ಚಿತ್ರೀಕರಣ ಮುಗಿಸಿದ ‘ಪುಟ್ಟಗೂಡಿನ ಪಟ್ಟದರಸಿ’

| Published : Jun 10 2024, 12:48 AM IST

ಚಿತ್ರೀಕರಣ ಮುಗಿಸಿದ ‘ಪುಟ್ಟಗೂಡಿನ ಪಟ್ಟದರಸಿ’
Share this Article
  • FB
  • TW
  • Linkdin
  • Email

ಸಾರಾಂಶ

ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಪುಟ್ಟಗೂಡಿನ ಪಟ್ಟದರಸಿ’ ಮಕ್ಕಳ ಕನ್ನಡ ಚಲನಚಿತ್ರದ ಚಿತ್ರೀಕರಣ ಬುಧವಾರ ಹಾಸನದ ಶೆಟ್ಟಿಹಳ್ಳಿ ಚರ್ಚ್‌ನಲ್ಲಿ ಚಿತ್ರದ ಅಂತಿಮ ಹಂತದ (ಕ್ಲೈಮಾಕ್ಸ್) ಚಿತ್ರೀಕರಣ ಮಾಡುವ ಮೂಲಕ ಮುಕ್ತಾಯಗೊಂಡಿತು.

ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್ ಅಡಿ ಮಕ್ಕಳ ಚಿತ್ರ ನಿರ್ಮಾಣ । ಶೆಟ್ಟಿಹಳ್ಳಿ ಚರ್ಚ್‌ನಲ್ಲಿ ಅಂತಿಮ ಹಂತ । 26 ದಿನ ನಡೆದ ಚಿತ್ರೀಕರಣ

ಕನ್ನಡಪ್ರಭ ವಾರ್ತೆ ಹಾಸನ

ಮಹಾಲಕ್ಷ್ಮಿ ಥಿಯೇಟರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ‘ಪುಟ್ಟಗೂಡಿನ ಪಟ್ಟದರಸಿ’ ಮಕ್ಕಳ ಕನ್ನಡ ಚಲನಚಿತ್ರದ ಚಿತ್ರೀಕರಣ ಬುಧವಾರ ಶೆಟ್ಟಿಹಳ್ಳಿ ಚರ್ಚ್‌ನಲ್ಲಿ ಚಿತ್ರದ ಅಂತಿಮ ಹಂತದ (ಕ್ಲೈಮಾಕ್ಸ್) ಚಿತ್ರೀಕರಣ ಮಾಡುವ ಮೂಲಕ ಮುಕ್ತಾಯಗೊಂಡಿತು.

ಆಲೂರು ತಾಲೂಕಿನ ತಾಳೂರಿನಲ್ಲಿ ಸುಮಾರು ೨೬ ದಿನಗಳಿಂದ ಸತತವಾಗಿ ಚಿತ್ರೀಕರಣ ಕೈಗೊಂಡ ಚಿತ್ರತಂಡ ಕೊನೆಯ ಹಂತದ ಕ್ಲೈಮಾಕ್ಸ್ ಚಿತ್ರೀಕರಣಕ್ಕೆ ಬೈರಾಪುರದ ಬೆಥೆಸ್ತಾ ಶಾಲೆಯ ೫೦ಕ್ಕೂ ಹೆಚ್ಚು ಸ್ಕೌಟ್ಸ್‌ ಅಂಡ್ ಗೈಡ್ಸ್ ವಿದ್ಯಾರ್ಥಿಗಳು ಹಾಗೂ ಸ್ಥಳೀಯ ಕಲಾವಿದರು ಸೇರಿದಂತೆ ನೂರಕ್ಕೂ ಹೆಚ್ಚು ಕಲಾವಿದರನ್ನು ಬಳಸಿಕೊಳ್ಳುವ ಮೂಲಕ ಚಿತ್ರದ ಅಂತಿಮ ಹಂತವನ್ನು ಚಿತ್ರದ ನಿರ್ದೇಶಕ ಅರುಣ್ ಗೌಡ ಚಿತ್ರೀಕರಣ ಮಾಡುವ ಮೂಲಕ ಪೂರ್ಣಗೊಳಿಸಿದರು.

ಈ ಮಕ್ಕಳ ಚಿತ್ರದ ನಿರ್ಮಾಪಕ ಲಕ್ಷ್ಮಿಕುಮಾರ್ ಶಾಲಾ ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಶಾಲೆಗಳು ಪ್ರಾರಂಭವಾಗುವ ಹೊತ್ತಿಗೆ ಚಿತ್ರೀಕರಣ ಮುಗಿಸಬೇಕೆಂದಿದ್ದರು. ಅದರಂತೆ ಒಂದು ತಿಂಗಳ ಒಂದೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಿದ ಚಿತ್ರ ತಂಡವು ೨೬ ದಿನಗಳಲ್ಲಿ ಚಿತ್ರದ ಎಲ್ಲಾ ಸನ್ನಿವೇಶಗಳನ್ನು ಚಿತ್ರೀಕರಣ ಮಾಡಿ ಮುಗಿಸಿದೆ.

ಇದು ಸಾಹಿತಿ, ಶಿಕ್ಷಕ ಕೊಟ್ರೇಶ್ ಎಸ್. ಉಪ್ಪಾರ್ ಅವರ ಕಾದಂಬರಿ ಆಧಾರಿತ ಮಕ್ಕಳ ಚಿತ್ರವಾಗಿದ್ದು ಕಾದಂಬರಿಯಲ್ಲಿ ಬರುವ ಎಲ್ಲಾ ಸನ್ನಿವೇಶಗಳು ಹಾಗೂ ಸಂಭಾಷಣೆಗಳು ಸ್ವಾಭಾವಿಕವಾಗಿ ಬರಬೇಕೆಂಬ ನಿಟ್ಟಿನಲ್ಲಿ ಪ್ರತಿದಿನ ನಿರ್ಮಾಪಕ ಹಾಗೂ ನಿರ್ದೇಶಕರೊಂದಿಗೆ ಚರ್ಚಿಸುವ ಮೂಲಕ ಕಲಾವಿದರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಹಾಗಾಗಿ ಎಲ್ಲಾ ಸನ್ನಿವೇಶಗಳನ್ನು ಕಾದಂಬರಿಯಲ್ಲಿ ಮೂಡಿ ಬಂದಿರುವ ಪ್ರಕಾರದಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ತಮ್ಮ ಕಾದಂಬರಿ ಸಿನಿಮಾ ಆಗುವ ಮೂಲಕ ಸಮಾಜಕ್ಕೆ ಸ್ಕೌಟ್ಸ್‌ ಅಂಡ್ ಗೈಡ್ಸ್ ವಿದ್ಯಾರ್ಥಿಗಳ ಜೀವನದಲ್ಲಿ ನಡೆಯುವ ಕಥೆಯನ್ನು ಓದುಗರಿಗೆ ಹಾಗೂ ಸಿನಿಪ್ರಿಯರಿಗೆ ನೋಡುವಂತೆ ಮಾಡಿದ ನಿರ್ಮಾಪಕರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ಅರ್ಪಿಸಿದರು.

ಚಿತ್ರದ ಚಿತ್ರೀಕರಣ ಪ್ರಾರಂಭವಾದಾಗಿನಿಂದ ಮುಗಿಯುವವರೆಗೂ ಪ್ರತಿದಿನ ಪ್ರತಿ ಹಂತದಲ್ಲೂ ತಮ್ಮದೇ ಸ್ವಂತ ಚಿತ್ರದಂತೆ ಊರಿನವರು ಹಾಗೂ ತಾಲೂಕಿನವರು ಪ್ರೋತ್ಸಾಹಿಸಿದ್ದು ಖುಷಿ ತಂದಿದೆ. ಮತ್ತೊಂದು ಚಿತ್ರವನ್ನು ಇದೇ ತಾಲೂಕಿನಲ್ಲಿ ಇವರ ಪ್ರೋತ್ಸಾಹದ ಜತೆಗೆ ಮಾಡುವುದಾಗಿ ಚಿತ್ರದ ನಿರ್ಮಾಪಕ ಲಕ್ಷ್ಮಿಕುಮಾರ್ ಹೇಳಿದರು.

ಸಕಲೇಶಪುರದವರೇ ಆದ ಪತ್ರಕರ್ತ ಅರುಣ್ ಗೌಡ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳುತ್ತಿದ್ದು. ತಮ್ಮ ೮ ವರ್ಷದ ಸಿನಿಮಾ ನಿರ್ದೇಶನ ಕ್ಷೇತ್ರದ ಅನುಭವದೊಂದಿಗೆ ಮೊದಲ ಬಾರಿಗೆ ನಿರ್ದೇಶನಕ್ಕಾಗಿ ಕೈಗೆತ್ತಿಕೊಂಡ ಕಾದಂಬರಿ ಆಧಾರಿತ ಮಕ್ಕಳ ಚಿತ್ರಕ್ಕೆ ಸಾಕಷ್ಟು ಶ್ರಮ ಹಾಕಿದ್ದು. ಹಳೆ ಕಲಾವಿದರು ಹಾಗೂ ಸ್ಥಳೀಯ ಹವ್ಯಾಸಿ ಕಲಾವಿದರೊಂದಿಗೆ, ಚಿಕ್ಕ ಮಕ್ಕಳ ಜತೆ ಒಂದೇ ಹಂತದ ಚಿತ್ರೀಕರಣ ಮಾಡಿರುವುದು ಖುಷಿ ತಂದಿದೆ ಎಂದು ತಿಳಿಸಿದರು.

ಒಟ್ಟಾರೆ ಜಿಲ್ಲೆಯವರೇ ಆದ ಕಾದಂಬರಿಕಾರರು, ನಿರ್ದೇಶಕರು ಹಾಗೂ ಕಲಾವಿದರನ್ನು ಒಳಗೊಂಡ ಈ ಮಕ್ಕಳ ಚಿತ್ರವು ೨೬ ದಿನಗಳಲ್ಲಿ ಚಿತ್ರಿಕರಣವನ್ನು ಮುಗಿಸಿರುವುದು ಚಿತ್ರತಂಡದವರೆಲ್ಲರಿಗೂ ಖುಷಿ ತಂದಿದೆ ಎಂದರು.

ಚಿತ್ರಕ್ಕೆ ಸಂಭಾಷಣೆಯನ್ನು ವಿಜಯ ಹಾಸನ್ ಬರೆದಿದ್ದು, ಛಾಯಾಗ್ರಹಣ ಚಂದು, ಸಹ ನಿರ್ದೇಶನ ಶರತ್ ಬಾಬು, ಅನಿಲ್ ಕುಮಾರ್, ಸಹಾಯಕ ನಿರ್ದೇಶಕ ಅರ್ಜುನ್ ಕ್ಷತ್ರಿಯ ಮಾಡಿದ್ದಾರೆ.

ತಾರಾಗಣದಲ್ಲಿ ಸಿದ್ದುಮಂಡ್ಯ, ಪೂಜಾ ರಘುನಂದನ್, ಪಿ.ಜಿ.ಆರ್.ಸಿಂಧ್ಯಾ, ಸಿಮೆಂಟ್ ಮಂಜುನಾಥ್, ಕುಮಾರಿ ಶರಣ್ಯ, ಮಂಜುಳಮ್ಮ, ಗ್ಯಾರಂಟಿ ರಾಮಣ್ಣ, ಲತಾಮಣಿ ತುರುವೇಕೆರೆ, ಎಚ್.ಎಸ್.ಪ್ರಭಾಕರ್, ಅಂಬಿಕಾ, ಸ್ಫೂರ್ತಿ, ಧನ್ವಿತ್, ಸಿಂಚನ, ದೀಪಿಕಾ, ನವೀನ್ ಎಂ.ಜೆ. ಶ್ರೇಯಸ್, ಲಕ್ಷ್ಮಿ, ಯಶಸ್ಸು, ಹೇಮಲತಾ, ಶ್ರೇಯಸ್, ವೀಣಾ, ಆಶಾ, ಲಕ್ಷ್ಮಿ, ಚಂದನ್, ಮುರಳಿ ಹಾಸನ್, ಜಯಶಂಕರ್ ಬೆಳಗುಂಬ, ಸಾಸು ವಿಶ್ವನಾಥ್, ಶರತ್ ಬಾಬು, ಶೋಭಾ, ಡಾ.ಹಸೀನಾ ಎಚ್.ಕೆ., ಬಿ.ಪಿ.ಗಿರೀಶ್, ಭಾನುಮತಿ, ಶ್ವೇತಾ ಶಾಂತಕುಮಾರ್, ಶಶಿಚಂದ್ರಿಕಾ, ರೀನಾ ಮೆತಿವ್ಸ್, ಶಲ್ಪಕೃತಿ, ಎಂ.ಬಾಲಕೃಷ್ಣ, ಪ್ರದೀಪ್ ಗೌಡ, ಪ್ರಿಯಾಂಕ ಎಸ್., ಧರ್ಮ ತಾಳೂರು, ಶ್ರೀಧರ್, ಅರ್ಜುನ್ ಕ್ಷತ್ರಿಯ, ರೇವಂತ್, ಮಾರೇಶ್, ಗಿರೀಶ್ ಗಂಧರ್ವ, ಪ್ರಿಯಾ, ಉಷಾ ಇತರರು ಇದ್ದಾರೆ.