕ್ಕ ಮಕ್ಕಳು ಕೂಡ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಮೊಬೈಲ್ ಬದಲು ಉತ್ತಮ ಗ್ರಂಥಗಳನ್ನು ಓದಿ ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಒತ್ತಡದ ಬದುಕಿನಲ್ಲಿ ಇಂದು ಮನುಷ್ಯ ಹಲವು ರೋಗಗಳಿಗೆ ಬಲಿಯಾಗುತ್ತಿದ್ದಾನೆ. ಹಿರಿಯರು ಮಕ್ಕಳಿಗೆ ಉತ್ತಮ ಸಂಸ್ಕಾರ, ಸಂಸ್ಕೃತಿ ಕಲಿಸಿ ಆಧ್ಯಾತ್ಮದ ಕಡೆಗೆ ಸಾಗಲು ಮಾರ್ಗದರ್ಶನ ನೀಡಬೇಕು. ಮಠಮಾನ್ಯಗಳು ಒತ್ತಡದಲ್ಲಿ ಬದುಕುವ ಮನುಷ್ಯನಿಗೆ ಶಾಂತಿ ನೆಮ್ಮದಿ ನೀಡುವ ಕೇಂದ್ರಗಳಾಗಿವೆ ಎಂದು ಹೇಳಿದರು.ಹರಿ ಮಂದಿರದ ಪೀಠಾಧಿಪತಿ ಡಾ.ಆನಂದ ನರಸಿಂಹ ಏಕನಾಥ ಗೋಸಾವಿ ಮಾತನಾಡಿ, ಹರಿಮಂದಿರ ಜಾತಿ ಮತ, ಧರ್ಮ, ಭಾಷೆ ಭೇದವಿಲ್ಲದೆ ಧಾರ್ಮಿಕ ಕಾರ್ಯಗಳ ಜೊತೆಗೆ ಸಾಮಾಜಿಕ ಶೈಕ್ಷಣಿಕ ಕಾರ್ಯಗಳು ಕೂಡ ನಡೆಯಬೇಕೆಂಬ ಏಕನಾಥ ದಾದಾ ಗೋಸಾವಿ ಅವರ ಆಶಯವಾಗಿದೆ. ಆ ನಿಟ್ಟಿನಲ್ಲಿ ಕಳೆದ 23 ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲು ಪ್ರತಿ ವರ್ಷ ವಿದ್ಯಾರ್ಥಿ ವೇತನ ಕೊಡಲಾಗುತ್ತಿದೆ ಎಂದರು.ಈ ವೇಳೆ ರಾಮಚಂದ್ರ ಕುಲಕರ್ಣಿ, ಪ್ರಾಧ್ಯಾಪಕ ಕಿಶನ್ ರಾವ್ ಕುರಾಡೆ, ಗ್ರಂಥಮಿತ್ರ ದತ್ತಾ ದೇಶಪಾಂಡೆ, ಯುವರಾಜ್ ಕದಂ, ಪಾರಸ್ ಓಸ್ವಾಲ್, ಸಿಆರ್‌ಪಿ ಎಸ್.ಬಿ.ಭೀಮಗೋಳ ಇದ್ದರು. ಪತ್ರಕರ್ತ ಸುನಿಲ್ ದೇಸಾಯಿ ಸ್ವಾಗತಿಸಿದರು. ಉಪನ್ಯಾಸಕ ಬಿ.ಬಿ.ಕೊಡ್ಲಿ ಪ್ರಾಸ್ತಾವಿಕ ಮಾತನಾಡಿದರು. ಉಪನ್ಯಾಸಕ ಎಸ್.ಆರ್.ತಬರಿ, ರಾವಸಾಹೇಬ್ ಮುರಗಿ ಕಾರ್ಯಕ್ರಮ ನಿರ್ವಹಿಸಿದರು.