ಕನ್ನಡಪ್ರಭವಾರ್ತೆ ಪುತ್ತೂರು
ಪುತ್ತೂರು ದಸರಾ ಕಾರ್ಯಕ್ರಮದ ವೈಭವದ ಶೋಭಾಯಾತ್ರೆ ಬುಧವಾರ ಸಂಜೆ ನಡೆಯಿತು.ಬೊಳುವಾರು ವೃತ್ತದಿಂದ ಆರಂಭಗೊಂಡ ಶ್ರೀ ಶಾರದಾ ದೇವಿಯ ವೈಭವದ ಶೋಭಾ ಯಾತ್ರೆಯನ್ನು ಕೇಸರಿ ಧ್ವಜಾರೋಹಣ ಮಾಡುವ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು ಕನ್ಯಾನ ಅವರು ಚಾಲನೆ ನೀಡಿದರು. ದ.ಕ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಯಮಿ ಸದಾಶಿವ ಶೆಟ್ಟಿ ಕೂಳೂರು . ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಹಾಗೂ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಪುಷ್ಪಾರ್ಚನೆ ಮಾಡಿದರು.
ಶ್ರೀ ಶಾರದಾ ಭಜನ ಮಂದಿರದ ಅಧ್ಯಕ್ಷ ಕೆದಂಬಾಡಿಗುತ್ತು ಸೀತಾರಾಮ ರೈ ಅವರು ತೆಂಗಿನಕಾಯಿ ಒಡೆದು ಚಾಲನೆ ನೀಡಿದರು.ಶೋಭಾಯಾತ್ರೆಯಲ್ಲಿ ಕೇರಳದ ವಿವಿಧ ಜಿಲ್ಲೆಗಳ ಸಾಂಪ್ರದಾಯಿಕ ಕಲಾತಂಡಗಳು ಹಾಗೂ ಕರ್ನಾಟಕದ ವೈವಿಧ್ಯಮಯ ವಾದ್ಯ ಮೇಳಗಳು ವಿಶೇಷ ಪ್ರದರ್ಶನ ನೀಡಿದವು. ನೂರಾರು ಕುಣಿತ ಭಜಕರು ದೇವಿಗೆ ನೃತ್ಯಾರ್ಪಣೆ ಸಲ್ಲಿಸಿದರು. ವಿಶೇಷವಾಗಿ ಕೇರಳದ ಓಣಂ ಸಂದರ್ಭದಲ್ಲಿ ಗಮನ ಸೆಳೆಯುವ ಸಾಂಪ್ರದಾಯಿಕ ಕಲಾಪ್ರಕಾರಗಳಿಗೆ ಆದ್ಯತೆ ನೀಡಲಾಗಿತ್ತು. ತ್ರಿಶೂರ್ನಿಂದ ಕರಿಂಕಾಳಿ, ಕಥಕ್ಕಳಿ ಹಾಗೂ ಕಾಳಿ ಡ್ಯಾನ್ಸ್ ತಂಡಗಳು, ಅಲೆಪ್ಪುರಂನಿಂದ ಅಗೋರಿ ತಂಡ, ಪಾಲಕ್ಕಾಡ್ ನಿಂದ ಪೂತಂ ತೇರ, ಮಲಪ್ಪುರಂನಿಂದ ತಿರುಪತಿ ಬೋರ್ಡ್, ಕಾಳ ಹಾಗೂ ಹರೆಯಣ್ಣಂ ತಂಡಗಳು, ಕಾಸರಗೋಡಿನಿಂದ ಗೊರಿಲ್ಲ ಮತ್ತು ತಂಡ, ದೇವಿ ಬೋರ್ಡ್ ಮುತ್ತು ಕೊಡೆ ಹಾಗೂ ತಾಂಬೂಲಂ ತಂಡಗಳು, ಎರ್ನಾಕುಳಂನಿಂದ ದೇವರೂಪಂ ನೃತ್ಯ ತಂಡ ಪ್ರದರ್ಶನ ನೀಡಿದವು. ವಿಶೇಷವಾಗಿ ಕಾಸರಗೋಡಿನ ತಾಂಬೂಲಂ ತಂಡ ಪುತ್ತೂರಿಗೆ ಪ್ರಥಮ ಬಾರಿಗೆ ಆಗಮಿಸಿತ್ತು. ಕರ್ನಾಟಕದ ಕಲಾತಂಡಗಳಿಂದ ಚೆಂಡೆ ವಾದನದೊಂದಿಗೆ ವಯಲಿನ್, ಕೊಳಲು ಹಾಗೂ ರಿದಂ ಪ್ಯಾಡ್ಗಳ ಸಂಗೀತ ಸಂಯೋಜನೆ ಮತ್ತು ಚೆಂಡೆಯೊಂದಿಗೆ ಕೊಂಬು ಹಾಗೂ ಸ್ಯಾಕ್ಸೋಫೋನ್ ವಾದನದ ವಿಶೇಷ ಪ್ರದರ್ಶನ ಮೆರುಗು ನೀಡಿತು.
ಮಾಜಿ ಶಾಸಕ ಸಂಜೀವ ಮಠಂದೂರು, ಉದ್ಯಮಿ ಮಿತ್ರಂಪಾಡಿ ಜಯರಾಮ ರೈ ಅಬುಧಾಬಿ, ಪ್ರಮುಖರಾದ ಮುರಳೀಕೃಷ್ಣ ಹಸಂತಡ್ಕ, ಡಾ. ಕೃಷ್ಣ ಪ್ರಸನ್ನ, ಬೂಡಿಯಾರು ರಾಧಾಕೃಷ್ಣ ರೈ, ಚನಿಲ ತಿಮ್ಮಪ್ಪ ಶೆಟ್ಟಿ, ರವೀಂದ್ರ ಶೆಟ್ಟಿ ನುಳಿಯಾಲು, ವಿದ್ಯಾ ಆರ್. ಗೌರಿ, ಸಾಜ ರಾಧಾಕೃಷ್ಣ ಆಳ್ವ, ಕಿಟ್ಟಣ್ಣ ಗೌಡ, ಶಶಿಕುಮಾರ್ ರೈ ಬಾಲ್ಯೊಟ್ಟು, ಕೃಷ್ಣ ಕುಮಾರ್ ರೈ, ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ್ ಉರ್ಲಾಂಡಿ, ಕೃಷ್ಣ ಎಂ. ಅಳಿಕೆ, ವಸಂತ್ ಕುಮಾರ್ ಮತ್ತಿತರರಿದ್ದರು.
ಶೋಭಾಯಾತ್ರೆ ಸಮಿತಿ ಸಂಚಾಲಕ ನವೀನ್ ಕುಲಾಲ್ ಕಾರ್ಯಕ್ರಮ ನಿರ್ವಹಿಸಿದರು.