ಸಾರಾಂಶ
ಅಸ್ಪೃಶ್ಯ ಸಮುದಾಯಕ್ಕೆ ಅಧಿಕಾರ ಸಿಗದಂತೆ ಮಾಡುವ ಕುತಂತ್ರದ ಅಡಗಿದೆ. ನಿಯಮಾವಳಿ ಪ್ರಕಾರ 10 ದಿನದೊಳಗೆ ಅಂಗೀಕರಿಸಬೇಕಿದ್ದ ರಾಜೀನಾಮೆಯನ್ನು 12 ದಿನಗಳ ನಂತರ ವಾಪಸ್ ಪಡೆಯಲು ಅವಕಾಶ ನೀಡಿರುವ ಉಪವಿಭಾಗಾಧಿಕಾರಿ ನಡೆ ಸರಿಯಲ್ಲ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಅವರು ಕೊಟ್ಟ ಮಾತಿನಂತೆ ರಾಜೀನಾಮೆ ನೀಡುವ ಮೂಲಕ ದಲಿತ ಸಮುದಾಯದ ಮತ್ತೊಬ್ಬ ಸದಸ್ಯ ಸಿದ್ದರಾಜುಗೆ ಅವಕಾಶ ನೀಡಬೇಕು ಎಂದು ಜೆಡಿಎಸ್ ತಾಲೂಕು ಎಸ್ಸಿ, ಎಸ್ಟಿ ಘಟಕದ ಅಧ್ಯಕ್ಷ ಕಾಂತರಾಜು ಆಗ್ರಹಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಜೆಡಿಎಸ್ ಮುಖಂಡರೊಡನೆ ಸುದ್ದಿಗೋಷ್ಠಿ ನಡೆಸಿ, ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನವು ಅಸ್ಪೃಶ್ಯ ಸಮುದಾಯಕ್ಕೆ ನೀಡಲು ಮುಂದಾಗಿದ್ದಾಗ ಬಿಜೆಪಿ, ಜೆಡಿಎಸ್ ಪಕ್ಷೇತರರ ಮೈತ್ರಿ ಹಾಗೂ ಬಿಜೆಪಿ ಮುಖಂಡ ಜಿ.ಮುನಿರಾಜು ಅವರ ಲಾಭಿಯಿಂದಾಗಿ ಕಡಿಮೆ ಸಂಖ್ಯೆಯುಳ್ಳ ಸಮಾಜದ ಪುಟ್ಟಸ್ವಾಮಿ ಅವರನ್ನು ಆಯ್ಕೆ ಮಾಡಲಾಗಿತ್ತು ಎಂದರು.
ಅಧ್ಯಕ್ಷರ ಆಯ್ಕೆ ವೇಳೆ ನಡೆದ ಮಾತುಕತೆಯಂತೆ ಪುಟ್ಟಸ್ವಾಮಿ ರಾಜೀನಾಮೆ ನೀಡದೇ ಸಂವಿಧಾನ ವಿರೋಧಿ, ಅಸ್ಪೃಶ್ಯ ಸಮುದಾಯದ ಕೋಪಕ್ಕೆ ಗುರಿಯಾಗಿದ್ದಾರೆ. ಮುಂದಿನ ರಾಜಕೀಯದ ಭವಿಷ್ಯದ ದೃಷ್ಟಿಯಿಂದ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಅದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಆರು ತಿಂಗಳ ನಂತರ ರಾಜೀನಾಮೆ ನೀಡಿ ದಲಿತ ಸಮುದಾಯದ ಸಿದ್ದರಾಜು ಅವರನ್ನು ತಾವೇ ಅಧ್ಯಕ್ಷರನ್ನಾಗಿ ಮಾಡುವುದಾಗಿ ಒಪ್ಪಿಕೊಂಡಿದ್ದ ಪುಟ್ಟಸ್ವಾಮಿ, ರಾಜೀನಾಮೆ ನೀಡಿ ನಂತರ ವಾಪಸ್ ಪಡೆದು ಮೈತ್ರಿ ಧರ್ಮಕ್ಕೆ ದ್ರೋಹ ಬಗೆದಿದ್ದಾರೆ. ಅಲ್ಲದೇ, ಬಿಜೆಪಿ ಮುಖಂಡ ಮುನಿರಾಜು ಸಹ ಮಾತು ತಪ್ಪಿದ್ದಾರೆ ಎಂದು ದೂರಿದರು.
ಅಸ್ಪೃಶ್ಯ ಸಮುದಾಯಕ್ಕೆ ಅಧಿಕಾರ ಸಿಗದಂತೆ ಮಾಡುವ ಕುತಂತ್ರದ ಅಡಗಿದೆ. ನಿಯಮಾವಳಿ ಪ್ರಕಾರ 10 ದಿನದೊಳಗೆ ಅಂಗೀಕರಿಸಬೇಕಿದ್ದ ರಾಜೀನಾಮೆಯನ್ನು 12 ದಿನಗಳ ನಂತರ ವಾಪಸ್ ಪಡೆಯಲು ಅವಕಾಶ ನೀಡಿರುವ ಉಪವಿಭಾಗಾಧಿಕಾರಿ ನಡೆ ಸರಿಯಲ್ಲ ಎಂದು ಕಿಡಿಕಾರಿದರು.ಪುರಸಭೆ ಸದಸ್ಯ ಸಿದ್ದರಾಜು ಮಾತನಾಡಿ, ಶೋಷಿತ ಸಮುದಾಯಕ್ಕೆ ಸಿಗಬೇಕಿರುವ ಅವಕಾಶವನ್ನು ಕಸಿದುಕೊಳ್ಳುತ್ತಿರುವ ಪುಟ್ಟಸ್ವಾಮಿ ಅವರ ನಡೆ ಮುಂದಿನ ದಿನಗಳ ಅವರಿಗೆ ಮಾರಕವಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ನಾಗರಾಜು, ಮಲ್ಲೇಶ್, ನಾರಾಯಣ, ಮಲ್ಲು, ಕೃಷ್ಣಮೂರ್ತಿ, ರಮೇಶ್, ಮರಿಸ್ವಾಮಿ, ಕೃಷ್ಣ, ಹೊಂಬಾಳಯ್ಯ ಪಾಲ್ಗೊಂಡಿದ್ದರು.