ಸಾರಾಂಶ
ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಪುತ್ತೂರಿನ ನ್ಯಾಯಾಲಯದ ಪರಾಶರ ಸಭಾಂಗಣದಲ್ಲಿ ಬುಧವಾರ ಕಾನೂನು ಮಾಹಿತಿ ಕಾರ್ಯಾಗಾರ ನೆರವೇರಿತು.
ಪುತ್ತೂರು: ಮಾನವ ಕಳ್ಳಸಾಗಣಿಕೆ ತಡೆ ದಿನಾಚರಣೆ, ಕಾನೂನು ಮಾಹಿತಿ ಕಾರ್ಯಾಗಾರ
ಪುತ್ತೂರು: ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಮಾನವರ ಕಳ್ಳ ಸಾಗಾಣಿಕೆಯು ಕಾನೂನು ಅಪರಾಧದ ಜೊತೆಗೆ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದನ್ನು ತಡೆಯಲು ಕಾನೂನುಗಳ ಜೊತೆಗೆ ಜನರ ಸಹಭಾಗಿತ್ವವೂ ಬೇಕಾಗಿದೆ ಎಂದು ದ.ಕ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಧೀಶೆ ಸರಿತಾ ಡಿ. ಹೇಳಿದ್ದಾರೆ.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ಇತರ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾನವ ಕಳ್ಳಸಾಗಾಣಿಕೆ ತಡೆ ದಿನಾಚರಣೆ ಅಂಗವಾಗಿ ಪುತ್ತೂರಿನ ನ್ಯಾಯಾಲಯದ ಪರಾಶರ ಸಭಾಂಗಣದಲ್ಲಿ ಬುಧವಾರ ನಡೆದ ಕಾನೂನು ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.ಮಹಿಳಾ ಮತ್ತು ಅನೈತಿಕ ಕಳ್ಳ ಸಾಗಣಿಕೆ ಕಾನೂನಿಂದ ಮಾತ್ರ ತಡೆಗಟ್ಟಲು ಸಾಧ್ಯವಿಲ್ಲ. ಸಾರ್ವಜನಿಕರ ಸಹಕಾರವೂ ಅಗತ್ಯ. ಸಮಾಜದ ಮುಖ್ಯ ರತ್ನವಾಗಿರುವ ಮಹಿಳೆ ಮತ್ತು ಮಕ್ಕಳು. ಅವರ ಮೇಲಿನ ಗಂಭೀರ ಅಪರಾಧ ತಡೆಯಬೇಕು. ಇಂತಹ ಅಪರಾಧ ತಡೆಯಲು ನ್ಯಾಯಾಧೀಶರಾಗಿ ನಮ್ಮ ಕರ್ತವ್ಯದ ಜೊತೆಗೆ ಸಾರ್ವಜನಿಕರ ಸಹಕಾರದ ಅಗತ್ಯವಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆ ತಡೆಯಲು ನಿಯೋಜಿಸಲ್ಪಟ್ಟ ಅಧಿಕಾರಿಗಳಿಂದ ಮಾತ್ರ ಸಾಧ್ಯವಿಲ್ಲ. ನಾವೆಲ್ಲ ಕೈ ಜೋಡಿಸಿದಾಗ ಇಂತಹ ಅಪರಾಧ ನಿರ್ಮೂಲನೆ ಆಗುತ್ತದೆ ಎಂದರು. ವಕೀಲರ ಸಂಘದ ಮಾಜಿ ಕೋಶಾಧಿಕಾರಿ ಗೌರೀಶ್ಚಂದ್ರ ಶಾನುಭೋಗ್ ಮಾತನಾಡಿ, ಮಾನವ ಕಳ್ಳಸಾಗಣಿಕೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಇಂತಹ ಅಪರಾಧ ಕಡಿಮೆ. ದೊಡ್ಡ ಪಟ್ಟಣಳಿಗೆ ವಲಸೆ ಬರುವವರು ಹೆಚ್ಚು. ಆಗ ಇಂತಹ ಘಟನೆಗಳು ಜಾಸ್ತಿ ಆಗುತ್ತದೆ. ಇತ್ತೀಚಿಗಿನ ದಿನ ಮಾದಕ ವಸ್ತು ಜಾಲ ಬಹಳ ದೊಡ್ಡ ಮಟ್ಟದಲ್ಲಿ ಪಸರಿಸಿದೆ ಎಂದರು. ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ, ಶ್ರೀ ಸರಸ್ವತಿ ಚಾರಿಟೇಬಲ್ ಟ್ರಸ್ಟ್ ವೃತ್ತಿಪರ ನಿರ್ದೇಶಕ ಬಿ. ವಸಂತಶಂಕರ ಮಾತನಾಡಿದರು.ಜೆಎಂಎಫ್‌ಸಿ ಹೆಚ್ಚುವರಿ ಹಿರಿಯ ವ್ಯವಹಾರಿಕ ನ್ಯಾಯಾಧೀಶ ದೇವರಾಜ ವೈ ಎಚ್, ಜೆಎಂಎಫ್‌ಸಿ ಪ್ರಧಾನ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ ಎಚ್.ಆರ್. ಮತ್ತಿತರರಿದ್ದರು.