ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಕರ್ನಾಟಕ ವಿಧಾನ ಪರಿಷತ್‌ನ ನೈಋತ್ಯ ಪದವೀಧರ ಮತ್ತು ಶಿಕ್ಷಕ ಕ್ಷೇತ್ರಗಳಿಗೆ ಪುತ್ತೂರಿನ ೪ ಮತಗಟ್ಟೆಗಳಲ್ಲಿ ಸೋಮವಾರ ಶಾಂತಿಯುತ ಮತದಾನ ನಡೆಯಿತು. ಪದವೀಧರ ಕ್ಷೇತ್ರದಲ್ಲಿ ಶೇ. ೭೮.೫೮ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಶೇ. ೭೭.೨೪ ಮತದಾನವಾಗಿದೆ.ಬೆಳಗ್ಗಿನಿಂದಲೇ ಎಲ್ಲಾ ಮತಗಟ್ಟೆಗಳಲ್ಲೂ ಮತದಾರರ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರು ಕಂಡುಬಂದು ಸರತಿ ಸಾಲಿನಲ್ಲಿ ನಿಂತು ಮತಚಲಾಯಿಸಿದರು. ನೈಋತ್ಯ ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿ ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ೧೨೦೩ ಪುರುಷರು, ೧೩೧೭ ಮಹಿಳೆಯರು ಸೇರಿದಂತೆ ಒಟ್ಟು ೨೫೨೦ ಮಂದಿ ಹಾಗೂ ನೈಋತ್ಯ ಶಿಕ್ಷಕರ ಕ್ಷೇತ್ರದಲ್ಲಿ ೩೦೬ ಪುರುಷರು ಹಾಗೂ ೪೯೮ ಮಹಿಳೆಯರು ಸೇರಿದಂತೆ ಒಟ್ಟು ೮೦೪ ಮಂದಿ ಮತದಾರರು ಮತಚಲಾಯಿಸಲು ಅವಕಾಶ ಪಡೆದಿದ್ದರು. ಪದವೀಧರರ ಕ್ಷೇತ್ರಕ್ಕೆ ಸಂಬಂಧಿಸಿ ತಲಾ ೮೪೦ ಮಂದಿಯನ್ನು ಒಂದು ಮತಗಟ್ಟೆಯಲ್ಲಿ ಮತ ಚಲಾಯಿಸಲು ವಿಭಾಗಿಸಲಾಗಿತ್ತು.
ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಮಿನಿ ಸಭಾಂಗಣದ ಮತಗಟ್ಟೆ ಸಂಖ್ಯೆ-೨೨, ತಾಲೂಕು ಪಂಚಾಯಿತಿ ಎನ್‌ಆರ್‌ಎಲ್‌ಎಂ ಕಟ್ಟಡದ ಮತಗಟ್ಟೆ ಸಂಖ್ಯೆ-೨೨ಎ, ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಮತಗಟ್ಟಿ ಸಂಖ್ಯೆ-೨೨ಬಿಯಲ್ಲಿ ಮತದಾನ ನಡೆದರೆ, ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಾಲೂಕು ಆಡಳಿತ ಸೌಧದಲ್ಲಿರುವ ತಹಸೀಲ್ದಾರ್ ಸಭಾಂಗಣದಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ಮತದಾನ ನಡೆಯಿತು.ಬ್ಯಾಲೆಟ್ ಪೇಪರ್ ಮೂಲಕ ಮತದಾನ ಪ್ರಕ್ರಿಯೆ ನಡೆಯಿತು. ಪದವೀಧರ ಕ್ಷೇತ್ರದ ಮತದಾನಕ್ಕೆ ಬಲಗೈ ತೋರು ಬೆರಳು ಹಾಗೂ ಶಿಕ್ಷಕರ ಕ್ಷೇತ್ರದ ಮತದಾನಕ್ಕೆ ಬಲಗೈ ಮಧ್ಯದ ಬೆರಳಿಗೆ ಶಾಯಿ ಗುರುತು ಹಾಕಲಾಯಿತು. ಮತದಾರರು ಪ್ರಾಶಸ್ತ್ಯದ ಮತ ಹಾಗೂ ಉಳಿದ ೨ ಮತಗಳನ್ನು ಚಲಾಯಿಸಿದರು.
ಸಂತೆಯೂ ನಡೆಯಿತು:ತಾಲೂಕು ಆಡಳಿತ ಸೌಧ ಹಾಗೂ ತಾಲೂಕು ಪಂಚಾಯತ್‌ನಲ್ಲಿ ಚುನಾವಣೆ ನಡೆದರೂ ಸನಿಹದ ಪುತ್ತೂರಿನ ಐತಿಹಾಸಿಕ ಕಿಲ್ಲೆ ಮೈದಾನದ ಸೋಮವಾರ ಸಂತೆಯೂ ಯಥಾಸ್ಥಿತಿಯಲ್ಲಿ ನಡೆಯಿತು. ಕಿಲ್ಲೆ ಮೈದಾನ ಪ್ರವೇಶದ ಮುಖ್ಯ ದ್ವಾರವನ್ನು ಬಂದ್ ಮಾಡಿ ಹಿಂಬದಿಯ ಗೇಟಿನ ಮೂಲಕ ಸಾರ್ವಜನಿಕರಿಗೆ ಸಂತೆಗೆ ಆಗಮಿಸಲು ಅವಕಾಶ ನೀಡಲಾಗಿತ್ತು. ಮತಗಟ್ಟೆಯ ವ್ಯಾಪ್ತಿಯಲ್ಲಿ ಹೆಚ್ಚಿನ ಜನಸಂದಣಿ ಮತ್ತು ವಾಹನ ದಟ್ಟಣೆಯಾಗದಂತೆ ಮುಂಜಾಗ್ರತ ಕ್ರಮವಾಗಿ ಭದ್ರತಾ ವ್ಯವಸ್ಥೆ ಮಾಡಲಾಗಿತ್ತು.
ಕೋರ್ಟ್ ರಸ್ತೆಗೆ ಬೇರಿಕೇಡ್ ಹಾಕಿ ರಸ್ತೆ ಬಂದ್ ಮಾಡಲಾಗಿದ್ದರೆ ಕೃತಿಕ ಹೊಟೇಲ್‌ನಿಂದ ಕೋರ್ಟ್ ರಸ್ತೆಗೆ ಹಾದು ಹೋಗುವ ರಸ್ತೆಯನ್ನು ಹೊಟೇಲ್ ಮುಂಭಾಗ ಹಾಗೂ ಮಮ್ಮಿ ಕ್ಯಾಂಟೀನ್ ಬಳಿಯಿಂದ ತಾಲೂಕು ಕಚೇರಿ ಮೂಲಕ ಹಾದು ಹೋಗುವ ರಸ್ತೆಗೂ ಬ್ಯಾರಿಕೇಟ್ ಅಳವಡಿಸಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ನ್ಯಾಯಾಲಯಕ್ಕೆ ಹೋಗುವ ವಕೀಲರಿಗೆ, ಮತದಾರರಿಗೆ ಮಿನಿ ವಿಧಾನಸೌಧಕ್ಕೆ ತೆರಳುವವರಿಗೆ ತೆರಳಲು ಅವಕಾಶ ನೀಡಲಾಗಿತ್ತು.ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು ತಾ.ಪಂ.ನ ಮತಗಟ್ಟೆಯಲ್ಲಿ ಪದವೀಧರ ಕ್ಷೇತ್ರದ ಅಭ್ಯರ್ಥಿಗಳಿಗೆ ಮತ ಚಲಾಯಿಸಿದರು. ಪಕ್ಷಗಳ ಮುಖಂಡರಾದ ಹರೀಶ್ ಪೂಂಜಾ, ಮಂಜುನಾಥ ಭಂಡಾರಿ, ಶಕುಂತಳಾ ಟಿ. ಶೆಟ್ಟಿ ಬೂತ್‌ಗಳಿಗೆ ಭೇಟಿ ನೀಡಿದರು.
ಮತ ಚಲಾವಣೆ ಅಂಕಿ ಅಂಶ:ಪದವೀಧರ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ತಾಲೂಕು ಪಂಚಾಯಿತಿ ಮಿನಿ ಸಭಾಂಗಣದ ಮತಗಟ್ಟೆ ಸಂಖ್ಯೆ-೨೨ ರಲ್ಲಿ ೮೦.೧೨ ಶೇ., ತಾಲೂಕು ಪಂಚಾಯಿತಿ ಎನ್‌ಆರ್‌ಎಲ್‌ಎಂ ಕಟ್ಟಡದ ಮತಗಟ್ಟೆ ಸಂಖ್ಯೆ-೨೨ಎ ನಲ್ಲಿ ೮೧.೧೯ ಶೇ., ತಾಲೂಕು ಪಂಚಾಯಿತಿ ಸಾಮರ್ಥ್ಯ ಸೌಧದ ಮತಗಟ್ಟಿ ಸಂಖ್ಯೆ-೨೨ಬಿಯಲ್ಲಿ೭೧.೪೩ ಶೇ. ಸೇರಿ ಒಟ್ಟು೭೭.೫೮ ಶೇ. ಮತದಾನವಾದರೆ, ಶಿಕ್ಷಕರ ಕ್ಷೇತ್ರದ ತಾಲೂಕು ಆಡಳಿತ ಸೌಧದಲ್ಲಿರುವ ತಹಸೀಲ್ದಾರ್ ಸಭಾಂಗಣದಲ್ಲಿ ತೆರೆಯಲಾದ ಮತಗಟ್ಟೆಯಲ್ಲಿ ೭೭.೨೪ ಶೇ. ಮತದಾನ ವಾಗಿದೆ.