ಸಾರಾಂಶ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಪ್ರಯುಕ್ತ ಜಾಗರಣೆ, ಜಾತ್ರೆ ಸಹಿತವಾಗಿ ಪೂರ್ವಶಿಷ್ಟ ಪದ್ಧತಿಯಂತೆ ಮಹಾರುದ್ರಯಾಗ, ಶತರುದ್ರಾಭಿಷೇಕ, ಬಿಲ್ವಾರ್ಚನೆ ಸೇವೆ ನಡೆಯಿತು. ದೇವಳದ ಒಳಗಾಂಣ, ಹೊರಾಂಗಣ, ಗದ್ದೆಯಲ್ಲಿ ಭಜನೆ, ನೃತ್ಯ ಭಜನೆ, ನಟರಾಜ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ ನಡೆಯಿತು.
ಕನ್ನಡಪ್ರಭ ವಾರ್ತೆ ಪುತ್ತೂರು
ಇತಿಹಾಸ ಪ್ರಸಿದ್ಧ ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿ ಉತ್ಸವವು ಬುಧವಾರ ರಾತ್ರಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿ ನೇತೃತ್ವದಲ್ಲಿ ನಡೆಯಿತು. ದೇವಳದಲ್ಲಿ ಜಾಗರಣೆ, ಜಾತ್ರೆ ಸಹಿತವಾಗಿ ಪೂರ್ವಶಿಷ್ಟ ಪದ್ಧತಿಯಂತೆ ಮಹಾರುದ್ರಯಾಗ, ಶತರುದ್ರಾಭಿಷೇಕ, ಬಿಲ್ವಾರ್ಚನೆ ಸೇವೆ ನಡೆಯಿತು. ದೇವಳದ ಒಳಗಾಂಣ, ಹೊರಾಂಗಣ, ಗದ್ದೆಯಲ್ಲಿ ಭಜನೆ, ನೃತ್ಯ ಭಜನೆ, ನಟರಾಜ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ, ನೃತ್ಯ ಪ್ರದರ್ಶನ ನಡೆಯಿತು.ಪ್ರಾತಃ ಕಾಲ ಗಣಪತಿ ಹೋಮದ ಬಳಿಕ ಭಜನಾ ಕಾರ್ಯಕ್ರಮ ಆರಂಭಗೊಂಡಿತ್ತು. ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಭಜನಾ ಕಾರ್ಯಕ್ರಮ ಮತ್ತು ನಟರಾಜ ವೇದಿಕೆಯಲ್ಲಿ ನಡೆಯುವ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಉದ್ಘಾಟಿಸಿದರು.
ರಾತ್ರಿ ಶ್ರೀ ದೇವರ ಬಲಿ ಉತ್ಸವ ಹೊರಟು ಉಡುಕೆ ಸುತ್ತು, ಚೆಂಡೆ ಸುತ್ತಿನ ಬಳಿಕ ಕಂಡನಾಯಕನ ಕಟ್ಟೆಯಲ್ಲಿ ಕಟ್ಟೆಪೂಜೆ ನಡೆಯಿತು. ಇದೆ ಸಂದರ್ಭ ಅಷ್ಟಾವಧಾನ ಸೇವೆ, ಪಲ್ಲಕ್ಕಿ ಉತ್ಸವ, ಸ್ಯಾಕ್ರೋಪೋನ್ ವಾದನ, ಬ್ಯಾಂಡ್, ಭಜನೆ ಸುತ್ತು ನಡೆದು ಚಂದ್ರಮಂಡಲ ರಥೋತ್ಸವ ನಡೆಯಿತು. ಬಳಿಕ ಕೆರೆ ಉತ್ಸವ ನಡೆದು ದೇವರು ಒಳಗಾದ ಬಳಿಕ ದೇವರಿಗೆ ಏಕಾದಶ ರುದ್ರಾಭಿಷೇಕ, ರಾತ್ರಿ ಪೂಜೆ, ದೇವರ ಭೂತಬಲಿ ಉತ್ಸವ ತಡರಾತ್ರಿಯಲ್ಲಿ ಏಕಾದಶ ರುದ್ರಾಭಿಷೇಕ, ಮಹಾಪೂಜೆ, ಉತ್ಸವ ಬಲಿ ನಡೆಯಿತು.ದೇವಳದ ತುಳಸಿ ಕಟ್ಟೆ ಬಳಿ ಶ್ರೀ ದೇವರ ಬೆಳ್ಳಿಯ ಮುಖ ಕವಚವನ್ನಿಟ್ಟು ಭಕ್ತರಿಗೆ ಏಕ ಬಿಲ್ವಾ ಶಿವಾರ್ಪಣಂ ಸೇವೆಗೆ ಅವಕಾಶ ಕಲ್ಪಿಸಲಾಗಿತ್ತು.
ದೇವಳದ ಗೋಪುರದಲ್ಲಿ ವೇದಮೂರ್ತಿ ಜಯರಾಮ ಜೋಯಿಷ ನೇತೃತ್ವದಲ್ಲಿ ರುದ್ರ ಹೋಮಾದಿ ಸೇವೆ ನಡೆಯಿತು. ಮಧ್ಯಾಹ್ನ ಗಂಟೆ ೧೧ಕ್ಕೆ ರುದ್ರ ಹೋಮದ ಪೂರ್ಣಾಹುತಿ ನಡೆಯಿತು. ಪೂರ್ಣಾಹುತಿ ಸಂದರ್ಭ ರುದ್ರ ಹೋಮದ ಕಲಶದಿಂದ ದೇವರಿಗೆ ಅಭಿಷೇಕ ನಡೆಯಿತು. ಬಳಿಕ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ವಸಂತ ಕೆದಿಲಾಯ ನೇತೃತ್ವದಲ್ಲಿ ಮಹಾಪೂಜೆ ನಡೆಯಿತು. ವಿವಿಧೆಡೆ ಭಜನೆ ಆಯೋಜಿಸಲಾಗಿತ್ತು.ಅಖಿಲ ಕರ್ನಾಟಕ ಶಾಸ್ತ್ರೀಯ ನೃತ್ಯ ಒಕ್ಕೂಟದ ನೇತೃತ್ವದಲ್ಲಿ ದೇವಳದ ನಟರಾಜ ವೇದಿಕೆಯಲ್ಲಿ ಶಾಸ್ತ್ರೀಯ ಸಂಗೀತ ಮತ್ತು ನೃತ್ಯ ಕಾರ್ಯಕ್ರಮ ಪ್ರದರ್ಶನಗೊಂಡಿತು. ವಿವಿಧ ಸಂಗೀತ ಕಲಾ ಶಾಲೆ ಮತ್ತು ಭರತನಾಟ್ಯ ಕಲಾ ಶಾಲೆಗಳ ವಿದ್ಯಾರ್ಥಿಗಳು ನೃತ್ಯ ಪ್ರದರ್ಶನ ನೀಡಿದರು. ದೇವಳದ ಅನ್ನಪೂರ್ಣೇಶ್ವರಿ ಹಾಲ್‌ನಲ್ಲಿ ಎಸ್‌ಪಿವೈಎಸ್‌ಎಸ್ ಯೋಗ ಸಮಿತಿಯ ಸಹಕಾರದಲ್ಲಿ ಸಾಮೂಹಿಕ ಯೋಗ ಶಿವ ನಮಸ್ಕಾರ ನಡೆಯಿತು.
ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರಭಟ್ ಪಂಜಿಗುಡ್ಡೆ, ಸದಸ್ಯರಾದ ವಿನಯ ಸುವರ್ಣ, ಮಹಾಬಲ ರೈ ವಳತ್ತಡ್ಕ, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ಈಶ್ವರ ಬೆಡೇಕರ್, ದಿನೇಶ್ ಪಿ.ವಿ, ಸುಭಾಶ್ ರೈ ಬೆಳ್ಳಿಪ್ಪಾಡಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಹಿರಿಯರಾದ ಕಿಟ್ಟಣ್ಣ ಗೌಡ, ವಾಸ್ತು ಇಂಜಿನಿಯರ್ ಆಗಮ ಪ್ರವೀಣರಾಗಿರುವ ನಗರಸಭಾ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.