ಬಡವರ ಪಾಲಿನ ಉತ್ತಮ ಆಹಾರ ಹಲಸಿನಲ್ಲಿ ಎಸೆಯುವ ವಸ್ತುಗಳಿಲ್ಲ : ಶಕುಂತಳಾ ಶೆಟ್ಟಿ

| Published : May 25 2024, 12:46 AM IST

ಬಡವರ ಪಾಲಿನ ಉತ್ತಮ ಆಹಾರ ಹಲಸಿನಲ್ಲಿ ಎಸೆಯುವ ವಸ್ತುಗಳಿಲ್ಲ : ಶಕುಂತಳಾ ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ನವತೇಜ ಟ್ರಸ್ಟ್, ಜೆಸಿಐ, ಜಿ.ಎಲ್. ಆಚಾರ್ಯ ಜ್ಯುವೆಲರ್ಸ್‌ ಮತ್ತು ಅಡಿಕೆ ಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಹಲಸು ಹಣ್ಣುಗಳ ಮೇಳ ಶುಕ್ರವಾರ ಉದ್ಘಾಟನೆಗೊಂಡಿತು.

ಕನ್ನಡಪ್ರಭವಾರ್ತೆ ಪುತ್ತೂರು

ಹಲಸು ಎಂಬುದು ಬಡವರ ಪಾಲಿನ ಉತ್ತಮ ಆಹಾರವಾಗಿದೆ. ಹಿಂದೆಲ್ಲಾ ಬಡವರು ತಮ್ಮ ಹೊಟ್ಟೆ ತುಂಬಿಸಲು ಹಲಸು ಕಾಯಿ ಬಿಡಲು ಕಾಯುತ್ತಿದ್ದರು. ಬಡವರ ಪಾಲಿನ ಉತ್ತಮ ಆಹಾರವಾದ ಹಲಸಿನ ಮರ, ಎಲೆ, ರೆಚ್ಚೆ, ಸೊಳೆ ಎಲ್ಲವೂ ಬಳಸುವ ವಸ್ತುವಾಗಿದ್ದು, ಹಲಸಿನಲ್ಲಿ ಎಸೆಯುವ ತ್ಯಾಜ್ಯಗಳಿಲ್ಲ ಎಂದು ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು. ಅವರು ನವತೇಜ ಟ್ರಸ್ಟ್, ಜೆಸಿಐ, ಜಿ.ಎಲ್. ಆಚಾರ್ಯ ಜ್ಯುವೆಲರ್ಸ್‌ ಮತ್ತು ಅಡಿಕೆ ಪತ್ರಿಕೆಯ ಸಂಯುಕ್ತ ಆಶ್ರಯದಲ್ಲಿ ಪುತ್ತೂರಿನ ಬೈಪಾಸ್ ರಸ್ತೆಯಲ್ಲಿರುವ ಜೈನ ಭವನದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಹಲಸು ಹಣ್ಣುಗಳ ಮೇಳದಲ್ಲಿ ಶುಕ್ರವಾರ ಮಳಿಗೆಗಳನ್ನು ಉದ್ಘಾಟಿಸಿ ಮಾತನಾಡಿದರು.ಹಲಸಿನ ಹಣ್ಣುಗಳ ವಿವಿಧ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಹಾಗೂ ಪ್ರದರ್ಶನ ಮಾಡುವ ನಿಟ್ಟಿನಲ್ಲಿ ಹಲಸು ಮೇಳ ಆಯೋಜಿಸುತ್ತಿರುವುದು ಅಭಿನಂದನೀಯವಾಗಿದೆ. ಪ್ರಸ್ತುತ ಹಲಸಿನ ಹಣ್ಣಿನ ವಿವಿಧ ಖಾದ್ಯ ಸಹಿತ ವಿವಿಧ ಉತ್ಪನ್ನಗಳನ್ನು ಒಂದೇ ಸೂರಿನಡಿ ಜನಸಾಮಾನ್ಯರಿಗೆ ಸಿಗುವಂತೆ ಮೇಳಗಳ ಮೂಲಕ ಮಾಡಲಾಗುತ್ತಿದೆ. ಜತೆಗೆ ವಿವಿಧ ಉತ್ಪನ್ನಗಳನ್ನು ವಿದೇಶಗಳಿಗೂ ರಫ್ತು ಮಾಡಲಾಗುತ್ತಿದ್ದು, ಇದಕ್ಕೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದು ತಿಳಿಸಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಮಾತನಾಡಿ ಹಿಂದಿನ ಕಾಲದಲ್ಲಿ ಹಲಸು ಆಹಾರ ವಸ್ತುವಾಗಿ ಹಸಿವು ನೀಗಿಸುವ ಕೆಲಸ ಮಾಡುತ್ತಿತ್ತು. ರೈತರು ಅಡಕೆ ಬೆಳೆಯುಲು ಆರಂಭಿಸುತ್ತಿದ್ದಂತೆ ಅವರ ಕೈಗೆ ಹಣ ಬಂದಾಗ ಹಲಸು ಮೂಲೆ ಗುಂಪಾಗಿತ್ತು. ಪ್ರಸ್ತುತ ಹಲಸಿನ ಬಗ್ಗೆ ಹಲವು ಅಧ್ಯಯನಗಳು ನಡೆಯುತ್ತಿದೆ. ಹಲಸಿನ ಗುಜ್ಜೆಯು ಮಧುಮೇಹ ರೋಗ ನಿಯಂತ್ರಣಕ್ಕೆ ಪೂರಕ ಎಂಬ ಅಂಶವೂ ತಿಳಿದು ಬಂದಿದೆ ಎಂದರು. ಈ ಸಂದರ್ಭದಲ್ಲಿ ಕೇಂದ್ರೀಯ ಗೇರು ಸಂಶೋಧನಾಲಯ ಕೇಂದ್ರ(ಡಿಸಿಆರ್)ದ ವಿಜ್ಞಾನಿ ಬಾಲಸುಬ್ರಹ್ಮಣ್ಯಂ ಮತ್ತು ಪುತ್ತೂರಿನ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕಿ ರೇಖಾ ಅವರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಜೆಸಿಐ ಮಾಜಿ ಅಧ್ಯಕ್ಷ ವಿಶ್ವಪ್ರಸಾದ್ ಸೇಡಿಯಾಪು ಉಪಸ್ಥಿತರಿದ್ದರು. ಅಡಿಕೆ ಪತ್ರಿಕೆಯ ಉಪ ಸಂಪಾದಕ ನಾ.ಕಾರಂತ ಪೆರಾಜೆ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ನವತೇಜ ಟ್ರಸ್ಟ್ನ ಅಧ್ಯಕ್ಷ ಅನಂತ ಕುಮಾರ್ ನೈತಡ್ಕ ವಂದಿಸಿದರು. ನವತೇಜ ಟ್ರಸ್ಟ್ನ ಕಾರ್ಯದರ್ಶಿ ಸುಹಾಸ್ ಮರಿಕೆ ಸಹಕರಿಸಿದರು. ಮೇಳದಲ್ಲಿ ಹಲಸಿನ ಹಣ್ಣಿನ ವಿವಿಧ ಉತ್ಪನ್ನಗಳು, ತಿಂಡಿ ತಿನಿಸುಗಳು, ವಿವಿಧ ಹಣ್ಣುಗಳಾದ ವಿವಿಧ ತಳಿಯ ಮಾವುಗಳು, ರಂಬುಟಾನ್, ವಿವಿಧ ತಳಿಯ ಹಲಸಿನ ಗಿಡಗಳು, ಕೃಷಿ ಉಪಕರಣಗಳು, ಗಾಣದಿಂದ ತಯಾರಿಸಿದ ಎಣ್ಣೆ, ಉತ್ತಮ ಗುಣಮಟ್ಟದ ಜೇನು, ಇನ್ನಿತರ ಹಲವಾರು ಮಳಿಗೆಗಳಲ್ಲಿ ಮಾರಾಟ ನಡೆದವು.ಮೇಳದಲ್ಲಿ ಇಂದು: ಮೇ.೨೫ ಬೆಳಿಗ್ಗೆ ಮಾತೃತ್ವಂ ಶ್ರೀ ರಾಮಚಂದ್ರ ಮಠದ ಅಧ್ಯಕ್ಷ ಈಶ್ವರೀ ಶ್ಯಾಮ ಭಟ್ ಬೇರ್ಕಡವು ಅಧ್ಯಕ್ಷತೆಯಲ್ಲಿ ನಾಡು ಮಾವು ಸಂರಕ್ಷಣೆಗಾರ ಡಾ. ಮನೋಹರ ಉಪಾಧ್ಯ, ಸುಳ್ಯದ ನಾಡು ಮಾವು ಸಂರಕ್ಷಣೆಗಾರ ಜಯರಾಮ ಮುಂಡೋಳಿಮುಲೆ, ಪುಣಚ ಕೊಕ್ಕೋ ಮೌಲ್ಯವರ್ಧನೆಗಾರ ನವೀನ ಕೃಷ್ಣ ಶಾಸ್ತ್ರಿ ಪುಣಚ, ರಂಬುಟಾನ್ ಕೃಷಿ ಮಾರುಕಟ್ಟೆಯ ವಿಶ್ವಪ್ರಸಾದ್ ಸೇಡಿಯಾಪು, ಮಾಪಲತೋಟ ಸುಬ್ರಾಯ ಭಟ್ ಮರ್ಕಂಜ ಸುಳ್ಯ, ಪುತ್ತೂರು ಶಿಬರ ನವನೀತ ನರ್ಸರಿಯ ವೇಣುಗೋಪಾಲ್ ಎಸ್.ಜೆ. ವಿಚಾರ ಮಂಡನೆ ಮಾಡಲಿದ್ದಾರೆ.