ಪುತ್ತೂರು ಜಾತ್ರೆ: ಇಂದು ಮಹಾರಥೋತ್ಸವ, ‘ಪುತ್ತೂರು ಬೆಡಿ’

| Published : Apr 17 2025, 12:04 AM IST

ಪುತ್ತೂರು ಜಾತ್ರೆ: ಇಂದು ಮಹಾರಥೋತ್ಸವ, ‘ಪುತ್ತೂರು ಬೆಡಿ’
Share this Article
  • FB
  • TW
  • Linkdin
  • Email

ಸಾರಾಂಶ

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮರಥೋತ್ಸವ ಹಾಗೂ ಪುತ್ತೂರು ಬೆಡಿ ಸುಡುಮದ್ದು ಪ್ರದರ್ಶನ ಗುರುವಾರ ರಾತ್ರಿ ನಡೆಯಲಿದೆ. ಜಾತ್ರೋತ್ಸವದಲ್ಲಿ ಅತೀ ಹೆಚ್ಚು ಭಕ್ತರು ಸೇರುವ ದಿನವಾದ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವದ ಪ್ರಯುಕ್ತ ಬುಧವಾರ ದೇವಾಲಯದ ಒಳಾಂಗಣದಲ್ಲಿ ದೇವರ ದೀಪ ಬಲಿ ಉತ್ಸವ, ರಾತ್ರಿ ಉತ್ಸವ ಬಲಿ, ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ಶ್ರೀ ದೇವಳಕ್ಕೆ ಆಗಮಿಸುವ ಪೂರ್ವ ಶಿಷ್ಟ ಸಂಪ್ರದಾಯ ನಡೆಯಿತು.

ದೇವಳದ ಹೊರಾಂಗಣದಲ್ಲಿ ದೇವ-ದೈವ ಭೇಟಿ ನಡೆದು ಸಾಂಪ್ರದಾಯಿಕ ನುಡಿಕಟ್ಟು ನಡೆದ ಬಳಿಕ ದೈವಗಳ ಭಂಡಾರದ ಜತೆಗೆ ಶ್ರೀ ದೇವರ ಉತ್ಸವ, ಬಳಿಕ ಪಲ್ಲಕ್ಕಿ ಉತ್ಸವ, ಸಣ್ಣ ರಥೋತ್ಸವ ಮತ್ತು ಕೆರೆ ಉತ್ಸವ, ತೆಪ್ಪೋತ್ಸವ ನಡೆಯಿತು.

ಮಲ್ಲಿಗೆ ಸಮರ್ಪಣೆ:

ಸಣ್ಣ ರಥೋತ್ಸವದ ದಿನವಾದ ಬುಧವಾರ ದೇವಾಲಯಕ್ಕೆ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಭಂಡಾರ ವಿವಿಧ ಬಿರುದಾವಳಿಗಳೊಂದಿಗೆ ಆಗಮಿಸುವ ಹಿನ್ನೆಲೆಯಲ್ಲಿ ಸೀಮೆಯ ಭಕ್ತರು ಮಲ್ಲಿಗೆ ಚೆಂಡುಗಳನ್ನು ದೈವಗಳಿಗೆ ಬಲ್ನಾಡಿನಲ್ಲಿ, ಪುತ್ತೂರು ದೇವಾಲಯದಲ್ಲಿ ಮತ್ತು ಪುತ್ತೂರು ಹಳೆ ಪೊಲೀಸ್ ಠಾಣೆಯ ಬಳಿ ಇರುವ ಅಂಕದ ಕಟ್ಟೆಯ ಬಳಿ ಸಮರ್ಪಿಸಿದರು. ಪೂರ್ವಾಹ್ನ ದೇವಾಲಯದಲ್ಲಿ ತುಲಾಭಾರ ಸೇವೆ ನಡೆಯಿತು.

ಸೂರ್ಯೋದಯಕ್ಕೆ ಮೊದಲು ದೀಪ ಬಲಿ ಉತ್ಸವ ನಡೆಯಿತು.

ಇಂದು ಪುತ್ತೂರು ಬೆಡಿ:

ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮರಥೋತ್ಸವ ಹಾಗೂ ಪುತ್ತೂರು ಬೆಡಿ ಸುಡುಮದ್ದು ಪ್ರದರ್ಶನ ಗುರುವಾರ ರಾತ್ರಿ ನಡೆಯಲಿದೆ. ಜಾತ್ರೋತ್ಸವದಲ್ಲಿ ಅತೀ ಹೆಚ್ಚು ಭಕ್ತರು ಸೇರುವ ದಿನವಾದ ಮಹಾರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ಭಾಗವಹಿಸಲಿದ್ದಾರೆ. ರಾತ್ರಿ ೯ರ ಅನಂತರ ದೇವಾಲಯದ ಮುಂಭಾಗದ ರಥ ಬೀದಿಯಲ್ಲಿ ಸುಮಾರು ೪೦೦ ಮೀಟರ್ ಉದ್ದಕ್ಕೆ ಬ್ರಹ್ಮರಥ ತೆರಳಿ ಮತ್ತೆ ದೇವಾಲಯದ ಭಾಗಕ್ಕೆ ಹಿಂದಿರುಗಿ ಬರಲಿದೆ. ಈ ಸಂದರ್ಭದಲ್ಲಿ ದೇವಾಲಯದ ಎದುರು ಗದ್ದೆಯಲ್ಲಿ ನಡೆಯಲಿರುವ ರಥೋತ್ಸವ ಮತ್ತು ಸುಡುಮದ್ದು ವೀಕ್ಷಣೆಗಾಗಿ ಜನಸಾಗರವೇ ಸೇರುತ್ತದೆ. ಬಳಿಕ ದೇವರು ಬ್ರಹ್ಮರಥದಿಂದ ಇಳಿದು ಪೇಟೆ ಸವಾರಿಗೆ ತೆರಳಲಿದ್ದು, ಬಳಿಕ ಇಲ್ಲಿನ ಭಕ್ತರ ಸಂದಣಿ ತೆರವಾಗುತ್ತದೆ.

ವಾಹನ ನಿಲುಗಡೆಗೆ ವ್ಯವಸ್ಥೆ:

ಪುತ್ತೂರು ನಗರದ ತೆಂಕಿಲ, ಕೊಂಬೆಟ್ಟು, ಕಿಲ್ಲೆ ಮೈದಾನ, ಎಪಿಎಂಸಿ ರಸ್ತೆ ಬಳಿಯ ಗದ್ದೆಯಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಮಾಡಲಾಗುತ್ತದೆ. ಸಂಜೆ ೪ ಗಂಟೆಯಿಂದ ರಾತ್ರಿ ಬ್ರಹ್ಮರಥೋತ್ಸವ ಮುಗಿಯುವ ತನಕ ಮುಖ್ಯ ರಸ್ತೆಯಲ್ಲಿ ಕೊಂಬೆಟ್ಟು ಕ್ರಾಸ್‌ನಿಂದ ಬಸ್ಸು ನಿಲ್ದಾಣದ ತನಕ ಯಾವುದೇ ವಾಹನ ಸಂಚಾರಕ್ಕೆ ಅವಕಾಶವಿರುವುದಿಲ್ಲ. ಭಕ್ತಾದಿಗಳಿಗೆ ಕೆಎಸ್‌ಆರ್‌ಟಿಸಿ ವತಿಯಿಂದ ತಾಲೂಕಿನ ವಿವಿಧ ಕಡೆಗಳಿಗೆ ಬಸ್ಸಿನ ವ್ಯವಸ್ಥೆ ಮಾಡಲಾಗುತ್ತದೆ. ಜಾತ್ರೋತ್ಸವದಲ್ಲಿ ಇಂದು:

ಬೆಳಗ್ಗೆ ಉತ್ಸವ, ವಸಂತಕಟ್ಟೆ ಪೂಜೆ, ದರ್ಶನ ಬಲಿ, ರಾತ್ರಿ ಉತ್ಸವ, ಸುಡುಮದ್ದು ಪ್ರದರ್ಶನ, ಬ್ರಹ್ಮರಥೋತ್ಸವ, ಬಂಗಾರ್‌ಕಾಯರ್‌ಕಟ್ಟೆ ಸವಾರಿ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀಭೂತಬಲಿ, ಶಯನ ನಡೆಯಲಿದೆ.