ಸಾರಾಂಶ
ಕನ್ನಡಪ್ರಭವಾರ್ತೆ ಪುತ್ತೂರು
ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ನೇತೃತ್ವದಲ್ಲಿ ಅಡಕೆ ಹಾಗೂ ಕೃಷಿ ಉತ್ಪನ್ನಗಳ ಕೊಯ್ಲು ನಂತರ ವೈಜ್ಞಾನಿಕ ದಾಸ್ತಾನು ಬಗ್ಗೆ ವಿನೂತನ ತಂತ್ರಜ್ಞಾನ ಬ್ಯಾಗ್ ಬಗ್ಗೆ ಮಾಹಿತಿ ಕಾರ್ಯಕ್ರಮ ಪುತ್ತೂರಿನ ತೆಂಕಿಲ ಬೈಪಾಸ್‌ನಲ್ಲಿರುವ ಚುಂಚಶ್ರೀ ಸಭಾಭವನದಲ್ಲಿ ಶನಿವಾರ ನಡೆಯಿತು.ಕಾರ್ಯಕ್ರಮದಲ್ಲಿ ವಿಟ್ಲದ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್ ಕಿಶೋರ್ ಮಂಚಿ ಅವರು ಅಡಕೆ ಹಾಗೂ ಕೃಷಿಉತ್ಪನ್ನಗಳನ್ನು ನೈಟ್ರೋಜನ್ ಗ್ಯಾಸ್ ಬಳಕೆ ಮಾಡಿ ಕೊಠಡಿಗಳಲ್ಲಿ ದಾಸ್ತಾನು ಮಾಡುವ ಬಗ್ಗೆ ಪಿಂಗಾರ ಸಂಸ್ಥೆಯು ನಡೆಸುತ್ತಿರುವ ವಿಧಾನಗಳು ಹಾಗೂ ಅಧ್ಯಯನಗಳ ಬಗ್ಗೆ ಮಾಹಿತಿ ನೀಡಿದರು.
ಕೃಷಿಕ ಹಾಗೂ ಸಿಟಿ ಆಸ್ಪತ್ರೆಯ ವೈದ್ಯ ಡಾ. ಸೂರ್ಯನಾರಾಯಣ ಮಾತನಾಡಿ ಅಡಕೆಯನ್ನು ಕರ್ಪೂರ ಬಳಸಿ ಡ್ರಮ್‌ಗಳಲ್ಲಿ ಶೇಖರಣೆ ಮಾಡುವ ವಿಧಾನ ಹಾಗೂ ಅದರಲ್ಲಿ ಯಶಸ್ಸಿನ ಬಗ್ಗೆ ಮಾಹಿತಿ ನೀಡಿದರು. ಗ್ರೈನ್ ಪ್ರೋ ಸಂಸ್ಥೆಯ ದಕ್ಷಿಣ ಭಾರತ ಮತ್ತು ಶ್ರೀಲಂಕಾದ ವಿಭಾಗದ ಮಾರ್ಕೆಂಟಿಗ್ ಮುಖ್ಯಸ್ಥ ಗೋಪಿನಾಥ್ ವಡಿವೆಲ್ ಮಾತನಾಡಿ ವಿಶೇಷ ವಿನ್ಯಾಸದ ಬ್ಯಾಗ್‌ಗಳು ಹಾಗೂ ಕೊಕೂನ್ ಗಳ ಬಗ್ಗೆ ಮಾಹಿತಿ ನೀಡಿದರು. ಈಗಾಗಲೇ ವಿದೇಶಗಳಲ್ಲಿ ಇಂತಹ ಬ್ಯಾಗ್ ಬಳಕೆ ಮಾಡುತ್ತಿದ್ದಾರೆ. ಭಾರತದಲ್ಲಿ ಕೂಡಾ ಈಚೆಗೆ ಈ ಮಾದರಿಯ ದಾಸ್ತಾನು ಬಗ್ಗೆ ಕೃಷಿಕರು ಆಸಕ್ತರಾಗಿದ್ದಾರೆ ಎಂದರು.ಕ್ಯಾಂಪ್ಕೋ ಉಪಾಧ್ಯಕ್ಷ ಶಂ. ನಾ. ಖಂಡಿಗೆ ಮಾತನಾಡಿ, ಅಡಕೆ ಬೆಳೆಗಾರರಿಗೆ ದಾಸ್ತಾನು ಹಾಗೂ ಅಡಕೆ ಗುಣಮಟ್ಟ ಕಾಪಾಡುವುದು ಈಗ ಬಹುದೊಡ್ಡ ಸವಾಲಿನ ಕೆಲಸವಾಗಿದೆ. ಹೊಸ ಮಾದರಿಯ ಪ್ರಯತ್ನಗಳು ನಡೆಯುತ್ತಿರುವುದು ಆಶಾದಾಯಕ ಬೆಳವಣಿಗೆ ಎಂದರು. ಅಖಿಲ ಭಾರತ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ಅಶೋಕ್ ಕಿನಿಲ ಅಧ್ಯಕ್ಷತೆ ವಹಿಸಿದ್ದರು. ವಿಟ್ಲದ ಪಿಂಗಾರ ಸಂಸ್ಥೆಯ ಅಧ್ಯಕ್ಷ ರಾಮ್ ಕಿಶೋರ್ ಮಂಚಿ, ಕೃಷಿಕ ಹಾಗೂ ಸಿಟಿ ಆಸ್ಪತ್ರೆಯ ವೈದ್ಯ ಡಾ. ಸೂರ್ಯನಾರಾಯಣ ಹಾಗೂ ಗ್ರೈನ್ ಪ್ರೋ ಸಂಸ್ಥೆಯ ದಕ್ಷಿಣ ಭಾರತ ಮತ್ತು ಶ್ರೀಲಂಕಾದ ವಿಭಾಗದ ಮಾರ್ಕೆಂಟಿಗ್ ಮುಖ್ಯಸ್ಥ ಗೋಪಿನಾಥ್ ವಡಿವೆಲ್ ಮಾಹಿತಿ ನೀಡಿದರು. ಸುಮಂಗಲ ಎಗ್ರೋ ಸಪ್ಲೈನ ಇಗ್ನೇಶೀಯಸ್ ಡಿಸೋಜಾ ಉಪಸ್ಥಿತರಿದ್ದರು.