ಪುತ್ತಿಗೆ ಶ್ರೀ ಸೋಮನಾಥೇಶ್ವರ ದೇವಳದ ಬ್ರಹ್ಮಕಲಶೋತ್ಸವ ಧಾರ್ಮಿಕ ಸಭೆ

| Published : Mar 07 2025, 12:46 AM IST

ಸಾರಾಂಶ

ಪುತ್ತಿಗೆ ಮಹೋತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮೂಡುಬಿದಿರೆ

ದಾನ ಮತ್ತು ಧರ್ಮಕ್ಕೆ ಪ್ರತೀಕವಾದ ಪರಂಪರೆಯನ್ನು ಹಿಂದೂ ಸಮಾಜ ಹೊಂದಿದೆ. ಪುತ್ತಿಗೆ ಸೋಮನಾಥೇಶ್ವರ ದೇವಳದ ಬ್ರಹ್ಮಕಲಶೋತ್ಸವ ಹಿಂದೂ ಧರ್ಮದ ಪುನರುತ್ಥಾನಕ್ಕೆ ಪ್ರೇರಣೆಯಾಗಿದೆ ಎಂದು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದ್ದಾರೆ.

ಪುತ್ತಿಗೆ ಮಹೋತೋಭಾರ ಶ್ರೀ ಸೋಮನಾಥೇಶ್ವರ ದೇವಸ್ಥಾನ ಪುನಃ ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವದ ಪ್ರಯುಕ್ತ ಬುಧವಾರ ರಾತ್ರಿ ನಡೆದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದ ಅವರು ಧಾರ್ಮಿಕ ಕ್ಷೇತ್ರಗಳ ಸಂಪತ್ತನ್ನು ಕೊಳ್ಳೆ ಹೊಡೆಯುವ ಹುನ್ನಾರ ಸರ್ಕಾರಗಳಿಂದ ನಡೆದಿದೆ ಎಂದು ಖೇದ ವ್ಯಕ್ತಪಡಿಸಿದರು.

ಮಂಗಳೂರಿನ ಡಾ. ಅರುಣ್ ಉಳ್ಳಾಲ ಧಾರ್ಮಿಕ ಉಪನ್ಯಾಸ ನೀಡಿ, ನಾವಿಂದು ಅಧುನೀಕರಣಕ್ಕೆ ತೆರೆದುಕೊಂಡಂತೆ ನಮ್ಮ ಸಂಸ್ಕೃತಿ ಮಾತ್ರವಲ್ಲ, ಊರು ಸಹಿತ ವಿವಿಧ ವಿಚಾರಗಳ ಮೂಲ ಹೆಸರುಗಳಲ್ಲಿ ಬದಲಾಯಿಸುತ್ತಿದ್ದೇವೆ. ಸಮರ್ಥ ಆಡಳಿತ ಮಂಡಳಿಯೊಂದಿಗೆ ಸಹಸ್ರಾರು ಕರಸೇವಕರು ತಮ್ಮಿಂದ ಸಾಧ್ಯವಾಗುವಷ್ಟು ಸೇವೆ ಮಾಡಿರುವುದರಿಂದ ಪುತ್ತೆ ಬ್ರಹ್ಮಕಲಶವು ಮಾದರಿ ಬ್ರಹ್ಮಕಲಶವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಮೂಡುಬಿದಿರೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯುವರಾಜ್ ಜೈನ್ , ಭಗವಂತ ನಮ್ಮಲ್ಲಿದ್ದಾನೆ. ನಮ್ಮನ್ನು ನಾವು ಭಗವಂತನಿಗೆ ಅರ್ಪಿಸಿಕೊಳ್ಳಬೇಕು. ನಮ್ಮಲ್ಲಿರುವ ಅಹಂಕಾರವನ್ನು ದೂರ ಮಾಡಿ ಸರಳ ಜೀವನವನ್ನು ಮಾಡಿದಲ್ಲಿ ದೇವರಿಗೆ ಹತ್ತಿರವಾಗುತ್ತೇವೆ ಎಂದರು.

ಜೀರ್ಣೋದ್ಧಾರ ಕೆಲಸಕ್ಕೆ ಪ್ರಥಮ ಹಂತದಲ್ಲಿ ಸಹಕರಿಸಿದ ಎಂಸಿಎಸ್ ಬ್ಯಾಂಕ್‌ನ ಅಧ್ಯಕ್ಷ ಎಂ.ಬಾಹುಬಲಿ ಪ್ರಸಾದ್ ಹಾಗೂ ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಚಂದ್ರಶೇಖರ್ ಎಂ. ಅವರನ್ನು ಸನ್ಮಾನಿಸಲಾಯಿತು. ಸ್ವಾಗತ ಗೋಪುರ ಕೊಡುಗೆ ನೀಡಿದ ಪುತ್ತಿಗೆಗುತ್ತು ನೀಲೇಶ್ ಶೆಟ್ಟಿ ಕೊಲಕಾಡಿ, ಎರಡನೇ ಅಂಗಣದ ನೆಲ ಹಾಸಿನ ಕೊಡುಗೆಯಾಗಿ ನೀಡಿದ ಪುತ್ತಿಗೆ ಮುರಂತಕೋಡಿ ವಾಸುದೇವ ಭಟ್, ಅಂಕುರ ಕೋಣೆಯ ಕೊಡುಗೆ ನೀಡಿದ ಅನಿತಾ ತಂತ್ರಿ ಪರವಾಗಿ ಶ್ರೀನಿವಾಸ ಭಟ್ , ಸೋಮನಾಥ ದೇವರ ಅಗ್ರಸಭೆಯ ಮರದ ಬಾಗಿಲನ್ನು ಒದಗಿಸಿದ ಜನಾರ್ದನ ಪ್ರಭು ಗುಡ್ಡೆಯಂಗಡಿ, ದೇವಳದ ಎದುರಿನ ಸೇತುವೆಯ ಜಾಗ ದಾನವಾಗಿ ನೀಡಿದ ನಾಗವರ್ಮ ಜೈನ್ ಅವರನ್ನು ಗೌರವಿಸಲಾಯಿತು.

ಶ್ರೀಕ್ಷೇತ್ರ ಕಟೀಲಿನ ಲಕ್ಷ್ಮೀ ನಾರಾಯಣ ಆಸ್ರಣ್ಣ, ಮೂಡುವೇಣುಪುರ ಶ್ರೀ ವೆಂಕಟರಮಣ ಹಾಗೂ ಶ್ರೀ ಹನುಮಂತ ದೇವಳಗಳ ಆಡಳಿತ ಮೊಕ್ತೇಸರ ಉಮೇಶ್ ಜಿ. ಪೈ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್ ಎಸ್.ಎಸ್, ರಾಷ್ಟ್ರೀಯ ಹೆದ್ದಾರಿ ಮಂಗಳೂರು ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಶಿವಪ್ರಸಾದ್ ಅಜಿಲ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್, ಜೀರ್ಣೋದ್ಧಾರ ಸಮಿತಿಯ ಪ್ರಮುಖ ಕೆ.ಶ್ರೀಪತಿ ಭಟ್ ಇದ್ದರು.

ಡಾ.ಯೋಗೀಶ್ ಕೈರೋಡಿ ನಿರೂಪಿಸಿದರು.