ಪುತ್ತೂರು ಜಾತ್ರೆ: ಅನ್ನಪ್ರಸಾದ ವಿತರಣೆ ಚಪ್ಪರ ಮುಹೂರ್ತ

| Published : Mar 25 2025, 12:50 AM IST

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು, ಸೋಮವಾರ ದೇವದ ಕೆರೆಯ ಬಳಿಯಲ್ಲಿನ ವಿಶಾಲ ಜಾಗದಲ್ಲಿ ಅನ್ನಪ್ರಸಾದ ವಿತರಣೆಗಾಗಿ ಚಪ್ಪರ ಮುಹೂರ್ತ ನಡೆಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ವಾರ್ಷಿಕ ಜಾತ್ರೋತ್ಸವಕ್ಕೆ ಸಿದ್ಧತೆ ಆರಂಭಗೊಂಡಿದ್ದು, ಸೋಮವಾರ ದೇವರ ಕೆರೆಯ ಬಳಿಯಲ್ಲಿನ ವಿಶಾಲ ಜಾಗದಲ್ಲಿ ಅನ್ನಪ್ರಸಾದ ವಿತರಣೆಗಾಗಿ ಚಪ್ಪರ ಮುಹೂರ್ತ ನಡೆಯಿತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ತೆಂಗಿನ ಕಾಯಿ ಒಡೆಯುವ ಮೂಲಕ ಚಪ್ಪರ ಮುಹೂರ್ತಕ್ಕೆ ಚಾಲನೆ ನೀಡಿದರು.

ಜಾತ್ರೋತ್ಸವದ ಅಂಗವಾಗಿ ಈಗಾಗಲೇ ರಥ ಮಂದಿರದಲ್ಲಿದ್ದ ಮಹಾರಥ ರಥಬೀದಿಗೆ ತಂದಿರಿಸಲಾಗಿದೆ. ಆಮಂತ್ರಣ ಪತ್ರ ಬಿಡುಗಡೆಗೊಳಿಸಲಾಗಿದೆ.

ದೇವಸ್ಥಾನದಲ್ಲಿ ಜಾತ್ರೆಯ ಸಂದರ್ಭದಲ್ಲಿ ಅನ್ನದ ಅಗಳುಗಳು ಮುತ್ತಾದ ಕೆರೆಯ ಬಳಿಯೇ ಇದೀಗ ಅನ್ನದಾನದ ವ್ಯವಸ್ಥೆ ಮಾಡಲಾಗುತ್ತಿದ್ದು, ಅನ್ನದಾನಕ್ಕಾಗಿ ಸುಮಾರು ೨೦ಸಾವಿರ ಚದರ ಅಡಿಯ ಬೃಹತ್ ಚಪ್ಪರ ಸಜ್ಜುಗೊಳ್ಳಲಿದೆ. ಜೊತೆಗೆ ತಂತ್ರಿ, ವೈದಿಕರಿಗೆ, ಪ್ರಮುಖರಿಗೆ ಕೆರೆಯ ಬಳಿ ಪಾರ್ಕಿಂಗ್ ವ್ಯವಸ್ಥೆ ಸಜ್ಜುಗೊಳ್ಳುತ್ತಿದ್ದು, ದೇವಸ್ಥಾನದ ಮುಂಬಾಗದಲ್ಲಿರುವ ನಟರಾಜ ವೇದಿಕೆಯಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ.

ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಗ್ಗಿನ ಪೂಜೆ, ನಿತ್ಯ ಬಲಿಯ ಬಳಿಕ ದೇವಳದ ಕೆರೆಯ ಬಳಿ ನೈರುತ್ಯ ಭಾಗದಲ್ಲಿ ಚಪ್ಪರ ಮುಹೂರ್ತ ನಡೆಯಿತು. ದೇವಳದ ಪ್ರಧಾನ ಅರ್ಚಕ ವ್ಯವಸ್ಥಾಪನಾ ಸಮಿತಿ ಸದಸ್ಯ ವೇದಮೂರ್ತಿ ವಸಂತ ಕೆದಿಲಾಯ ಪೂಜಾ ವಿಧಿವಿಧಾನ ನೆರವೇರಿಸಿದರು. ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಈಶ್ವರ ಬೇಡೆಕರ್, ಸುಭಾಶ್ ರೈ ಬೆಳ್ಳಿಪ್ಪಾಡಿ, ಕೃಷ್ಣವೇಣಿ ಸಾಥ್ ನೀಡಿದರು.

ಪ್ರಶಾಂತ್ ಭಟ್ ಅವರು ಅರ್ಚಕರಿಗೆ ಸಹಾಯಕರಾಗಿದ್ದರು. ಚಪ್ಪರ ಮುಹೂರ್ತ ಕೊನೆಯಲ್ಲಿ ಚಪ್ಪರ ನಿರ್ಮಾಣ ಕಾರ್ಯದ ವಿಜಯಶ್ರೀ ಶಾಮಿಯಾನದ ಮಾಲಕರಿಗೆ ಚಪ್ಪರದ ನಿರ್ಮಾಣದ ಕುರಿತು ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಿಂದ ಸಲಹೆ ನೀಡಲಾಯಿತು. ದೇವಳದ ವಾಸ್ತು ಇಂಜಿನಿಯರ್ ಪಿ.ಜಿ. ಜಗನ್ನಿವಾಸ್ ರಾವ್ ಚಪ್ಪರಕ್ಕೆ ಮಾರ್ಕಿಂಗ್ ಮಾಡಿದರು.

ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಸದಸ್ಯೆ ವೀಣಾ ಬಿ.ಕೆ, ಯಕ್ಷಧ್ರುವ ಪಟ್ಟ ಫೌಂಡೇಶನ್ ಟ್ರಸ್ಟ್‌ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ ರೈ ದೇರ್ಲ, ಉಪಾಧ್ಯಕ್ಷ ನುಳಿಯಾಲು ರವೀಂದ್ರ ಶೆಟ್ಟಿ, ಟ್ರಸ್ಟಿಗಳಾದ ನೋಣಾಲು ಜೈರಾಜ್ ಭಂಡಾರಿ, ಯಂ ದತ್ತಾತ್ರೆಯ ರಾವ್, ಜಯಕುಮಾರ್ ರೈ ಮಿತ್ರಂಪಾಡಿ, ಚಂದ್ರಹಾಸ ರೈ, ನುಳಿಯಾಲು ಸುಜೀರ್ ಶೆಟ್ಟಿ, ವಿಶ್ವನಾಥ್ ನಾಯ್ಕ್ ಮತ್ತಿತರರು ಇದ್ದರು.