ಕಟ್ಟಡ ಕಾರ್ಮಿಕರಿಗೆ ಸಿಗುವ ಸೌಲಭ್ಯ ವಿಳಂಬ ತಡೆಯಲು ಆಗ್ರಹ

| Published : Jul 09 2025, 12:18 AM IST

ಸಾರಾಂಶ

ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳು ಹಾಗೂ ಅವಲಂಬಿತರಿಗೆ ವಿವಿಧ ಸೌಲಭ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರಿನ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸೋಮವಾರ ಪುತ್ತೂರು ಸಹಾಯಕ ಕಮಿಷನರ್ ಕಚೇರಿ ಮೂಲಕ ರಾಜ್ಯ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದಿಂದ ಸಚಿವರಿಗೆ ಮನವಿ ಸಲ್ಲಿಕೆ

ಕನ್ನಡಪ್ರಭ ವಾರ್ತೆ ಪುತ್ತೂರು

ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳು ಹಾಗೂ ಅವಲಂಬಿತರಿಗೆ ವಿವಿಧ ಸೌಲಭ್ಯಗಳು ವಿಳಂಬವಾಗುತ್ತಿರುವ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪುತ್ತೂರಿನ ಕರ್ನಾಟಕ ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸೋಮವಾರ ಪುತ್ತೂರು ಸಹಾಯಕ ಕಮಿಷನರ್ ಕಚೇರಿ ಮೂಲಕ ರಾಜ್ಯ ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಾಯಿತು.ಮನವಿಯಲ್ಲಿ, ಕಟ್ಟಡ ಕಾರ್ಮಿಕರ ಮಕ್ಕಳಿಗೆ ಕಳೆದ ೪ ವರ್ಷಗಳಿಂದ ವಿದ್ಯಾರ್ಥಿವೇತನ ಸಿಗದೆ ಇರುವುದರಿಂದ ಕಾರ್ಮಿಕರ ಮಕ್ಕಳ ವಿದ್ಯಾಭಾಸಕ್ಕೆ ತುಂಬಾ ತೊಂದರೆಯಾಗಿದ್ದು, ಮಕ್ಕಳು ಉನ್ನತ ವಿದ್ಯಾಭ್ಯಾಸ ಮುಂದುವರಿಸುವ ಕಸನು ನುಚ್ಚು ನೂರಾಗಿದೆ. ಕಟ್ಟಡ ಕಾರ್ಮಿಕರಿಗೆ ಸಿಗುತ್ತಿರುವ ಚಿಕಿತ್ಸಾ ಸೌಲಭ್ಯವು ಕಡಿಮೆಯಾಗುತ್ತಿದ್ದು ಅಂದಾಜು ೩ ಲಕ್ಷ ರು. ಚಿಕಿತ್ಸಾ ವೆಚ್ಚವಾದಲ್ಲಿ ಮಂಡಳಿಯಿಂದ ಕೇವಲ ೩೦ ಸಾವಿರ ರು. ಮಾತ್ರ ಮಂಜೂರಾಗುತ್ತಿದೆ. ಮಂಡಳಿಯಿಂದ ನೀಡಲಾಗುತ್ತಿರುವ ಎಲ್ಲಾ ಟೂಲ್‌ಕಿಟ್‌ಗಳು ಕಳಪೆ ಮಟ್ಟದ್ದಾಗಿದ್ದು ಹಾಗೂ ಇದರಲ್ಲಿ ಕಾರ್ಮಿಕರಿಗೆ ಉಪಯೋಗವಾಗದ ಅನಗತ್ಯ ವಸ್ತುಗಳು ಸರಬರಾಜಾಗುತ್ತಿದೆ. ಕಿಟ್‌ಗಳ ಬದಲಾಗಿ ಅದರ ಸಹಾಯಧನವನ್ನು ಕಾರ್ಮಿಕನ ಖಾತೆಗೆ ನೇರವಾಗಿ ಜಮಾ ಮಾಡಬೇಕು. ಇದರಿಂದ ಕಾರ್ಮಿಕರಿಗೆ ಬೇಕಾಗುವ ಉತ್ತಮ ಗುಣಮಟ್ಟದ ಸಲಕರಣೆಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಲಾಯಿತು.ಕಟ್ಟಡ ಕಾರ್ಮಿಕರಿಗೆ ಪ್ರತೀ ತಿಂಗಳು ಸಿಗುತ್ತಿರುವ ನಿವೃತ್ತಿ ವೇತನವು ಕಾರ್ಮಿಕರ ಖಾತೆಗೆ ೪-೫ ತಿಂಗಳ ಅನಂತರ ಜಮೆಯಾಗುತ್ತಿದ್ದು ಇದರಿಂದ ಕಾರ್ಮಿಕನಿಗೆ ಔಷಧಿ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಖರೀದಿಸಲು ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಪ್ರತೀ ತಿಂಗಳು ಕಾರ್ಮಿಕರ ಖಾತೆಗೆ ಜಮಾ ಆಗುವಂತೆ ವ್ಯವಸ್ಥೆಗೊಳಿಸಬೇಕು. ಕನ್ನಡ ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರಿಗೆ ನಡೆಸಲಾಗುವ ಆರೋಗ್ಯ ತಪಾಸಣೆ, ರಕ್ತ ತಪಾಸಣೆ ಹಾಗೂ ಇತರ ಆರೋಗ್ಯ ತಪಾಸಣಾ ಶಿಬಿರಗಳನ್ನು ನಡೆಸಲು ಖಾಸಗಿ ಏಜೆನ್ಸಿಗಳಿಗೆ ನೀಡುವ ಬದಲಾಗಿ ನೋಂದಾಯಿತ ಕಟ್ಟಡ ಕಾರ್ಮಿಕ ಸಂಘಗಳ ಮೂಲಕ ಚಿಕಿತ್ಸಾ ಶಿಬಿರವನ್ನು ನಡೆಸಿ ಅದಕ್ಕೆ ತಗಲುವ ವೆಚ್ಚವನ್ನು ಕಾರ್ಮಿಕ ಇಲಾಖೆಯ ಮೂಲಕ ನೇರವಾಗಿ ಕಾರ್ಮಿಕ ಸಂಘಗಳ ಬ್ಯಾಂಕ್ ಖಾತೆಗೆ ಜಮೆ ಮಾಡುವಂತೆ ವ್ಯವಸ್ಥೆಗೊಳಿಸಬೇಕು. ಮಂಡಳಿಯಲ್ಲಿ ನೋಂದಣಿಯಾಗಿರುವ ಅಕ್ರಮ ಕಟ್ಟಡ ಕಾರ್ಮಿಕರನ್ನು ನಿರ್ಮೂಲನೆ ಮಾಡಲು ಇನ್ನಷ್ಟು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳಬೇಕು, ಹಾಗೂ ಪ್ರತಿಯೊಬ್ಬ ಕಾರ್ಮಿಕನನ್ನು ಕಾರ್ಮಿಕ ನಿರೀಕ್ಷಕರ ಮೂಲಕ ಪರಿಶೀಲನೆ ನಡೆಸಿ ನೋಂದಾಯಿಸಿಕೊಳ್ಳಬೇಕು ಸೇರಿ ವಿವಿಧ ಬೇಡಿಕೆಗಳ ಮನವಿ ಸಲ್ಲಿಸಲಾಯಿತು.ಕಲ್ಲು, ಮರಳಿಲ್ಲದೆ ಸಮಸ್ಯೆ ಕಟ್ಟಡ ಕಾರ್ಮಿಕರು ದಿನ ನಿತ್ಯದ ದುಡಿಮೆಯಿಂದಲೇ ಕಾರ್ಮಿಕರು ಮತ್ತು ಅವರ ಅವಲಂಬಿತರು ಜೀವನ ನಡೆಸುತ್ತಿದ್ದು ಪ್ರಸ್ತುತ ಕೆಂಪು ಕಲ್ಲು ಮತ್ತು ಮರಳು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಿಗದಿರುವುದರಿಂದ ಬಡ ಕಾರ್ಮಿಕರಿಗೆ ತುಂಬಾ ತೊಂದರೆಯಾಗಿದೆ. ನಿತ್ಯ ಕೆಲಸವನ್ನೇ ನಂಬಿ ಜೀವನ ನಡೆಸುವ ಕಾರ್ಮಿಕರಿಗೆ ಪ್ರಸ್ತುತ ಕಲ್ಲು ಮತ್ತು ಮರಳು ಸಿಗದಿರುವುದರಿಂದ ಕೆಲಸವಿಲ್ಲದಂತಾಗಿದೆ. ಇದರ ಬಗ್ಗೆ ಪರಿಶೀಲನೆ ನಡೆಸಿ ಕೆಂಪು ಕಲ್ಲು ಮತ್ತು ಮರಳು ಶೀಘ್ರವಾಗಿ ಸಿಗುವಂತೆ ವ್ಯವಸ್ಥೆಗೊಳಿಸಬೇಕು. ಹಾಗೂ ಸರಕಾರದ ವತಿಯಿಂದ ತೆರಿಗೆ ಹೆಚ್ಚಳ ಮಾಡಲಾಗಿದ್ದು ಇದನ್ನು ಕೂಡಲೇ ಕಡಿಮೆಗೊಳಿಸಬೇಕು ಮತ್ತು ಕೆಂಪು ಕಲ್ಲಿಗೆ ತೆರಿಗೆ ಮತ್ತು ಪರವಾನಗಿ ದರ ಹೆಚ್ಚಳ ಮಾಡಿರುವುದನ್ನು ಕೂಡಲೇ ಕಡಿಮೆಗೊಳಿಸಿ ಕಾರ್ಮಿಕರಿಗೆ ಮತ್ತು ಬಡ ವರ್ಗದವರಿಗೆ ಆಗುತ್ತಿರುವ ತೊಂದರೆ ಕೂಡಲೇ ಸರಿಪಡಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಸಂಘದ ಸಲಹೆಗಾರ ಕೆ. ಜಯರಾಮ ಕುಲಾಲ್, ಜಿಲ್ಲಾಧ್ಯಕ್ಷ ರಾಜೇಶ್ ಪೂಜಾರಿ, ಕಾರ್ಯಾಧ್ಯಕ್ಷ ಶೇಷಪ್ಪ ಕುಲಾಲ್, ಪ್ರಧಾನ ಕಾರ್ಯದರ್ಶಿ ಎಂ. ಮೋಹನ್ ಆಚಾರ್ಯ, ಕೋಶಾಧಿಕಾರಿ ಈಶ್ವರ ನಾಯ್ಕ, ಉಪಾಧ್ಯಕ್ಷ ವಿಶ್ವನಾಥ ಬೆಳ್ಳಿಪ್ಪಾಡಿ, ಸಂಘಟನಾ ಕಾರ್ಯದರ್ಶಿ ಚೆನ್ನಪ್ಪ ಮಚ್ಚಿಮಲೆ ಮತ್ತಿತರರಿದ್ದರು.