2 ದಿನದ ವಸ್ತು ಪ್ರದರ್ಶನಕ್ಕೆ ಪುಟ್ಟರಂಗಶೆಟ್ಟಿ ಚಾಲನೆ

| Published : Apr 08 2025, 12:31 AM IST

ಸಾರಾಂಶ

ಚಾಮರಾಜನಗರದಲ್ಲಿ ಸಂಜೀವಿನಿ ಸ್ವ ಸಹಾಯ ಸಂಘಗಳು ಉತ್ಪಾದಿಸಿರುವ ಉತ್ಪನ್ನಗಳ ಎರಡು ದಿನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಸಂಜೀವಿನಿ-ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಸಂಜೀವಿನಿ ಸ್ವ ಸಹಾಯ ಸಂಘಗಳು ಉತ್ಪಾದಿಸಿರುವ ಉತ್ಪನ್ನಗಳ ಎರಡು ದಿನಗಳ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಎಂಎಸ್ಐಎಲ್ ಅಧ್ಯಕ್ಷ ಹಾಗೂ ಶಾಸಕ ಸಿ.ಪುಟ್ಟರಂಗಶೆಟ್ಟಿ ಸೋಮವಾರ ಚಾಲನೆ ನೀಡಿದರು. ನಗರದ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಆರಂಭವಾಗಿರುವ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಆಯೋಜಿಸಲಾಗಿದ್ದು ಶಾಸಕ ಸಿ. ಪುಟ್ಟರಂಗಶೆಟ್ಟಿ ಅವರು ಜಿಲ್ಲಾಧಿಕಾರಿ ಶಿಲ್ಪಾನಾಗ್, ಜಿಪಂ ಸಿಇಒ ಮೋನಾ ರೋತ್ ಅವರೊಂದಿಗೆ ಮಹಿಳೆಯರೇ ತಯಾರಿಸಿದ ಉತ್ಪನ್ನಗಳ ವಸ್ತು ಪ್ರದರ್ಶನಗಳ ಮಳಿಗೆಗಳನ್ನು ವೀಕ್ಷಿಸಿದರು.

ಪ್ರತಿಯೊಂದು ಮಳಿಗೆಗೂ ಗಣ್ಯರು ಭೇಟಿ ನೀಡಿ ಮಾರಾಟಕ್ಕಿಡಲಾದ ಉತ್ಪನ್ನಗಳು, ಸಂಘದ ಚಟುವಟಿಕೆಗಳು ಕಾರ್ಯ ವಿಧಾನಗಳನ್ನು ಆಸಕ್ತಿಯಿಂದ ತಿಳಿದುಕೊಂಡರು. ಮಾರಾಟ ಮಾಡಲು ಇಡಲಾಗಿದ್ದ ಸಿಹಿ ತಿನಿಸುಗಳು, ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ತಂಪು ಪಾನೀಯವನ್ನು ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಮಹಿಳಾ ಸ್ವ ಸಹಾಯ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ವ್ಯವಸ್ಥೆ ಮಾಡಿಕೊಡಲು ಬದ್ದರಾಗಿದ್ದೇವೆ. ಇಂತಹ ವಸ್ತುಪ್ರದರ್ಶನ ಮಾರಾಟ ಮೇಳಗಳು ಮಹಿಳಾ ಸ್ವ ಸಹಾಯ ಸಂಘಗಳು ತಯಾರು ಮಾಡಿದ ವಸ್ತುಗಳಿಗೆ ಮಾರಾಟ ಮಾಡಲು ಸೂಕ್ತವಾಗಿವೆ ಎಂದರು.

ಮಹಿಳಾ ಸಂಘಗಳು ತಯಾರಿಸಿದ ಉತ್ಪನ್ನಗಳಿಗೆ ಆನ್ ಲೈನ್ ಮಾರುಕಟ್ಟೆ ಒದಗಿಸಲಿದ್ದೇವೆ. ಇಂದು ಆನ್ ಲೈನ್ ನಲ್ಲಿ ಹೆಚ್ಚಿನ ವಹಿವಾಟು ನಡೆಯುತ್ತಿದೆ. ಮಹಿಳೆಯರಿಗೆ ಅವರು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡಿ ಉತ್ತೇಜಿಸವ ಸಲುವಾಗಿ ಆನ್ ಲೈನ್ ಮೂಲಕ ಅವಕಾಶ ಮಾಡಿಕೊಡಬೇಕಿದೆ. ಎಂಎಸ್ಐಎಲ್ ಲೇಬಲ್ ಮೂಲಕವು ಮಾರುಕಟ್ಟೆ ಒದಗಿಸುವ ಚಿಂತನೆ ಮಾಡಲಿದ್ದೇವೆ. ಮಹಿಳೆಯರು ಸ್ವಾವಲಂಬಿಗಳಾಗಲು ನೆರವು ನೀಡುವ ಉದ್ದೇಶ ಹೊಂದಿದ್ದೇವೆ ಎಂದರು. ಜಿಪಂ ಯೋಜನಾ ನಿರ್ದೇಶಕರಾದ ಕಿರಣ್ ಪಡ್ನೇಕರ್ ಈ ಸಂದರ್ಭದಲ್ಲಿ ಇದ್ದರು.

ಎರಡು ದಿನಗಳ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಕೈಮಗ್ಗದ ಬಟ್ಟೆಗಳು, ಸೀರೆ, ಬ್ಯಾಗ್, ಅಲಂಕಾರಿಕ ವಸ್ತುಗಳು, ಜೇನು, ನಲ್ಲಿಕಾಯಿ ಉತ್ಪನ್ನ, ಮಸಾಲ ಪದಾರ್ಥಗಳು, ಹಪ್ಪಳ, ಉಪ್ಪಿನಕಾಯಿ, ಪೂಜಾ ಬುಟ್ಟಿ, ತಂಪು ಪಾನೀಯಗಳು, ಆಹಾರ ತಿನಿಸುಗಳ ಮಳಿಗೆಗಳು ಸೇರಿದಂತೆ ಇತರೆ ವಸ್ತುಗಳ ಮಳಿಗೆಗಳು ಗಮನಸೆಳೆಯುತ್ತಿದೆ.