ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಉಡುಪಿಯ ಸಮಸ್ತ ಜನತೆ ಪರವಾಗಿ ಶಿರೂರು ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಉಡುಪಿ: ತಮ್ಮ ಸಂನ್ಯಾಸಶ್ರಮದ ಸುವರ್ಣ ಕಾಲದಲ್ಲಿ ಚತುರ್ಥ ಪರ್ಯಾಯವನ್ನು ವಿಶ್ವ ಗೀತಾ ಪರ್ಯಾಯವನ್ನಾಗಿ ವಿಶ್ವದಲ್ಲೆಡೆ ಪ್ರಸಿದ್ಧವಾಗುವಂತೆ ಆಚರಿಸಿ ಸಮಾಪನಗೊಳಿಸಿದ, ಯತಿಕುಲ ಚಕ್ರವರ್ತಿ, ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರನ್ನು ಉಡುಪಿಯ ಸಮಸ್ತ ಜನತೆ ಪರವಾಗಿ ಶಿರೂರು ಪರ್ಯಾಯ ಸ್ವಾಗತ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭೆ ಮತ್ತು ವಿವಿಧ ಸಂಘ ಸಂಸ್ಥೆಗಳ ವತಿಯಿಂದ ಶ್ರೀಗಳನ್ನು ಅಭಿವಂದಿಸಲಾಯಿತು.ನಂತರ ಆಶೀರ್ವಚನ ನೀಡಿದ ಪುತ್ತಿಗೆ ಶ್ರೀಗಳು, ಕಳೆದ 2 ವರ್ಷಗಳ ಕಾಲ ತಾವು ಅನುಭವಿಸಿದ ಕೃಷ್ಣನ ಪೂಜೆಯ ಆನಂದ ವರ್ಣಾನಾತೀತ ಮತ್ತು ಅವಚನೀಯವಾಗಿದೆ. ಈ ಆನಂದವನ್ನು ತಾವೂ ಇಲ್ಲಿ ಅನುಭವಿಸಿದ್ದಾಗಿ ಉಡುಪಿಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರೂ ಹೇಳಿದ್ದರು, ನಮ್ಮ ಈ ಎರಡು ವರ್ಷಗಳ ಪರ್ಯಾಯ ಸೇವೆಯನ್ನು ಕೃಷ್ಣನಿಗೆ ಅರ್ಪಿಸುತಿದ್ದೇವೆ. ಅದರ ಫಲ ಎಲ್ಲ ಭಕ್ತರಿಗೂ ಸಿಗಲಿ ಎಂದು ಕೃಷ್ಣನಲ್ಲಿ ಪ್ರಾರ್ಥಿಸುತ್ತೇನೆ ಎಂದರು.

ಪುತ್ತಿಗೆ ಮಠದ ಕಿರಿಯಪಟ್ಟ ಶ್ರೀ ಸುಶ್ರೀಂದ್ರ ತೀರ್ಥರು ಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸ್ವಾಗತ ಸಮಿತಿ ಅಧ್ಯಕ್ಷ ಶಾಸಕ ಯಶ್‌ಪಾಲ್ ಸುವರ್ಣ ವಹಿಸಿದ್ದರು, ಸಂಸ್ಕೃತ ಕಾಲೇಜಿನ ಪ್ರಾಧ್ಯಾಪಕ ವಿದ್ವಾನ್ ಷಣ್ಮುಖ ಹೆಬ್ಬಾರ್ ಅಭಿನಂದನಾ ಭಾಷಣ ಮಾಡಿದರು.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಸ್ವಾಗತ ಸಮಿತಿ ಸಹ ಸಂಚಾಲಕ ಇಂದ್ರಾಳಿ ಜಯಕರ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಕೆದ್ಲಾಯ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ನಗರಸಭೆಯ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಸಭೆಯ ಪೌರಾಯುಕ್ತ ಮಹಾಂತೇಶ್ ಹಂಗರಗಿ ವೇದಿಕೆಯಲ್ಲಿದ್ದರು. ಹೊರೆಕಾಣಿಕೆ ಸಂಚಾಲಕ ಸುಪ್ರಸಾದ್ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್‍ಯದರ್ಶಿ ಮಟ್ಟಾರು ರತ್ನಾಕರ ಹೆಗ್ಡೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಕಾರ್‍ಯದರ್ಶಿಗಳಾದ ಮೋಹನ್ ಭಟ್, ಮಧುಕರ ಮುದ್ರಾಡಿ, ಮಾಧ್ಯಮ ಸಂಚಾಲಕ ನಂದನ್ ಜೈನ್ ಮುಂತಾದವರಿದ್ದರು.

ಹೊಸ ಇತಿಹಾಸ ನಿರ್ಮಾಣವಾಗಿದೆ: ತಾವು ಮತ್ತು ತಮ್ಮ ಶಿಷ್ಯ ಸುಶ್ರೀಂದ್ರ ತೀರ್ಥರು ಸೇರಿ ಈ ಪರ್ಯಾಯೋತ್ಸವವನ್ನು ಪೂರ್ಣಗೊಳಿಸಿದ್ದೇವೆ. ಗುರುಗಳು ಪರ್ಯಾಯ ನಡೆಸಿದರೆ ಶಿಷ್ಯರಿಗೆ ನಿರ್ಬಂಧಗಳಿಲ್ಲ. ಶಿಷ್ಯ ಪರ್ಯಾಯ ನಡೆಸಿದರೆ ಗುರುಗಳಿಗೆ ನಿರ್ಬಂಧ ಇರುವುದಿಲ್ಲ, ಆದರೆ ತಾವಿಬ್ಬರೂ ಜೊತೆಯಾಗಿ ಸಂಕಲ್ಪ ಮಾಡಿ ಪರ್ಯಾಯ ನಡೆಸಿದೆವು, ಇಬ್ಬರೂ ಕಷ್ಣಮಠದಲ್ಲಿಯೇ ಇದ್ದು, ಸುಶ್ರೀಂದ್ರರು ಮೊದಲ ದಿನದಿಂದ ಈ ದಿನವರೆಗೆ ಕೃಷ್ಣನನ್ನು ನಿತ್ಯ ಅಲಂಕರಿಸಿದ್ದಾರೆ, ತಾವು ನಿತ್ಯವೂ ಮಹಾಪೂಜೆ ನಡೆಸಿದ್ದೇವೆ, ಇದು ಕೃಷ್ಣಮಠದ ಇತಿಹಾಸದಲ್ಲೇ ಗುರು ಶಿಷ್ಯರಿಬ್ಬರೂ ಪರ್ಯಾಯವನ್ನು ನಡೆಸಿದ್ದು ಇದೇ ಪ್ರಥಮ, ದಾಖಲೆಯಾಗಿದೆ ಎಂದು ಶ್ರೀ ಸುಗುಣೇಂದ್ರ ತೀರ್ಥರು ಹೇಳಿದರು.