ಪುತ್ತೂರು ಕಂಬಳ ಸಮಿತಿಯ ನೇತೃತ್ವದಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ನಡೆದ 33ನೇ ವರ್ಷದ ಕೋಟಿ ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮ ಭಾನುವಾರ ಸಂಪನ್ನಗೊಂಡಿತು.
ಪುತ್ತೂರು: ರೈತರ ಕ್ರೀಡೆಯಾಗಿರುವ ಕಂಬಳಕ್ಕೆ ಅವಿಭಜಿತ ದ.ಕ.ಜಿಲ್ಲೆ ಮತ್ತು ಕಾಸರಗೋಡು ಭಾಗದಲ್ಲಿ ಬಹಳ ದೊಡ್ಡ ಮಟ್ಟದ ಸಹಕಾರವಿದ್ದು, ಪುತ್ತೂರಿನ ಕಂಬಳಕ್ಕೆ ಐತಿಹಾಸಿಕ ಮಹತ್ವವಿದೆ ಎಂದು ಕೋಟಿ ಚೆನ್ನಯ ಜೋಡುಕರೆ ಕಂಬಳ ಸಮಿತಿಯ ಗೌರವ ಅಧ್ಯಕ್ಷರಾದ ಮಾಜಿ ಸಚಿವ ಹಾಗೂ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಅವರು ಅಭಿಪ್ರಾಯಪಟ್ಟರು.
ಅವರು ಪುತ್ತೂರು ಕಂಬಳ ಸಮಿತಿಯ ನೇತೃತ್ವದಲ್ಲಿ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ದೇವರಮಾರು ಗದ್ದೆಯಲ್ಲಿ ನಡೆದ 33ನೇ ವರ್ಷದ ಕೋಟಿ ಚೆನ್ನಯ ಹೊನಲು ಬೆಳಕಿನ ಜೋಡುಕರೆ ಕಂಬಳದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ನಮ್ಮಿಂದಾಗಿ ಕಂಬಳಕ್ಕೆ ಹೆಸರು ಬಂದಿದೆ ಎಂದು ನಾವು ಅಂದು ಕೊಂಡಿದ್ದೇವೆ. ಆದರೆ ಅದು ತಪ್ಪು ಬದಲಿಗೆ ಕಂಬಳದಿಂದಾಗಿ ನಮಗೆ ಕೀರ್ತಿ, ಹೆಸರು ಬಂದಿದೆ. ಕಂಬಳ ನಡೆಸಿದವರು ಎತ್ತರದ ಸ್ಥಾನಕ್ಕೆ ಏರಿದ್ದಾರೆ. ಈ ಕಂಬಳವನ್ನು ನಿಲ್ಲಿಸುವಂತೆ ಪ್ರಾಣಿ ದಯಾ ಸಂಘದವರು ಸಾಕಷ್ಟು ಪ್ರಯತ್ನ ನಡೆಸಿದ್ದರೂ ದೈವ ದೇವರುಗಳ ಅನುಗ್ರಹದಿಂದ ಹಾಗೂ ಸರ್ಕಾರದ ಸಹಕಾರದಿಂದಾಗಿ ಯಶಸ್ವಿಯಾಗಿ ಕಂಬಳ ನಡೆಸಲು ಸಾಧ್ಯವಾಗಿದೆ ಎಂದರು. ತುಳು ಚಲನಚಿತ್ರದ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಮಾತನಾಡಿ ತಾನು ತುಳು ಮತ್ತು ಕನ್ನಡದಲ್ಲಿ ಮಾಡಿರುವ ಬಿರ್ದ್ ದ ಕಂಬಳ ಮತ್ತು ವೀರ ಕಂಬಳ ಚಲನ ಚಿತ್ರವು ಸಂಪೂರ್ಣವಾಗಿ ಕಂಬಳಕ್ಕೆ ಸಂಬಂಧಿಸಿದ ಕಥೆಯಾಗಿದ್ದು, ಈ ಚಲನ ಚಿತ್ರವು ಫೆಬ್ರವರಿ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ ಎಂದರು.ಬಿಗ್ ಬಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ, ಡೆಡ್ಲಿ ಸೋಮ ಚಲನ ಚಿತ್ರ ನಟ ಆದಿತ್ಯ, ಪಟ್ಟೆ ಹುಲಿ ಚಲನ ಚಿತ್ರದ ಶ್ರೇಯಸ್, ರಾಜ್ಯ ಕಂಬಳ ಎಸೋಸಿಯೇಷನ್ ಅಧ್ಯಕ್ಷ ಡಾ. ದೇವಿಪ್ರಸಾದ್ ಶೆಟ್ಟಿ ಬೆಳಪು, ಮಾಜಿ ಸಚಿವ ಬಿ. ರಮಾನಾಥ ರೈ ಮತ್ತಿತರರು ಮಾತನಾಡಿದರು. ಸಾಧಕರಿಗೆ ಸನ್ಮಾನ:
ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಡಾ. ನರೇಂದ್ರ ರೈ ದೇರ್ಲ, ಪದ್ಮನಾಭ ಶೆಟ್ಟಿ ರೆಂಜಾಳಗುತ್ತು, ಚಂದ್ರಶೇಖರ ಕೆ.ಎಸ್, ಕುಮಾರ್ ಪೆರ್ನಾಜೆ, ಅಬೂಬಕ್ಕರ್ ಮುಲಾರ್, ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ರಾಜಲಕ್ಷ್ಮೀ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.ಕಂಬಳ ಸಮಿತಿಯ ಗೌರವ ಅಧ್ಯಕ್ಷೆಯಾದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಕಂಬಳ ಸಮಿತಿ ಕೋಶಾಧಿಕಾರಿಯಾದ ಶ್ರೀ ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಂಬಳದ ತೀರ್ಪುಗಾರ ಗುಣಪಾಲ ಕಡಂಬ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ದ.ಕ.ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ರಾಜ್ಯ ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಮೌರಿಸ್ ಮಸ್ಕರೇನ್ಹಸ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಜಿಲ್ಲಾ ಸಶೆನ್ಸ್ ನ್ಯಾಯಾಧೀಶೆ ಸರಿತಾ, ನ್ಯಾಯಾಧೀಶೆ ಪ್ರಕೃತಿ, ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ, ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಳ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕೋಟಿ ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ಸಂಚಾಲಕ ವಸಂತ ಕುಮಾರ್ ರೈ ವಂದಿಸಿದರು. ಉಪಾಧ್ಯಕ್ಷ ನರಿಂಜನ ರೈ ಮಠಂತಬೆಟ್ಟು ನಿರೂಪಿಸಿದರು.