ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸೋಮವಾರ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೭ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ನೆರವೇರಿಸಿ, ಪಥಸಂಚಲನ ಗೌರವವಂದನೆ ಸ್ವೀಕರಿಸಿ ನಾಡಿಗೆ ಸಂದೇಶ
ಪುತ್ತೂರು: ಸಂವಿಧಾನ ಎಂಬುದು ಕೇವಲ ಕಾನೂನಿನ ಪುಸ್ತಕವಲ್ಲ. ಬದಲಿಗೆ ಅದೊಂದು ಸಮಾನತೆ, ಸ್ವಾತಂತ್ರ್ಯ, ಧರ್ಮನಿರಪೇಕ್ಷತೆ ಸಾಮಾಜಿಕ ನ್ಯಾಯ ಹಾಗೂ ಸಹಬಾಳ್ವೆಯನ್ನು ಬಿಂಬಿಸುವ ಮಹತ್ವದ ಗ್ರಂಥವಾಗಿದೆ ಎಂದು ಪುತ್ತೂರು ಉಪವಿಭಾಗಾದ ಸಹಾಯಕ ಕಮೀಷನರ್ ಸ್ಟೆಲ್ಲಾ ವರ್ಗೀಸ್ ಹೇಳಿದರು.
ಪುತ್ತೂರು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವತಿಯಿಂದ ಸೋಮವಾರ ಕೊಂಬೆಟ್ಟಿನ ತಾಲೂಕು ಕ್ರೀಡಾಂಗಣದಲ್ಲಿ ನಡೆದ ೭೭ ವರ್ಷದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜವಂದನೆ ನೆರವೇರಿಸಿ, ಪಥಸಂಚಲನ ಗೌರವವಂದನೆ ಸ್ವೀಕರಿಸಿ ನಾಡಿಗೆ ಸಂದೇಶ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ದೇಶದ ಸಂವಿಧಾನ ನಮ್ಮೆಲ್ಲರ ಬದುಕು ಮತ್ತು ಹಕ್ಕುಗಳನ್ನು ರಕ್ಷಿಸುತ್ತದೆ. ಯಾರಿಗೂ ತಮ್ಮ ಸ್ವಂತ ನಿರ್ಧಾರಗಳನ್ನು ಇತರರ ಮೇಲೆ ಹೇರುವ ಅವಕಾಶ ಇಲ್ಲಿಲ್ಲ. ಏನೇ ಇದ್ದರೂ ಅದು ಸಂವಿಧಾನದ ಚಿಂತನೆಯಡಿಯಲ್ಲಿಯೇ ನಡೆಯಬೇಕಾಗಿದೆ ಎಂದರು. ರಾಷ್ಟ್ರೀಯ ಕ್ರೀಡಾಪಟು ಕೀರ್ತಿ ಬೆಟ್ಟಂಪಾಡಿ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಸಾಧಕರಾದ ಅವಂತಿ ಶರ್ಮ ಕೊಂಬೆಟ್ಟು, ರೋಶನ್ ಎಸ್ ಕೆ ಕೊಂಬೆಟ್ಟು ಹಾಗೂ ಶ್ರೀಪೂಜಾ ಶಾಂತಿನಗರ ಅವರಿಗೆ ತಲಾ ರು.೫೦ ಸಾವಿರ ಬಹುಮಾನ ನೀಡಿ ಗೌರವಿಸಲಾಯಿತು. ಪೊಲೀಸ್ ಇಲಾಖೆ ಮತ್ತು ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಡಿವೈಎಸ್ಪಿ ಪ್ರಮೋದ್ ಕುಮಾರ್, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ಪೌರಾಯುಕ್ತೆ ವಿದ್ಯಾ ಎಂ ಕಾಳೆ, ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ ಉಪಸ್ಥಿತರಿದ್ದರು.ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.