ಸಾರಾಂಶ
ಉಡುಪಿ ಕೃಷ್ಣಮಠದ ಪರ್ಯಾಯ ಪೀಠಾರೋಹಣ ಮಾಡಲಿರುವ ಪುತ್ತಿಗೆ ಶ್ರೀಗಳ ಪರ್ಯಾಯ ಮಹೋತ್ಸವಕ್ಕೆ ಹೊರೆಕಾಣಿಕೆ ಸಲ್ಲಿಸುವ ಸಂಬಂಧ ಕಟೀಲಿನಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಕನ್ನಡಪ್ರಭ ವಾರ್ತೆ ಮೂಲ್ಕಿ
ಕಳೆದ ಹಲವಾರು ವರ್ಷದಿಂದ ಉಡುಪಿಯ ಪರ್ಯಾಯಕ್ಕೆ ಹೊರೆಕಾಣಿಕೆ ಸಮರ್ಪಿಸುವ ಸಂಪ್ರದಾಯ ನಡೆಯುತ್ತಿದ್ದು ಹೊರೆ ಕಾಣೆಕೆ ಸಮರ್ಪಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕಟೀಲು ದೇವಳದ ಅರ್ಚಕ ಅನಂತ ಪದ್ಮನಾಭ ಆಸ್ರಣ್ಣ ಹೇಳಿದರು.ಉಡುಪಿಯ ಕೃಷ್ಣ ಮಠದಲ್ಲಿ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ನಡೆಯಲಿರುವ ಪರ್ಯಾಯ ಮಹೋತ್ಸವಕ್ಕೆ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ಸಮರ್ಪಿಸುವ ಹೊರೆಕಾಣಿಕೆ ಹಸಿರುವಾಣಿ ಮೆರವಣಿಗೆಯ ಬಗ್ಗೆ ಕಟೀಲು ದೇವಸ್ಥಾನದ ಸಭಾಭವನದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಕಟೀಲು ದೇವಸ್ಥಾನದ ಅರ್ಚಕ ವೆ. ಮೂ. ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ ೧೭ರಂದು ಕಟೀಲು ದೇವಸ್ಥಾನದದಿಂದ ಭವ್ಯ ಮೆರವಣಿಗೆಯ ಮೂಲಕ ವಿವಿಧ ವೇಷ ಭೂಷಣ ಹಾಗೂ ತರಕಾರಿ ಸಹಿತ ವಿವಿಧ ಹೊರೆಕಾಣಿಕೆಯನ್ನು ಉಡುಪಿಗೆ ಕೊಂಡುಹೋಗಲಾಗುವುದು. ಅಲ್ಲಿ ಗೋವಿಂದ ಕಲ್ಯಾಣ ಮಂಟಪದಿಂದ ಕಾಲ್ನಡಿಗೆಯಲ್ಲಿ ಹೋಗಿ ಕೃಷ್ನ ಮಠಕ್ಕೆ ತಲುಪಿಸಲಾಗುವುದು ಎಂದು ತಿಳಿಸಿದರು. ಸಭೆಯಲ್ಲಿ ಅರ್ಚಕ ವೆಂಕಟರಮಣ ಆಸ್ರಣ್ಣ, ಕಸಾಪದ ಮಾಜಿ ರಾಜ್ಯಧ್ಯಕ್ಷ ಡಾ. ಧರ್ಮದರ್ಶಿ ಹರಿಕೃಷ್ಣ ಪುನರೂರು, ಅತ್ತೂರು, ಕೊಡೆತ್ತೂರು, ಕಟೀಲು, ಶಿಬರೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ಇಂದು ಕಟೀಲು ದೇವಳಕ್ಕೆ ಪುತ್ತಿಗೆ ಶ್ರೀ ಭೇಟಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ಉಡುಪಿಯ ಭಾವಿ ಪರ್ಯಾಯ ಪೀಠಾಧೀಶ, ಪುತ್ತಿಗೆ ಮಠಾಧಿಪತಿ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ತಮ್ಮ ಶಿಷ್ಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರೊಂದಿಗೆ ಶನಿವಾರ ಬೆಳಗ್ಗೆ 10 ಗಂಟೆಗೆ ಆಗಮಿಸಲಿದ್ದಾರೆ. ಸ್ವಾಮೀಜಿ ಕಟೀಲಿಗೆ ಆಗಮಿಸಿ, ಪಟ್ಟದ ದೇವರ ಪೂಜೆಯೊಂದಿಗೆ ಆಶೀರ್ವಚನ ನೀಡಲಿದ್ದಾರೆಂದು ದೇವಳದ ಪ್ರಕಟಣೆ ತಿಳಿಸಿದೆ.