ಲಂಡನ್‌ನ ಸೈಂಟ್ ಅಲ್ಬನ್ಸ್‌ನಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಶಾಖೆಯಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಇಲ್ಲಿನ ಭಕ್ತರು ಮತ್ತು ನಗರಾಡಳಿತ ವತಿಯಿಂದ ಪೌರ ಸಮ್ಮಾನ ನಡೆಯಿತು.

ಉಡುಪಿ: ಲಂಡನ್‌ನ ಸೈಂಟ್ ಅಲ್ಬನ್ಸ್‌ನಲ್ಲಿರುವ ಉಡುಪಿ ಶ್ರೀ ಪುತ್ತಿಗೆ ಮಠದ ಶಾಖೆಯಲ್ಲಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರಿಗೆ ಇಲ್ಲಿನ ಭಕ್ತರು ಮತ್ತು ನಗರಾಡಳಿತ ವತಿಯಿಂದ ಪೌರ ಸಮ್ಮಾನ ನಡೆಯಿತು.

ಇಂಗ್ಲೆಂಡ್ ದೇಶದಾದ್ಯಂತ ನೆಲೆಸಿರುವ ಹಿಂದೂ ಬಾಂಧವರೆಲ್ಲರೂ ಸೇರಿ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಲಂಡನ್ ನ ಸೈಂಟ್ ಆಲ್ಬನ್ಸ್ ಸಿಟಿಯ ಮೇಯರ್ ಮ್ಯಾಟ್ ಫಿಷರ್ ಮತ್ತು ಕೌನ್ಸಿಲರ್ ಸೀನ್ ಹಗ್ಸ್ ಮೊದಲಾದ ಗಣ್ಯರು ಭಾಗವಹಿಸಿದರು.

ಸೈಂಟ್ ಆಲ್ಬನ್ಸ್ ಸಿಟಿ ನಗರಾಡಳಿದ ಪರವಾಗಿ ಶ್ರೀಗಳಿಗೆ ಅಭಿನಂದನಾ ಪತ್ರವನ್ನು ಸಲ್ಲಿಸಿದ ಮೇಯರ್ ಮ್ಯಾಟ್ ಫಿಷರ್, ಶ್ರೀಗಳ ಅಪೂರ್ವ ಸಾಧನೆಗಳ ಬಗ್ಗೆ ಮಾಧ್ಯಮಗಳ ತಾನೂ ತಿಳಿದು ಕೊಂಡಿದ್ದು, ಅವರಿಂದ ಪ್ರಭಾವಿತನಾಗಿದ್ದೇನೆ ಎಂದರಲ್ಲದೇ ತಮ್ಮ ನಗರದಲ್ಲಿ ಸುಂದರವಾದ ಶ್ರೀಮಠದ ಶಾಖೆಯನ್ನು ನಿರ್ಮಿಸಿದ್ದಕ್ಕೆ ಕೃತಜ್ಞತೆ ವ್ಯಕ್ತಪಡಿಸಿದರು. ನಂತರ ಮಾತನಾಡಿದ ಪುತ್ತಿಗೆ ಶ್ರೀಗಳು ಭೌಗೋಳಿಕ ಮತ್ತು ವ್ಯಾವಹಾರಿಕವಾಗಿ ಸಮಸ್ತ ದೇಶಗಳಿಗೂ ಪ್ರಧಾನ ಕೇಂದ್ರದಂತಿರುವ ಲಂಡನ್ ಮಹಾನಗರವು ಪ್ರಸ್ತುತ ಲಕ್ಷಾಂತರ ಭಾರತೀಯ ಹಿಂದೂಗಳಿಗೆ ಉದ್ಯೋಗ ಮತ್ತು ಆಶ್ರಯವನ್ನು ಕೊಟ್ಟಿದೆ. ಶ್ರೀಮಠದ ಲಂಡನ್ ಶಾಖೆ ಅವರಿಗೆ ಧರ್ಮ ಮತ್ತು ಸಂಸ್ಕಾರಗಳ ಮಾರ್ಗದರ್ಶನವನ್ನು ನೀಡುತ್ತಿದೆ. ಅವರ ಮುಂದಿನ ಪೀಳಿಗೆಯವರನ್ನೂ ಸಂಸ್ಕಾರವಂತರನ್ನಾಗಿ, ಧರ್ಮಿಷ್ಠರನ್ನಾಗಿ, ಉತ್ತಮ ನಾಗರಿಕರನ್ನಾಗಿ ಬೆಳೆಯುವಂತೆ ಮಾಡುವುದು ತಮ್ಮ ಉದ್ದೇಶವಾಗಿದೆ ಎಂದು ಹೇಳಿದರು.

ಸ್ಥಳೀಯ ಭಕ್ತರಾದ ಡಾ.ಯೋಗೀಂದ್ರ ಭಟ್ ಉಳಿ ಕಾರ್ಯಕ್ರಮ ನಿರ್ವಹಿಸಿದರು, ಕೇಶವ್ ತುಕಾರಾಮ್ ಅಭಿನಂದನಾ ಭಾಷಣ ಮಾಡಿದರು. ಶ್ರೀ ಮಠದ ಲಂಡನ್ ಶಾಖೆಯ ಅರ್ಚಕರಾದ ಗಣೇಶ್ ಭಟ್ ಮತ್ತು ಪ್ರಭಂಜನ್ ವೇದ ಘೋಷವನ್ನು ಮಾಡಿ ಗುರುವಂದನಾ ಕಾರ್ಯಕ್ರಮ ನಿರ್ವಹಿಸಿದರು. ಸ್ಥಳೀಯ ಗಣ್ಯರಾದ ಸುಬ್ರಮಣ್ಯ ರಾಮಚಂದ್ರ, ಮುಕೇಶ್ ರಾವ್, ಪ್ರವೀಣ್ ರಾವ್, ಡಾ. ಮಧು ಕೊಪ್ಪ, ನವನೀತ್ ಮುಂತಾದವರು ಪೂಜ್ಯ ಶ್ರೀಪಾದರನ್ನು ಸನ್ಮಾನಿಸಿದರು. ನಂತರ ನಿತಿನ್ ಬಾಳಿಗ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.