ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಹಲವು ವರ್ಷಗಳಿಂದ ಬಾಕಿಯಿರುವ ಅಕ್ರಮ-ಸಕ್ರಮ ಅರ್ಜಿಗಳನ್ನು ಕೂಡಲೇ ವಿಲೇವಾರಿ ಮಾಡಬೇಕು. ಕುಮ್ಕಿ ಹಕ್ಕು ಅನುಭವಿಸುತ್ತಿರುವವರಿಗೆ ಭೂಮಿಯನ್ನು ಮಂಜೂರುಗೊಳಿಸಬೇಕು ಎಂದು ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು ಆಗ್ರಹಿಸಿದ್ದಾರೆ.ಅವರು ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ದ.ಕ ಜಿಲ್ಲಾ ಸಮಿತಿಯಿಂದ ದ.ಕ ಜಿಲ್ಲೆಯ ರೈತರ ಹಲವಾರು ವರ್ಷಗಳಿಂದ ಇರುವ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ತಾಲೂಕು ಆಡಳಿತ ಸೌಧದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಹವಾಮಾನ ವೈಪರೀತ್ಯ ಹಾಗೂ ಪ್ರಾಕೃತಿಕ ವಿಕೋಪದಿಂದ ಶೇ.೭೫ ರೈತರು ನಷ್ಟ ಉಂಟಾಗಿದ್ದು ಪ್ರತಿ ಎಕರೆಗೆ ರು.೧ ಲಕ್ಷ ಪರಿಹಾರ ಘೋಷಿಸಬೇಕು. ಯಶಸ್ವಿನಿ ಯೋಜನೆಯನ್ನು ತಾಲೂಕಿನ ಎಲ್ಲಾ ಆಸ್ಪತ್ರೆಗಳಿಗೂ ಅನ್ವಯಿಸಬೇಕು. ಮೈಕ್ರೋ ಫೈನಾನ್ಸ್ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು, ಕೃಷಿಕರಿಗೆ ನೀಡಿರುವ ಸಾಲಗಳನ್ನು ಸಂಪೂರ್ಣ ಮನ್ನಾ ಮಾಡಿ ಋಣಮುಕ್ತಗೊಳಿಸಬೇಕು. ಜಿಲ್ಲೆಯಲ್ಲಿ ಹಾದುಹೋಗುತ್ತಿರುವ ೪೦೦ಕೆ.ವಿ ವಿದ್ಯುತ್ ಪ್ರಸರಣದ ಮಾರ್ಗವನ್ನು ಸ್ಥಗಿತಗೊಳಿಸಿ ಪರ್ಯಾಯ ಮಾರ್ಗದ ಮೂಲಕ ನಡೆಸಬೇಕು. ಮಾಡಾವು-ಸುಳ್ಯ ೧೧೦ ಕೆ.ವಿ ವಿದ್ಯುತ್ ಪ್ರಸರಣದ ಮಾರ್ಗವನ್ನು ಜಂಟಿ ಸರ್ವೆ ನಡೆಸಿ ಕಾರ್ಯಗತಗೊಳಿಸಬೇಕು. ಕೋವಿ ಪರವಾಣಿಗೆಯನ್ನು ವಂಶ ಪಾರಂಪರ್ಯಗತವಾಗಿ ಬದಲಾವಣೆಗೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದರು. ರೈತ ಸಂಘದ ರಾಜ್ಯ ಕಾರ್ಯದರ್ಶಿ ಮನೋಹರ್ ಶೆಟ್ಟಿ ಮಾತನಾಡಿ, ರೈತರು ಮಳೆ, ಬಿಸಿಲು ಎನ್ನದೆ ವರುಷವಿಡೀ ಕಷ್ಟು ದುಡಿದು ಕೃಷಿ ಉಳಿಸುತ್ತಿದ್ದರೆ ಅಧಿಕಾರಿಗಳು ಹಾಗೂ ನಮ್ಮಂದಿ ಆಯ್ಕೆಯಾಗಿ ಹೋದ ಜನಪ್ರತಿನಿಧಿಗಳು ಎಸಿ ರೂಂನಲ್ಲಿ ಕುಳಿತು ರೈತರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ರೈತರಿಗೆ ತೊಂದರೆ ಅಗದಂತೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ನಡೆದರೆ ಉತ್ರಮ. ಇಲ್ಲದಿದ್ದರೆ ಎಲ್ಲರನ್ನು ಒಟ್ಟು ಸೇರಿ ತೀವ್ರ ಹೋರಾಟ ನಡೆಸಲಿದ್ದೇವೆ ಎಂದು ಎಚ್ಚರಿಸಿದರು.
ಸವಣೂರು ವಲಯದ ಗೌರವಾಧ್ಯಕ್ಷ ಶಿವಣ್ಣ ಇಡ್ಯಾಡಿ, ವಿದ್ಯುತ್ ಹೋರಾಟ ಸಮಿತಿ ಅಧ್ಯಕ್ಷ ರಾಜೀವ್ ಗೌಡ, ರೈತ ಮುಖಂಡ ಮುರುವ ಮಹಾಬಲ ಭಟ್, ರಾಮಣ್ಣ ಶೆಟ್ಟಿ ಪಾಲಿಕೆ ಮಾತನಾಡಿ ಸರ್ಕಾರದ ಬೇಡಿಕೆಗಳ ಬಗ್ಗೆ ಆಗ್ರಹ ವ್ಯಕ್ತ ಪಡಿಸಿದರುರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊನ್ನಪ್ಪ ಗೌಡ ಪರಣೆ, ಈಶ್ವರ ಭಟ್, ಶಿವಚಂದ್ರ ಈಶ್ವರಮಂಗಲ, ಶೇಖರ ರೈ ಕುಂಬ್ರ ಸಹಿತ ಹಲವು ಮಂದಿ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಸಹಾಯಕ ಆಯುಕ್ತೆ ಸ್ಟೆಲ್ಲಾ ವರ್ಗಿಸ್ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ, ಮನವಿ ಸ್ವೀಕರಿಸಿದರು.