ಪುತ್ತೂರು ಜಾತ್ರೆ: ಈ ಬಾರಿ 110 ಹೆಚ್ಚುವರಿ ಅಂಗಡಿಗಳಿಗೆ ಅವಕಾಶ

| Published : Apr 09 2025, 12:46 AM IST

ಪುತ್ತೂರು ಜಾತ್ರೆ: ಈ ಬಾರಿ 110 ಹೆಚ್ಚುವರಿ ಅಂಗಡಿಗಳಿಗೆ ಅವಕಾಶ
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವದ ಹಿನ್ನಲೆಯಲ್ಲಿ ಜಾತ್ರಾ ಸಂದರ್ಭ ಎಲ್ಲಾ ವ್ಯಾಪಾರಿಗಳಿಗೂ ಅಂಗಡಿ ನಡೆಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ ಕೇವಲ ೨೫೦ ಅಂಗಡಿಗಳಿದ್ದವು. ಆದರೆ ಈ ಬಾರಿ ೧೧೦ ಹೆಚ್ಚುವರಿ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರಾಮಹೋತ್ಸವದ ಹಿನ್ನಲೆಯಲ್ಲಿ ಜಾತ್ರಾ ಸಂದರ್ಭ ಎಲ್ಲಾ ವ್ಯಾಪಾರಿಗಳಿಗೂ ಅಂಗಡಿ ನಡೆಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗಿದೆ. ಕಳೆದ ಬಾರಿ ಕೇವಲ ೨೫೦ ಅಂಗಡಿಗಳಿದ್ದವು. ಆದರೆ ಈ ಬಾರಿ ೧೧೦ ಹೆಚ್ಚುವರಿ ಅಂಗಡಿಗಳಿಗೆ ವ್ಯವಸ್ಥೆ ಮಾಡಲಾಗಿದೆ. ಒಬ್ಬ ವ್ಯಕ್ತಿಗೆ ಕೇವಲ ೨ ಅಂಗಡಿಗಳನ್ನು ಮಾತ್ರ ನೀಡಲಾಗುತ್ತದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಹೇಳಿದರು.

ಜಾತ್ರೋತ್ಸವದ ಸಲುವಾಗಿ ದೇವಳದ ಸಭಾಭವನದಲ್ಲಿ ನಡೆದ ತಾತ್ಕಾಲಿಕ ಏಲಂ ಪ್ರಕ್ರಿಯೆಗಳಿಗೆ ಚಾಲನೆ ನೀಡಿ ಮಾತನಾಡಿದರು. ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನೀವಾಸ ರಾವ್ ಅವರು ಸೇವಾರೂಪದಲ್ಲಿ ಈ ತಾತ್ಕಾಲಿಕ ಅಂಗಡಿಗಳಿಗೆ ಮಾರ್ಕಿಂಗ್ ಮಾಡಿಕೊಟ್ಟಿದ್ದಾರೆ. ಯಾವುದೇ ತೊಂದರೆ ಉಂಟಾದರೂ ದೇವಳದ ಕಚೇರಿ ಅಥವಾ ನನ್ನನ್ನು ನೇರವಾಗಿ ಸಂಪರ್ಕಿಸಿ ಎಂದು ಅವರು ವ್ಯಾಪಾರಿಗಳಿಗೆ ತಿಳಿಸಿದರು.

ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ನಳಿನಿ ಪಿ ಶೆಟ್ಟಿ, ದಿನೇಶ್ ಪಿ.ವಿ, ಈಶ್ವರ ಬೇಡೆಕರ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ವಾಸ್ತು ಇಂಜಿನಿಯರ್ ಪಿ.ಜಿ.ಜಗನ್ನಿವಾಸ ರಾವ್ ಏಲಂ ನಿಯಮಗಳನ್ನು ಸಭೆಗೆ ಮಂಡಿಸಿದರು. ಗಿರೀಶ್ ಕುಮಾರ್ ಏಲಂ ಕೂಗುವ ಪ್ರಕ್ರಿಯೆ ನಡೆಸಿದರು.

ದೇವಳದ ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಸಚಿನ್, ಯಶವಂತ, ದಿನೇಶ್ ಬಿಡ್ಡುದಾರರ ಇಎಂಡಿ ಮೊತ್ತ ಸಂಗ್ರಹಿಸುವ ಪ್ರಕ್ರಿಯೆ ನಡೆಸಿದರು. ಕೋಟಿಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಉದ್ಯಮಿ ರೋಶನ್ ರೈ ಬನ್ನೂರು, ನವೀನ್‌ಚಂದ್ರ, ವಿದ್ಯಾಮಾತ ಅಕಾಡೆಮಿಯ ಅಧ್ಯಕ್ಷ ಭಾಗ್ಯೇಶ್ ರೈ ಭಾಗಿಯಾಗಿದ್ದರು.

ಬಿಡ್ಡು ಮೊತ್ತವನ್ನು ಏಲಂ ನಡೆದ ದಿನದಂದೇ ಪೂರ್ತಿಯಾಗಿ ಪಾವತಿಸಬೇಕು. ತಪ್ಪಿದಲ್ಲಿ ಮುಂಗಡ ಠೇವಣಿ ಮೊಬಲಗನ್ನು ಮುಟ್ಟುಗೋಲು ಹಾಕಿ ಮರು ಹರಾಜು ಮಾಡಲಾಗುವುದು. ವೆಂಕಟ್ರಮಣ ದೇವಸ್ಥಾನದಿಂದ ರಥಬೀದಿಗೆ ಬರುವ ಕಂಬಳ ಗದ್ದೆಯ ಜಾಗದಲ್ಲಿ ಹಾಗೂ ಕಂಬಳದ ಸ್ಟೇಜಿನ ೪ ಬದಿಯಲ್ಲಿ ಅನಧಿಕೃತವಾಗಿ ಯಾವುದೇ ಸ್ಟಾಲ್ ಮತ್ತು ಐಸ್‌ಕ್ರೀಮ್ ಮಾರಾಟಕ್ಕೆ ನಿಷೇಧ.

ಸಂತೆ ಸ್ಥಳದಲ್ಲಿ ಜೂಜು, ಜುಗಾರಿ, ಲಕ್ಕಿಡಿಪ್, ಮಾಂಸದ ಹೊಟೇಲ್ ನಡೆಸುವುದಕ್ಕೆ ಅವಕಾಶ ಇಲ್ಲ. ಧ್ವನಿ ವರ್ಧಕ ಬಳಕೆಗೆ ಅನುಮತಿ ಕಡ್ಡಾಯ. ಕರ್ಕಶವಾಗಿ ಧ್ವನಿ ಬಿತ್ತರಿಸುವ ಧ್ವನಿವರ್ಧಕಗಳಿಗೆ ಅವಕಾಶ ನಿರಾಕರಣೆ. ಸ್ಟಾಲ್‌ನ ಹೊರಗಡೆ ಬಾಡಿಗೆ ಜನರೇಟರ್ ಅಳವಡಿಸಬಾರದು, ಜನರೇಟರ್ ಜೋಡಣೆಗೆ ಕಚೇರಿಯಿಂದ ಅಥವಾ ಅವಶ್ಯ ಬಿದ್ದಲ್ಲಿ ಮೆಸ್ಕಾಂನಿಂದ ಪರವಾನಗಿ ಪಡೆಯಬೇಕು. ಅಂಗಡಿಯ ಮುಂದೆ ಕಚೇರಿಯಿಂದ ನೀಡುವ ಪರವಾನಿಗೆ ಪತ್ರ, ಭಾವಚಿತ್ರವನ್ನು ಕಡ್ಡಾಯವಾಗಿ ತೂಗು ಹಾಕತಕ್ಕದ್ದು, ಒಳ ಬಾಡಿಗೆಗೆ ಅವಕಾಶ ಇಲ್ಲ. ಒಂದುವೇಳೆ ಒಳಬಾಡಿಗೆ ನೀಡಿರುವುದು ಕಂಡುಬಂದರೆ ಪರವಾನಗಿ ರದ್ದು ಮಾಡಲಾಗುವುದು ಎಂದು ಮಾಹಿತಿ ನೀಡಲಾಯಿತು.