ಸಾರಾಂಶ
ಮಂಗಳವಾರ ಪುತ್ತೂರಿನ ಬೈಪಾಸ್‌ನಲ್ಲಿರುವ ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಮಾವೇಶ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಭವಿಷ್ಯದ ಭಾರತಕ್ಕಾಗಿ ನರೇಂದ್ರ ಮೋದಿ ಅವರನ್ನು ಗೆಲ್ಲಿಸುವ ಎಲ್ಲಾ ಪ್ರಯತ್ನಗಳನ್ನು ನಾವು ಮಾಡಬೇಕು. ಈ ವಿಚಾರದಲ್ಲಿ ಮೈಮರೆವು ಬೇಡ. ಮೋದಿಯನ್ನು ಮತ್ತಷ್ಟು ವರ್ಷಗಳ ಕಾಲ ಪ್ರಧಾನಿಯಾಗಿರುವ ಗುರಿ, ಉದ್ದೇಶ, ಸಂಕಲ್ಪ ಮತ್ತು ಶ್ರಮ ನಮ್ಮದಾಗಬೇಕು ಎಂದು ಮೈಸೂರು- ಕೊಡಗು ಸಂಸದ ಪ್ರತಾಪ್ ಸಿಂಹ ಹೇಳಿದರು.ಅವರು ಮಂಗಳವಾರ ಪುತ್ತೂರಿನ ಬೈಪಾಸ್‌ನಲ್ಲಿರುವ ತೆಂಕಿಲ ಸ್ವಾಮಿ ಕಲಾ ಮಂದಿರದಲ್ಲಿ ನಡೆದ ಬಿಜೆಪಿ ಪುತ್ತೂರು ವಿಧಾನಸಭಾ ಕ್ಷೇತ್ರ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿ ಮಾತನಾಡಿದರು.
ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡಿ, ಹಿಂದೆ ಎನ್‌ಡಿಎ, ಯುಪಿಎಗಳು ಎಷ್ಟು ಸ್ಥಾನಗಳನ್ನು ಪಡೆಯುತ್ತವೆ ಎಂಬ ವಿಚಾರಗಳೇ ಲೋಕಸಭಾ ಚುನಾವಣೆ ಸಂದರ್ಭದ ಪ್ರಮುಖ ಚರ್ಚೆಯಾಗುತ್ತಿದ್ದರೆ ಇಂದು ಮುಂದಿನ ಬಾರಿ ಮತ್ತೆ ಮೋದಿ ಪ್ರಧಾನಿ ಎಂಬುದೇ ಪ್ರಮುಖ ವಿಚಾರವಾಗಿದೆ. ಸಾಮಾನ್ಯ ಕಾರ್ಯಕರ್ತನೂ ಲೋಕಸಭಾ ಸದಸ್ಯನಾಗಬಲ್ಲ ಏಕೈಕ ಪಕ್ಷ ಬಿಜೆಪಿ ಎಂದರು.ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಮಾತನಾಡಿ, ಯಾವ ಶಾಸಕರಿಗೂ ಬರದ ಅನುದಾನ ಪುತ್ತೂರಿಗೆ ಬಂದಿದೆ ಎನ್ನುವುದರಲ್ಲಿ ಅರ್ಥವಿಲ್ಲ. ಪುತ್ತೂರಿನಲ್ಲಿ ಪ್ರಥಮ ವಾರ್ಡ್‌ನಿಂದಲೇ ಬಿಜೆಪಿ ಪ್ರಚಾರ ಆರಂಭಿಸಬೇಕು ಎಂದರು.
ಬಿಜೆಪಿ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಅಧ್ಯಕ್ಷತೆ ವಹಿಸಿದ್ದರು. ವೇದದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕರಾದ ಸಂಜೀವ ಮಠಂದೂರು, ಮಲ್ಲಿಕಾ ಪ್ರಸಾದ್, ಪುತ್ತೂರು ವಿಧಾನಸಭಾ ಕ್ಷೇತ್ರದ ಚುನಾವಣಾ ನಿರ್ವಹಣಾ ಸಮಿತಿ ಸಂಚಾಲಕ ಚನಿಲ ತಿಮ್ಮಪ್ಪ ಶೆಟ್ಟಿ, ಬಿಜೆಪಿ ಮಂಗಳೂರು ವಿಭಾಗ ಸಹ ಸಂಚಾಲಕ ಗೋಪಾಲಕೃಷ್ಣ ಹೇರಳೆ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ ಮತ್ತಿತರರು ಉಪಸ್ಥಿತರಿದ್ದರು.ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ನಗರ ಮಂಡಲ ಅಧ್ಯಕ್ಷ ಪಿ.ಜಿ. ಜಗನ್ನಿವಾಸ್ ರಾವ್ ವಂದಿಸಿದರು. ಮಾಧ್ಯಮ ವಕ್ತಾರ ರಾಜೇಶ್ ಬನ್ನೂರು ನಿರೂಪಿಸಿದರು. ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ: ಪ್ರತಾಸ್ ಸಿಂಹಪುತ್ತೂರು: ನಾವು ಯಾರೂ ಪಕ್ಷಕ್ಕಿಂತ ದೊಡ್ಡವರಲ್ಲ. ಎಲ್ಲರಿಗಿಂತಲೂ ಪಕ್ಷ ದೊಡ್ಡದು. ಸಂಘಟನೆಯೇ ಸೆಟೆದು ನಿಂತು ಒಬ್ಬ ವ್ಯಕ್ತಿಯ ಪರವಾಗಿ ನಿಂತ ಕ್ಷೇತ್ರ ಇದ್ದರೆ ಅದು ಪುತ್ತೂರು. ನಾವು ವೈಯುಕ್ತಿಕವಾಗಿ ನಮ್ಮ ಶಕ್ತಿ ಪ್ರದರ್ಶನ ಮಾಡಬೇಕು ಅಂತ ಹೊರಟಿದ್ರೆ ನಾನೂ ಮೈಸೂರಲ್ಲಿ ಶಕ್ತಿ ಪ್ರದರ್ಶನ ಮಾಡ್ತಿದ್ದೆ ಎಂದು ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲರನ್ನು ಉದ್ದೇಶಿಸಿ ಪ್ರತಾಪ್ ಸಿಂಹ ಹೇಳಿದರು.ಪುತ್ತೂರಿನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಅರುಣ್ ಕುಮಾರ್ ಪುತ್ತಿಲರವರೇ, ನೀವು ಪುತ್ತೂರಲ್ಲಿ ಮಾಡಿದ ಶಕ್ತಿ ಪ್ರದರ್ಶನವನ್ನ ಮೈಸೂರಲ್ಲಿ ಮಾಡೋ ಅಷ್ಟೇ ಶಕ್ತಿ ನನ್ನತ್ರನೂ ಇದೆ ಆದರೆ ನಾವು ನಮ್ಮ ಶಕ್ತಿ ಪ್ರದರ್ಶನ ಮಾಡ್ಲಿಲ್ಲ, ಯಾಕಂದ್ರೆ ನಮಗೆ ಪಕ್ಷ ನಿಷ್ಠೆ ಮುಖ್ಯವಾಗಿದೆ. ಎಲ್ಲರೂ ನಿಮ್ಮೊಂದಿಗೆ ಇರುವಷ್ಟು ಪ್ರೀತಿ ವಿಶ್ವಾಸವನ್ನು ನೀವು ಕಾರ್ಯಕರ್ತರ ಜೊತೆ ಬೆಳೆಸಿಕೊಂಡಿದ್ದೀರಿ ಎಂದು ಹೇಳಿದರು.