ಪುತ್ತೂರು: ಪುರಸಭಾ ಮಾಜಿ ಅಧ್ಯಕ್ಷ ಮನೆ ಕೆಡವಿದ ಪ್ರಕರಣ ಸಂಘರ್ಷ

| Published : Feb 06 2025, 12:16 AM IST

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಜಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆಂದು ವಸತಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಕೊನೆಯದಾಗಿ ಉಳಿದಿದ್ದ ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮನೆಯನ್ನು ಮಂಗಳವಾರ ತಡರಾತ್ರಿ ತಂಡವೊಂದು ಆಗಮಿಸಿ ಕೆಡವಿದ ಪ್ರಕರಣ ನಡೆದಿದ್ದು ವಿವಾದ ಹುಟ್ಟುಹಾಕಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಕೆಲವು ದಿನಗಳಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಸಂಬಂಧಿಸಿದ ಜಾಗದಲ್ಲಿ ಅಭಿವೃದ್ಧಿ ಕಾರ್ಯಕ್ಕೆಂದು ವಸತಿಗಳ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಕೊನೆಯದಾಗಿ ಉಳಿದಿದ್ದ ಪುತ್ತೂರು ನಗರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಮನೆಯನ್ನು ಮಂಗಳವಾರ ತಡರಾತ್ರಿ ತಂಡವೊಂದು ಆಗಮಿಸಿ ಕೆಡವಿದ ಪ್ರಕರಣ ನಡೆದಿದೆ.

ಈ ಬಗ್ಗೆ ನಗರ ಠಾಣೆಯಲ್ಲಿ ರಾಜೇಶ್ ಬನ್ನೂರು ದೂರು ನೀಡಿದ್ದು, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಸಹಿತ ೧೮ ಮಂದಿಯ ವಿರುದ್ದ ಪ್ರಕರಣ ದಾಖಲಾಗಿದೆ. ಈ ನಡುವೆ ಬಿಜೆಪಿಗರು ನಗರ ಠಾಣೆಯ ಮುಂಭಾಗದಲ್ಲಿ ಧರಣಿ ನಡೆಸಿದ ಪ್ರಸಂಗವೂ ಬುಧವಾರ ನಡೆದಿದೆ.

ಅಭಿವೃದ್ಧಿ ಕಾಮಗಾರಿಯ ಹಿನ್ನಲೆಯಲ್ಲಿ ದೇವಳದ ಸುತ್ತಲಿನಲ್ಲಿರುವ ದೇವಳಕ್ಕೆ ಸಂಬಂಧಿಸಿದ ಜಾಗದಲ್ಲಿರುವ ಮನೆಗಳ ತೆರವು ಕಾರ್ಯಾಚರಣೆ ಕಳೆದ ಕೆಲ ದಿನಗಳಿಂದ ನಡೆಯುತ್ತಿದ್ದು, ಎಲ್ಲಾ ಮನೆಗಳ ತೆರವು ಕಾರ್ಯ ನಡೆದಿತ್ತು. ಆದರೆ ರಾಜೇಶ್ ಬನ್ನೂರು ಅವರಿಗೆ ಸೇರಿದ್ದು ಎನ್ನಲಾದ ಒಂದು ಮನೆ ಬಾಕಿ ಉಳಿದಿತ್ತು. ಈ ಮನೆಯನ್ನು ತಡರಾತ್ರಿ ವೇಳೆಯಲ್ಲಿ ಸುಮಾರು ೧೫ರಿಂದ ೨೦ ಮಂದಿಯಿಂದ ತಂಡವೊಂದು ಜೆಸಿಬಿಯೊಂದಿಗೆ ಆಗಮಿಸಿ ಕೆಡವಿ ಹಾಕಿರುವುದಾಗಿ ಆರೋಪಿಸಲಾಗಿತ್ತು. ರಾತ್ರಿ ವೇಳೆಯಲ್ಲಿ ಪೊಲೀಸರು, ಸಂಬಂಧಿಸಿದ ಅಧಿಕಾರಿಗಳು ಇಲ್ಲದೆ ಯಾರೋ ಆಗಮಿಸಿ ಮನೆ ಕೆಡವಿದ ಪ್ರಕರಣದ ಬಗ್ಗೆ ಪರ ಮತ್ತು ವಿರೋಧ ವ್ಯಕ್ತಗೊಂಡಿತ್ತು.

ಬಳಿಕದ ಬೆಳವಣಿಗೆಯಲ್ಲಿ ಬಿಜೆಪಿ ಮುಖಂಡರು ಪುತ್ತೂರು ನಗರ ಠಾಣೆಯಲ್ಲಿ ಜಮಾಯಿಸಿ ಆರೋಪಿಗಳ ವಿರುದ್ದ ಗೂಂಡಾ ಕಾಯ್ದೆ ದಾಖಲಿಸುವಂತೆ ಹಾಗೂ ಅವರನ್ನು ಬಂಧಿಸುವಂತೆ ಧರಣಿ ನಡೆಸಿದರು. ಪೊಲೀಸರು ಎಫ್‌ಐಆರ್ ದಾಖಲಿಸಿದ ಬಳಿಕ ಧರಣಿ ಸ್ಥಗಿತಗೊಳಿಸಲಾಯಿತು.

ಕಟೀಲ್ ಎಚ್ಚರಿಕೆ:

ಸ್ಥಳಕ್ಕೆ ಆಗಮಿಸಿದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಪ್ರಕರಣಕ್ಕೆ ಸಂಬಂಧಿಸಿ ಎಫ್‌ಐಆರ್ ದಾಖಲಾಗಿದೆ. ಮನೆ ನೆಲಸಮ ಮಾಡಲು ಬಳಸಿದ ಜೆಸಿಬಿ ಯಂತ್ರಗಳನ್ನು ಮುಟ್ಟುಗೋಲು ಹಾಕಬೇಕು. ಆರೋಪಿಗಳನ್ನು ಬಂಧಿಸಬೇಕು. ಎರಡು ದಿನಗಳಲ್ಲಿ ಸೂಕ್ತ ಕ್ರಮ ಆಗದಿದ್ದರೆ ಪ್ರತಿಭಟನೆ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು. ಇದೊಂದು ದರೋಡೆ ಪ್ರಕರಣವಾಗಿದ್ದು, ಪೊಲೀಸ್ ಇಲಾಖೆ ದರೋಡೆ ಕೇಸು ಹಾಕುವಂತೆ ಆಗ್ರಹಿಸುತ್ತೇನೆ. ಶಾಸಕರಿದ್ದರೆ ಶಾಸಕರನ್ನೂ ಸೇರಿಸಿ ಕೇಸು ಹಾಕಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಮಾತನಾಡಿ ಪುತ್ತೂರಿನಲ್ಲಿ ೨೦ ವರ್ಷಗಳ ಹಿಂದೆ ಇಂತಹ ಗೂಂಡಾಗಿರಿ ನಡೆಯುತ್ತು. ಅದನ್ನು ಇಲ್ಲಿನ ಹಿರಿಯರು ಹಿಮ್ಮೆಟ್ಟಿಸಿ ನಿಲ್ಲಿಸಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ, ಪುತ್ತೂರಿನಲ್ಲಿ ಕಾಂಗ್ರೆಸ್ ಶಾಸಕರು ಬಂದಾಗ ಮತ್ತೆ ಮರುಕಳಿಸಿದೆ ಎಂದು ದೂರಿದರು.

ನೂರಾರು ಮಂದಿ ಜಮಾವಣೆ:

ಮನೆ ನೆಲಸಮಗೊಂಡ ಸ್ಥಳದಲ್ಲಿ ಹಾಗೂ ಪೊಲೀಸ್ ಠಾಣೆ ಎದುರು ನೂರಾರು ಮಂದಿ ಜಮಾಯಿಸಿದ್ದರು. ನಗರಸಭಾ ಅಧ್ಯಕ್ಷ ಲೀಲಾವತಿ ಅಣ್ಣು ನಾಯ್ಕ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್, ನಗರ ಮಂಡಲ ಅಧ್ಯಕ್ಷ ಶಿವಕುಮಾರ್, ಪಕ್ಷದ ಪ್ರಮುಖರಾದ ಗೋಪಾಲಕೃಷ್ಣ ಹೇರಳೆ, ಚನಿಲ ತಿಮ್ಮಪ್ಪ ಗೌಡ, ಭಾಮಿ ಅಶೋಕ್ ಶೆಣೈ, ಭಾಮಿ ಜಗದೀಶ್ ಶೆಣೈ, ಸಚಿನ್ ಶೆಣೈ, ಮುರಳೀಕೃಷ್ಣ ಹಸಂತಡ್ಕ, ಅಜಿತ್ ರೈ ಹೊಸಮನೆ, ಯುವರಾಜ್ ಪೆರಿಯತ್ತೋಡಿ, ಪ್ರಶಾಂತ್ ಮಾರ್ತಾ, ಸಂತೋಷ್ ರೈ ಕೈಕಾರ, ಚಂದ್ರಶೇಖರ ಬಪ್ಪಳಿಗೆ, ವಿಶ್ವನಾಥ ಗೌಡ, ಸುಂದರ ಪೂಜಾರಿ ಬಡಾವು, ಸಾಜ ರಾಧಾಕೃಷ್ಣ ಆಳ್ವ, ಮಣಿಕಂಠ ಸೇರಿದಂತೆ ಹಲವು ಮಂದಿ ಇದ್ದರು.

ನಾವು ಮಾಡಿದ್ದಲ್ಲ-ಶಾಸಕ:

ನೆಲಸಮವಾದ ಪ್ರದೇಶಕ್ಕೆ ಶಾಸಕ ಅಶೋಕ್ ರೈ ಭೇಟಿ ನೀಡಿ ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಮನೆ ನೆಲಸಮ ಮಾಡಿರುವುದರ ಹಿಂದೆ ದೇವಸ್ಥಾನದ ಆಡಳಿತ ಮಂಡಳಿ ಇಲ್ಲ, ಯಾರೋ ಭಕ್ತರು ಮಾಡಿರುವ ಸಾಧ್ಯತೆಯಿದೆ, ಈ ಹಿಂದೆ ನನಗೆ ಹಲವು ಭಕ್ತರು ಮನೆಗಳನ್ನು ತೆರವುಗೊಳಿಸುವಂತೆ ಒತ್ತಡ ಹಾಕಿದ್ದರು. ಆದರೆ ಮಾತುಕತೆಯ ಮೂಲಕವೇ ಮನೆ ತೆರವುಗೊಳಿಸುವ ಉದ್ದೇಶ ನನ್ನಲ್ಲಿತ್ತು, ಆದರೆ ಭಕ್ತರು ಏಕಾಏಕಿ ಮನೆಯನ್ನು ನೆಲಸಮ ಮಾಡಿದ್ದಾರೆ ಎಂದಿದ್ದಾರೆ..

ಈ ಮನೆ ದೇವಸ್ಥಾನದ ಜಾಗದಲ್ಲಿದ್ದು, ಇಲ್ಲಿನ ಮನೆಗಳನ್ನು ತೆರವು ಮಾಡಲು ಎಲ್ಲರೂ ಒಪ್ಪಿ ತೆರವುಗೊಳಿಸಿದ್ದಾರೆ. ರಾಜೇಶ್ ಬನ್ನೂರು ಅವರ ಜೊತೆಗೂ ಸುಮಾರು ೧೫ ದಿನಗಳಿಂದ ಮಾತುಕತೆ ನಡೆಸುತ್ತಿದ್ದೇವೆ. ನಿನ್ನೆಯೂ ಮಾತುಕತೆಗೆ ಕರೆದಿದ್ದೆವು. ಅವರ ವಕೀಲರು ಬಂದಿದ್ದರು. ದೊಡ್ಡ ಮೊತ್ತದ ಹಣವನ್ನು ಕೇಳಿದ್ದರು ಹಾಗೂ ೩೦ ದಿವಸಗಳ ಸಮಯಾವಕಾಶ ಕೇಳಿದ್ದರು ಎಂದರು.

ಮಹಾಲಿಂಗೇಶ್ವರ ದೇವರಿಗೆ ಸುಮಾರು ಭಕ್ತರು ಇದ್ದಾರೆ. ನಾವು ೨೦೦ ಮಂದಿ ಬರುತ್ತೇವೆ, ತೆರವು ಮಾಡುತ್ತೇವೆ ಎಂದು ನಮಗೆ ಮೊನ್ನೆಯಿಂದ ಕರೆ ಬರುತ್ತಿದೆ. ವಿದೇಶದಿಂದಲೂ ಕರೆ ಮಾಡಿ ಯುವಕರ ತಂಡವಿದೆ ಎನ್ನುತ್ತಿದ್ದಾರೆ. ಜಾಗದ, ಮನೆಯ ಕಾನೂನಾತ್ಮಕ ಖಾತೆ, ದಾಖಲೆಗಳಿದ್ದರೆ ಅವರಿಗೆ ಕೋರ್ಟಿನಲ್ಲಿ ಫೈಟ್ ಮಾಡಬಹುದು. ಇನ್ನೂ ಕೋರ್ಟಿಗೆ ಹೋಗಬಹುದು. ನಾವು ಮನೆಗಳನ್ನು ತೆರವು ಮಾಡಲು ಹೋಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ದೇವಸ್ಥಾನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸದಸ್ಯ ವಿನಯ ಸುವರ್ಣ ಮತ್ತಿತರರು ಇದ್ದರು. ........................

ನಾನು ಮಂಗಳೂರು ಕೊಡಿಯಾಲ ಜಾತ್ರೆಗೆ ಹೋಗಿದ್ದೆ. ಬರುವಾಗ ಮನೆಯನ್ನು ಅರ್ಧ ನೆಲಸಮ ಮಾಡಲಾಗಿದೆ. ನಾಲಕೈದು ಮಂದಿ ನನ್ನನ್ನು ಕೈಯಲ್ಲಿ ಹಿಡಿದಿಟ್ಟುಕೊಂಡರು. ಬನಿಯಾನ್, ಚಡ್ಡಿ ಧರಿಸಿದ, ಮುಖಕ್ಕೆ ಮಾಸ್ಕ್ ಹಾಕಿದ ಸುಮಾರು ಹತ್ತಿಪ್ಪತ್ತು ಮಂದಿ ಇದ್ದರು. ಎರಡು ಜೆಸಿಬಿಯಲ್ಲಿ ಮನೆಯನ್ನು ನೆಲಸಮ ಮಾಡಲಾಗಿದೆ. ದ್ವಿಚಕ್ರದ ಕೀ, ಸುಮಾರು ೩೦ ಪವನ್ ಚಿನ್ನ, ಗಾಡ್ರೇಜ್ ಸೇರಿದಂತೆ ಅಗತ್ಯದ ವಸ್ತುಗಳು ಮಣ್ಣನಡಿಗೆ ಬಿದ್ದಿದೆ. ಮನೆಯಲ್ಲಿದ್ದ ನಾಲ್ಕು ನಾಯಿ ಮರಿಗಳು ಕಾಣಿಸುತ್ತಿಲ್ಲ.

-ರಾಜೇಶ್‌ ಬನ್ನೂರು (ದೂರಿನಲ್ಲಿ ಉಲ್ಲೇಖಿಸಿದ ಮಾಹಿತಿ).