ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು ಬೇಸಿಗೆ ಕಾಲ ಆರಂಭಗೊಂಡಂತೆ ಎಲ್ಲೆಡೆ ನೀರಿನ ಅಭಾವ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ತಾಲೂಕಿನ ವಿವಿಧ ಪಂಚಾಯಿತಿ ವ್ಯಾಪ್ತಿಯ ೧೬ ಕಡೆಗಳಲ್ಲಿ ಕುಡಿಯುವ ನೀರಿಗಾಗಿ ಹೊಸ ಕೊಳವೆ ಬಾವಿ ತೆರೆಯಲು ಸೋಮವಾರ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ಶಾಸಕ ಅಶೋಕ್ ರೈ ಅಧ್ಯಕ್ಷತೆಯಲ್ಲಿ ಸೋಮವಾರ ಸಂಜೆ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕಾರ್ಯಪಡೆ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಹಿರೇಬಂಡಾಡಿ ಮತ್ತು ಆರ್ಯಾಪು ಗ್ರಾಮ ಪಂಚಾಯಿತಿಗೆ ತಲಾ ೩ ಬೋರ್‌ವೆಲ್, ಅರಿಯಡ್ಕ ಪಂಚಾಯಿತಿಯ ಮಾಣಿಯಡ್ಕ ಪ್ರದೇಶಕ್ಕೆ ೧, ಕೋಡಿಂಬಾಡಿಯ ಕೊಡಿಮರದಲ್ಲಿ ೧, ಕೆಯ್ಯೂರು ಪಂಚಾಯಿತಿಯ ಬೊಳಿಕ್ಕಲದಲ್ಲಿ ೨, ಬನ್ನೂರು ಪಂಚಾಯಿತಿಗೆ ೧, ಒಳಮೊಗ್ರು ಪಂಚಾಯಿತಿಗೆ ೩ ಮಾಣಿಲ, ವಿಟ್ಲಮುಡ್ನೂರುಗಳಲ್ಲಿ ತಲಾ ೧ ಬೋರ್ ಕೊರೆಯುವ ಆವಶ್ಯಕತೆ ಬಗ್ಗೆ ಆಯಾ ಪಿಡಿಒಗಳು ಬೇಡಿಕೆ ಮುಂದಿಟ್ಟರು. ಅದರಂತೆ ಜಿಲ್ಲಾಧಿಕಾರಿಗಳಿಗೆ ಬರೆಯಲು ನಿರ್ಣಯ ಅಂಗೀಕರಿಸಲಾಯಿತು.ನರಿಮೊಗರು ಪಂಚಾಯಿತಿ ವ್ಯಾಪ್ತಿಯಲ್ಲಿ ಜೆಜೆಎಂ ಯೋಜನೆ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಒಂದೆರಡು ದಿನಗಳಲ್ಲಿ ಸಮಸ್ಯೆ ಸರಿ ಮಾಡುವಂತೆ ಶಾಸಕರು ಸೂಚಿಸಿದರು. ಕೆದಂಬಾಡಿಯ ಸನ್ಯಾಸಿಗುಡ್ಡೆಯಲ್ಲಿ ಹೊಸ ಟಿಸಿ ಅಳವಡಿಕೆ, ಕೊಡಿಪ್ಪಾಡಿಯ ಕೊಳವೆಬಾವಿ ಮರುಪೂರಣ ನಿರ್ಣಯ ಕೈಗೊಳ್ಳಲಾಯಿತು. ನೀರು ಇಲ್ಲದ ಕಡೆ ಟ್ಯಾಂಕರಗಳಲ್ಲಿ ಪೂರೈಸಬೇಕು. ಇದಕ್ಕಾಗಿ ತಾಲೂಕು ಕೇಂದ್ರದಲ್ಲಿ ಟ್ಯಾಂಕರ್ ಸನ್ನದ್ಧವಾಗಿಟ್ಟಿರಬೇಕು. ಜೆಜೆಎಂ ಸೇರಿದಂತೆ ಯಾವುದೇ ನೀರು ಪೂರೈಕೆ ಕಾಮಗಾರಿ ಕಳಪೆ ಮಾಡುವ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಗ್ರಾಮಗಳ ನೀರು ವ್ಯವಸ್ಥೆಗೆ ಆಯಾ ಪಿಡಿಒ ಮತ್ತು ಗ್ರಾಮ ಆಡಳಿತಾಧಿಕಾರಿಗಳೇ ಹೊಣೆ ವಹಿಸಿಕೊಳ್ಳಬೇಕು. ೧೧೩ ಕೋಟಿ ರುಪಾಯಿ ವೆಚ್ಚದ ಪುತ್ತೂರು ನಗರದ ಜಲಸಿರಿ ಯೋಜನೆಯ ಕಾಮಗಾರಿ ಮಾರ್ಚ್ ೩೧ರ ಒಳಗೆ ಮುಗಿಯಬೇಕು. ಏ.೧ರಿಂದ ಈ ಯೋಜನೆಯಲ್ಲಿ ನೀರು ಪೂರೈಸಬೇಕು. ಯಾವುದೇ ಕಾಮಗಾರಿ ಅಸಮಪರ್ಕವಿದ್ದರೆ ಅಂಥ ಜೆಜೆಎಂ ಯೋಜನೆಗಳನ್ನು ಪಂಚಾಯಿತಿಗಳು ಹಸ್ತಾಂತರ ಪಡೆದುಕೊಳ್ಳಬಾರದು ಎಂದು ಶಾಸಕರು ಸೂಚಿಸಿದರು. ಪಿಡಿಒಗೆ ತರಾಟೆ: ಒಳಮೊಗ್ರು ಪಂಚಾಯಿತಿಗೆ ೩ ಬೋರ್‌ವೆಲ್ ಬೇಕೆಂದು ಪಿಡಿಒ ಹೇಳಿದಾಗ, ಅಲ್ಲಿನ ಕೊಯಿಲತ್ತಡ್ಕ ಪ್ರದೇಶದ ಬೋರ್‌ವೆಲ್ ಬತ್ತಿ ಹೋಗಿ ೧೫ ದಿನಕ್ಕೊಮ್ಮೆ ನೀರು ಪೂರೈಸಲಾಗುತ್ತಿದೆ ಎಂದು ಜನ ದೂರುತ್ತಿದ್ದಾರೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಪರ್ಪುಂಜದ ಬೋರ್‌ವೆಲ್‌ನಿಂದ ಈಗ ೩ ದಿನಕ್ಕೊಮ್ಮೆ ಕೊಯಿಲತ್ತಡ್ಕ ಭಾಗಕ್ಕೆ ನೀರು ಹರಿಸುತ್ತಿದ್ದೇವೆ ಎಂದು ಪಿಡಿಒ ಮತ್ತು ಪಂಪ್ ಆಪರೇಟರ್ ಉತ್ತರಿಸಿದರು. ಬೋರ್‌ವೆಲ್ ಬತ್ತಿ ಹೋಗಿ ವರ್ಷ ಕಳೆದಿದೆ. ಇನ್ನೂ ಯಾಕೆ ಕ್ರಮ ಕೈಗೊಂಡಿಲ್ಲ ನೀವು ಪಂಪ್ ಆಪರೇಟರ್ ಮಾತು ಕೇಳಿ ಸುಮ್ಮನಿದ್ದೀರಾ ಎಂದು ಶಾಸಕರು ಪಿಡಿಒ ಅವರನ್ನು ತರಾಟೆಗೆತ್ತಿಕೊಂಡರು. ಟ್ಯಾಂಕರ್ ಮೂಲಕ ನೀರು ಕೊಡಬಹುದಲ್ವಾ ಎಂದು ಹೇಳಿದ ಅವರು, ಶನಿವಾರದ ಒಳಗೆ ಕೊಯಿಲತಡ್ಕದಲ್ಲಿ ಹೊಸ ಬೋರ್‌ವೆಲ್ ಕೊರೆಯಬೇಕು. ಗ್ರಾಪಂನಲ್ಲಿ ಹಣ ಇಲ್ಲದಿದ್ದರೆ ಹೇಳಿ, ಶಾಸಕರ ನಿಧಿಯಿಂದ ಕೊಡುತ್ತೇನೆ ಎಂದು ಹೇಳಿದರು. ಅಲ್ಲಿ ಜೆಜೆಎಂ ಯೋಜನೆಯ ಕೊಳವೆ ಬಾವಿ ಇಲ್ಲವೇ ಎಂದು ಕೇಳಿದಾಗ, ಈಗ ಪರ್ಪುಂಜದಲ್ಲಿರುವ ಜೆಜೆಎಂ ಕೊಳವೆಬಾವಿಯಿಂದಲೇ ಕೊಯಿಲತ್ತಡ್ಕಕ್ಕೆ ನೀರು ನೀಡಲಾಗುತ್ತಿದೆ ಎಂದು ಇಲಾಖೆ ಅಧಿಕಾರಿಗಳು ಉತ್ತರಿಸಿದರು. ಜಲಜೀವನ್ ಮಿಶನ್ ಯೋಜನೆಯ ಅಡಿಯಲ್ಲಿ ೨ನೇ ಹಂತದ ೩೨ ಕಾಮಗಾರಿಗಳ ಪೈಕಿ ೨೫ ಪೂರ್ಣಗೊಂಡಿದೆ. ೭ ಕಾಮಗಾರಿಗಳು ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಅನೇಕ ಕಡೆ ಸ್ಥಳೀಯ ಪಂಚಾಯಿತಿ ಬೋರ್‌ವೆಲ್ ಸುಸ್ಥಿತಿಯಲ್ಲಿದ್ದಲ್ಲಿ ಅದನ್ನೇ ಜೆಜೆಎಂ ಯೋಜನೆಗೆ ಬಳಸಿಕೊಳ್ಳಲಾಗಿದೆ. ಇಲ್ಲದ ಕಡೆ ಹೊಸ ಬೋರ್‌ವೆಲ್ ಕೊರೆಯಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿ ರೂಪ್ಲಾ ನಾಯಕ್ ಹೇಳಿದರು. ತಹಸೀಲ್ದಾರ್ ಪುರಂದರ ಹೆಗ್ಡೆ, ತಾಪಂ ಕಾರ್ಯನಿರ್ವಹಣಾ ಅಧಿಕಾರಿ ಹನುಮಂತಪ್ಪ ವೆಂಕಟಪ್ಪ ಇಬ್ರಾಹಿಂಪುರ್, ನಗರಸಭೆ ಪೌರಾಯುಕ್ತ ಮಧು ಎಸ್. ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಕ್ಷೇತ್ರ ವ್ಯಾಪ್ತಿಯ ಎಲ್ಲ ಪಂಚಾಯಿತಿಗಳ ಪಿಡಿಒಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.