ಮಿನಿ ಪರ್ಯಾಯದಂತೆ ಕಂಗೊಳಿಸಿದ ಪುತ್ತಿಗೆ ಶ್ರೀ ಪುರಪ್ರವೇಶ ವೈಭವ

| Published : Jan 09 2024, 02:00 AM IST

ಮಿನಿ ಪರ್ಯಾಯದಂತೆ ಕಂಗೊಳಿಸಿದ ಪುತ್ತಿಗೆ ಶ್ರೀ ಪುರಪ್ರವೇಶ ವೈಭವ
Share this Article
  • FB
  • TW
  • Linkdin
  • Email

ಸಾರಾಂಶ

ನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿದ ಉಭಯ ಶ್ರೀಗಳನ್ನು ಅಲಂಕೃತ ಹಂಸರಥದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯ ಮೂಲಕ ಉಡುಪಿ ಪುರಪ್ರವೇಶ ಮಾಡಲಾಯಿತು. ಹತ್ತಾರು ಬಗೆಯ ಸ್ತಬ್ಧಚಿತ್ರಗಳು, ಸಮಾಜದ ವಿವಿಧ ಸಮುದಾಯಗಳ ಭಕ್ತರ ತಂಡೋಪತಂಡಗಳು, ವಾದ್ಯಘೋಷಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.

ಕನ್ನಡಪ್ರಭ ವಾರ್ತೆ ಉಡುಪಿ

ಪರ್ಯಾಯೋತ್ಸವಕ್ಕೆ ಪೂರ್ವಭಾವಿಯಾಗಿ, ಸಂಪ್ರದಾಯದಂತೆ ದೇಶದಾದ್ಯಂತ ತೀರ್ಥಕ್ಷೇತ್ರ ಸಂದರ್ಶನಗೈದು ಹಿಂತಿರುಗಿದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಮತ್ತು ಕಿರಿಯ ಪಟ್ಟ ಶ್ರೀ ಸುಶ್ರೀಂದ್ರ ತೀರ್ಥ ಶ್ರೀಪಾದರನ್ನು ಸೋಮವಾರ ಸಂಜೆಯ ಉಡುಪಿಯ ಭಕ್ತಾಭಿಮಾನಿಗಳು ವೈಭವದಿಂದ ಉಡುಪಿಗೆ ಬರಮಾಡಿಕೊಂಡರು.

ನಗರದ ಹೊರಭಾಗದ ಜೋಡುಕಟ್ಟೆಗೆ ಆಗಮಿಸಿದ ಉಭಯ ಶ್ರೀಗಳನ್ನು ಅಲಂಕೃತ ಹಂಸರಥದಲ್ಲಿ ಕುಳ್ಳಿರಿಸಿ ಭವ್ಯ ಮೆರವಣಿಗೆಯ ಮೂಲಕ ಉಡುಪಿ ಪುರಪ್ರವೇಶ ಮಾಡಲಾಯಿತು.

ಹತ್ತಾರು ಬಗೆಯ ಸ್ತಬ್ಧಚಿತ್ರಗಳು, ಸಮಾಜದ ವಿವಿಧ ಸಮುದಾಯಗಳ ಭಕ್ತರ ತಂಡೋಪತಂಡಗಳು, ವಾದ್ಯಘೋಷಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿದವು.

ಹುಲಿವೇಷಧಾರಿಗಳು, ಕೇರಳ ವಾದ್ಯ, ಚೆಂಡಬಳಗ, ಭಜನಾ ತಂಡಗಳು, ಇಸ್ಕಾನ್ ನ ಕೃಷ್ಣ ಭಕ್ತರು, ನಾಸಿಕ್ ಬ್ಯಾಂಡ್, ಸ್ಯಾಕ್ಸೋಫೋನ್, ನಾಗಸ್ವರ ಮಂಗಳವಾದ್ಯಗಳು, ಕುಣಿತದ ಭಜನೆ, ಹರಿದಾಸರು, ಮರಕಾಲುಗಳು, ಗಜರಾತಿ ದಾಂಡಿಯಾ ತಂಡಗಳು ಗಮನ ಸೆಳೆಯುತ್ತಿದ್ದವು.

ಹಯಗ್ರೀವ ದೇವರು, ಕೃಷ್ಣಸಾರಥಿ, ಕಡೆಗೋಲುಕೃಷ್ಣ, ಪಂಡಾಪುರದ ಪಾಂಡುರಂಗ ದೇವರು, ಚಿನ್ನದ ಪಲ್ಲಕ್ಕಿ, ಗರುಡವಾಹನ ವಿಷ್ಣು ಮತ್ತಿತರ ಸ್ಥಬ್ದಚಿತ್ರಗಳು ಮೆರವಣಿಗೆಗೆ ಮಿನಿ ಪರ್ಯಾಯೋತ್ಸವದ ರೂಪ ನೀಡಿದ್ದವು.

ಮಠದ ಅಭಿಮಾನಿಗಳ ಜಯಘೋಷಗಳ ನಡುವೆ ಹೂವುಗಳಿಂದ ಭವ್ಯವಾಗಿ ಅಲಂಕರಿಸಲಾಗಿದ್ದ ಹಂಸರಥದಲ್ಲಿ ವಿರಾಜಮಾನರಾಗಿದ್ದ ಉಭಯ ಶ್ರೀಗಳಿಗೆ ಭಕ್ತರು ಕೈಮುಗಿದು ಸ್ವಾಗತಿಸುತ್ತಿದ್ದರು.

ಜೋಡುಕಟ್ಟೆಯಿಂದ ಹೊರಟ ಮೆರವಣಿಗೆಯು ಕೋರ್ಟ್ ರಸ್ತೆ, ಡಯಾನವೃತ್ತ, ಕವಿ ಮುದ್ದಣ ಮಾರ್ಗ, ತ್ರಿವೇಣಿ ಮಾರ್ಗ, ಸಂಸ್ಕೃತ ಕಾಲೇಜು ಮೂಲಕ ರಥಬೀದಿಯನ್ನು ಪ್ರವೇಶಿಸಿತು. ಸಂಜೆ 6.15ಕ್ಕೆ ಶ್ರೀಗಳು ಪುತ್ತಿಗೆ ಮಠವನ್ನು ಪ್ರವೇಶಿಸಿದರು, ಅವರನ್ನು ಮಠದ ಅಧಿಕಾರಿಗಳು ವಿಧ್ಯುಕ್ತವಾಗಿ ಸ್ವಾಗತಿಸಿದರು.

ಮೆರವಣಿಗೆಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಠದ ದಿವಾಣ ನಾಗರಾಜ ಆಚಾರ್ಯ, ಶ್ರೀಗಳ ಆಪ್ತಕಾರ್ಯದರ್ಶಿ ಪ್ರಸನ್ನ ಆಚಾರ್ಯ, ಪರ್ಯಾಯ ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ರಘುಪತಿ ಭಟ್, ಪ್ರಧಾನ ಕಾರ್ಯದರ್ಶಿ ದೇವಿಪ್ರಸಾದ್ ಶೆಟ್ಟಿ ಬೆಳಪು, ಕೋಶಾಧಿಕಾರಿ ರಂಜನ್ ಕಲ್ಕೂರ, ಪ್ರಮುಖರಾದ ಬೈಕಾಡಿ ಸುಪ್ರಸಾದ್ ಶೆಟ್ಟಿ, ಮನೋಹರ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮಟ್ಟಾರ್ ರತ್ನಾಕರ ಹೆಗ್ಡೆ, ಪ್ರಸಾದ್ ರಾಜ್ ಕಾಂಚನ್, ನಗರಸಭಾ ಪೌರಾಯುಕ್ತ ರಾಯಪ್ಪ ಮುಂತಾದವರು ಭಾಗವಹಿಸಿದ್ದರು.ನ್ಯಾಯಾಲಯದಿಂದ ಒಳ್ಳೆಯ ತೀರ್ಮಾನ: ಪುತ್ತಿಗೆ ಶ್ರೀತಮ್ಮ ಪರ್ಯಾಯದ ವಿರುದ್ಧ ಹೈಕೋರ್ಟಿಗೆ ಸಲ್ಲಿಸಲಾಗಿದ್ದ ತಡೆಯಾಜ್ಞೆ ಅರ್ಜಿಯನ್ನು ತಳ್ಳಿ ಹಾಕಿದ ನ್ಯಾಯಾಲಯದ ನಡೆಯನ್ನು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಶ್ಲಾಘಿಸಿದ್ದಾರೆ.ಸೋಮವಾರ ಸಂಜೆ ತಮ್ಮ ಉಡುಪಿ ಪುರಪ್ರವೇಶದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಗಳು, ಶ್ರದ್ಧೆ ಮತ್ತು ಧಾರ್ಮಿಕ ವಿಷಯಗಳಲ್ಲಿ ತಾವು ಮಧ್ಯ ಪ್ರವೇಶ ಮಾಡುವುದಿಲ್ಲ ಎಂದು ನ್ಯಾಯಾಲಯ ಸರಿಯಾದ ತೀರ್ಮಾನವನ್ನೇ ಮಾಡಿದೆ ಎಂದು ಪ್ರತಿಕ್ರಿಯಿಸಿದರು.ಧಾರ್ಮಿಕ ವಿಚಾರಗಳು ಯಾವತ್ತೂ ಲೌಕಿಕ ನಿರ್ಬಂಧಗಳಿಗೆ ಒಳಪಡಬಾರದು ಎಂದು ನಾವು ಯಾವತ್ತೂ ಪ್ರತಿಪಾದಿಸಿದವರು. ಆಧ್ಯಾತ್ಮಿಕ ವಿಷಯಗಳು ಗಡಿಗಳಿಗೆ ಸೀಮಿತವಾಗಿರಬಾರದು, ಒಳ್ಳೆಯ ವಿಚಾರಗಳು ಎಲ್ಲಾ ಕಡೆ ಹರಡಬೇಕು, ವಿಶ್ವವ್ಯಾಪಿ ಆಗಬೇಕು ಎನ್ನುವುದು ನಮ್ಮ ಅಭಿಪ್ರಾಯ ಎಂದರು.

ಧರ್ಮದ ವಿಷಯಗಳಲ್ಲಿ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎನ್ನುವುದು ನಮ್ಮ ಭಾವನೆ, ಅದನ್ನೇ ನ್ಯಾಯಾಲವು ಹೇಳಿದೆ, ಇದು ಒಳ್ಳೆಯ ತೀರ್ಮಾನ ಎಂದ ಶ್ರೀಗಳು, ಹಿಂದೂ ಧರ್ಮ ದೇಶಾತೀತವಾಗಿದೆ, ಹಿಂದುಗಳು ವಿಶ್ವದ ಎಲ್ಲಾ ಭಾಗಗಳಲ್ಲೂ ಇದ್ದಾರೆ ಎಂದು ಅವರು ವಿದೇಶದಲ್ಲಿ ತಮ್ಮ ಧರ್ಮಪ್ರಚಾರವನ್ನು ಸಮರ್ಥಿಸಿಕೊಂಡರು.