ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಶಾಲಾ ಸಮಯಕ್ಕೆ ಸರಿಯಾಗಿ ಬಸ್ ಬರುತ್ತಿಲ್ಲ, ಶಾಲಾ ಕಟ್ಟಡ ಶಿಥಿಲಗೊಂಡಿದೆ, ಶೌಚಾಲಯದ ಸಮಸ್ಯೆಯಿದೆ, ಬೀದಿ ನಾಯಿಗಳಿಂದ ಉಪಟಳವಿದೆ, ಸಿಟಿ ಬಸ್ ವ್ಯವಸ್ಥೆಯ ಅಗತ್ಯವಿದೆ... ಹೀಗೆ ಹತ್ತು ಹಲವು ಬೇಡಿಕೆಗಳನ್ನು ಪುತ್ತೂರು ತಾಲೂಕಿನ ವಿವಿಧ ಶಾಲೆಗಳ ಮಕ್ಕಳು ಶಾಸಕರ ಮುಂದಿಟ್ಟು ಪರಿಹರಿಸುವಂತೆ ಆಗ್ರಹಿಸಿದರು.ಪುತ್ತೂರಿನ ಬಂಟರ ಭವನದಲ್ಲಿ ನಡೆದ ‘ಶಾಸಕರೊಂದಿಗೆ ಮಕ್ಕಳ ಸಂವಾದ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಬೇಡಿಕೆಯನ್ನು ಆಲಿಸಿದ ಶಾಸಕ ಅಶೋಕ್ ಕುಮಾರ್ ರೈ, ಬೇಡಿಕೆಗಳಿಗೆ ಪರಿಹಾರ ನೀಡುವ ಭರವಸೆಯಿತ್ತರು.ಮಕ್ಕಳ ಹಕ್ಕುಗಳ ಮಾಸೋತ್ಸವದ ಅಂಗವಾಗಿ ದ.ಕ. ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಮತ್ತು ಕೊಂಬೆಟ್ಟು ರಾಮಕೃಷ್ಣ ಪ್ರೌಢಶಾಲೆ ವತಿಯಿಂದ ಶಿಕ್ಷಣ ಸಂಪನ್ಮೂಲ ಕೇಂದ್ರ ಪುತ್ತೂರು, ಪಡಿ ಮಂಗಳೂರು, ಪುತ್ತೂರು ಲಯನ್ಸ್ ಕ್ಲಬ್, ಪುತ್ತೂರ‍್ದ ಮುತ್ತು ಲಯನ್ಸ್ ಕ್ಲಬ್ ಮತ್ತು ಆಲಂಕಾರು ದುರ್ಗಾಂಬಾ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಶಾಸಕರೊಂದಿಗೆ ಮಕ್ಕಳ ಸಂವಾದ ಕಾರ್ಯಕ್ರಮ ನಡೆಯಿತು.ಇರ್ದೆ ಉಪ್ಪಳಿಗೆ ಸರ್ಕಾರಿ ಪ್ರೌಢಶಾಲೆಯಲ್ಲಿ ೧೫೦ ವಿದ್ಯಾರ್ಥಿಗಳಿದ್ದು, ಇಲ್ಲಿ ಶೌಚಾಲಯ ಸಮಸ್ಯೆ ಇದೆ ಎಂದು ವಿದ್ಯಾರ್ಥಿ ಮುಖೇಶ್, ಆಟದ ಮೈದಾನದ ಕೊರತೆ ಇದೆ ಎಂದು ವಿದ್ಯಾರ್ಥಿನಿ ದೀಕ್ಷಾ, ಅಜ್ಜಿಕಲ್ಲಿನಿಂದ ಬರುವ ಮಕ್ಕಳಿಗೆ ಬಸ್ ವ್ಯವಸ್ಥೆಯ ಅಗತ್ಯವಿದೆ ಮತ್ತು ಚೆಲ್ಯಡ್ಕ ಸೇತುವೆ ನಿರ್ಮಾಣ ತ್ವರಿತಗತಿಯಲ್ಲಿ ಮಾಡುವಂತೆ ವಿದ್ಯಾರ್ಥಿ ಸೃಜನ್ ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಶಾಸಕರು ಕೆಎಸ್‌ಆರ್‌ಟಿಸಿಯಲ್ಲಿ ಪ್ರಸ್ತುತ ನಿರ್ವಾಹಕರ ಕೊರತೆ ಇದೆ. ಈಗಾಗಲೇ ಅವರ ನೇಮಕ ಆಗಿದೆ. ಆದರೆ ಅವರು ತರಬೇತಿಯಲ್ಲಿದ್ದಾರೆ. ಒಂದೂವರೆ ತಿಂಗಳಲ್ಲಿ ಅವರು ಕರ್ತವ್ಯಕ್ಕೆ ಹಾಜರಾಗುತ್ತಾರೆ. ಚೆಲ್ಯಡ್ಕ ಸೇತುವೆ ಕಾಮಗಾರಿ ಮೇಯಲ್ಲಿ ಪೂರ್ಣಗೊಳ್ಳುತ್ತದೆ. ಅಲ್ಲಿ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗಿದೆ ಎಂದರು.ಕುಟಿನೋಪಿನಡ್ಕದಿಂದ ಪರ್ಪುಂಜ ತನಕದ ಬಸ್ ಸೌಲಭ್ಯಗಳಿಲ್ಲ ಎಂದು ನೆಲ್ಲಿಕಟ್ಟೆ ಪ್ರೌಢಶಾಲೆಯ ಶ್ರಾವ್ಯ, ಶಾಲಾ ಆವರಣದ ಬಳಿ ಸಾರ್ವನಿಕರು ಸಿಗರೇಟ್ ಸೇದುವ ಕುರಿತು ಇಂಚರಾ, ಶಾಲೆಯ ಸ್ವಚ್ಛತೆಗೆ ನೌಕರರ ಕೊರತೆ ಇದೆ ಎಂದು ಭವ್ಯಶ್ರಿ, ಪ್ರವೇಶ ದ್ವಾರದಲ್ಲಿ ಇಂಟರ್‌ಲಾಕ್ ಅಳವಡಿಸುವಂತೆ ಅಭಿಷೇಕ್, ಬಿಸಿಯೂಟಕ್ಕೆ ಕುಚಲು ಅಕ್ಕಿ ನೀಡುವಂತೆ ಕೆಪಿಎಸ್ ಕೆಯ್ಯೂರು ಶಾಲೆಯ ಮಹಮ್ಮದ್, ಬಿಸಿಯೂಟದ ಕಟ್ಟಡ ಕೊಠಡಿ ಇಕ್ಕಾಟಾಗಿದೆ ಎಂದು ಮಹಮ್ಮದ್ ಆಬಿದ್ ಪ್ರಸ್ತಾಪಿಸಿದರು.ರಾಮಕೃಷ್ಣ ಪ್ರೌಢಶಾಲೆಯ ಅಕ್ಷಯ ಗಣೇಶ್, ಮಯೂರ ಇನ್ ಲ್ಯಾಂಡ್ ಎದುರು ವಾಹನ ದಟ್ಟಣೆ ಜಾಸ್ತಿ ಇರುವುದರಿಂದ ವಿದ್ಯಾರ್ಥಿಗಳು ರಸ್ತೆ ದಾಟಲು ಕಷ್ಟ ಸಾಧ್ಯ. ಈ ನಿಟ್ಟಿನಲ್ಲಿ ವೇಗ ನಿಯಂತ್ರಣ ಹಂಪ್ಸ್ ಅಳವಡಿಸುವಂತೆ ಪ್ರಸ್ತಾಪಿಸಿದರು. ಉತ್ತರಿಸಿದ ಶಾಸಕರು ಈ ಕುರಿತು ಸಂಚಾರ ಪೊಲೀಸರನ್ನು ನೇಮಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸುದನ್ವ ಬಿ.ಕೆ. ಮಾತನಾಡಿ, ಶಕ್ತಿ ಯೋಜನೆಯನ್ನು ಬಾಲಕರಿಗೂ ವಿಸ್ತರಿಸುವಂತೆ ಮನವಿ ಮಾಡಿದರು. ವೀಕ್ಷನ್ ಅವರು ಒಬಿಸಿ ಸ್ಕಾಲರ್ ಶಿಪ್ ಸಿಗುತ್ತಿಲ್ಲ. ಕಟ್ಟಡ ಕಾರ್ಮಿಕ ಕಾರ್ಡ್ ಇದ್ದರೂ ಸೌಲಭ್ಯ ಸಿಗುತ್ತಿಲ್ಲ ಎಂದರು. ನಿರೀಕ್ಷ ಅವರು ಮಹಾಲಿಂಗೇಶ್ವರ ದೇವಸ್ಥಾನದ ಬದಿಯ ಚರಂಡಿ ಮಳೆಗಾಲದಲ್ಲಿ ನೀರು ತುಂಬಿ ರಸ್ತೆಗೆ ಬರುತ್ತಿದೆ ಎಂದರು. ಉತ್ತರಿಸಿದ ಶಾಸಕರು ದೇವಳದ ಬಳಿ ೨ ಕೋಟಿ ರು. ಅನುದಾನದಲ್ಲಿ ಚರಂಡಿ ಸಹಿತ ಹಲವು ಕಾಮಗಾರಿಗಳನ್ನು ನಡೆಸಲು ಉದ್ದೇಶಿಸಲಾಗಿದೆ ಎಂದರು.ರಾಮಕೃಷ್ಣ ಪ್ರೌಢಶಾಲೆ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪಡಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೆನ್ನಿ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರಸಭೆ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ, ಬಂಟರ ಯಾನೆ ನಾಡವರ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಕುಂಬ್ರ ದುರ್ಗಾಪ್ರಸಾದ್ ರೈ, ಶಿಕ್ಷಣ ಸಂಪನ್ಮೂಲ ಕೇಂದ್ರ ಘಟಕ ಅಧ್ಯಕ್ಷ ಮಹಮ್ಮದ್ ರಫೀಕ್ ದರ್ಬೆ, ಶಿಕ್ಷಣ ಸಂಯೋಜಕ ಹರಿಪ್ರಸಾದ್, ಲಯನ್ಸ್ ಕ್ಲಬ್ ಅಧ್ಯಕ್ಷೆ ಪ್ರೇಮಲತಾ ರಾವ್, ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ಅಧ್ಯಕ್ಷೆ ವೇದಾವತಿ, ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ ಅಧ್ಯಕ್ಷ ಲಕ್ಷ್ಮೀನಾರಾಯಣ ಪ್ರಭು ಮತ್ತಿತರರು ಉಪಸ್ಥಿತದ್ದರು.ದ.ಕ. ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟದ ಕಾರ್ಯದರ್ಶಿ ನಯನಾ ರೈ ಸ್ವಾಗತಿಸಿದರು. ದ.ಕ. ಶಿಕ್ಷಣ ಸಂಪನ್ಮೂಲ ಕೇಂದ್ರಗಳ ಒಕ್ಕೂಟ ಅಧ್ಯಕ್ಷೆ ಕಮಲ ಗೌಡ ವಂದಿಸಿದರು. ರಾಮಕೃಷ್ಣ ಪ್ರೌಢಶಾಲೆಯ ಶಿಕ್ಷಕಿಯರಾದ ಹರ್ಷಿಣಿ, ಗಾಯತ್ರಿ ನಿರೂಪಿಸಿದರು.