50ಕ್ಕೂ ಅಧಿಕ ಜನಪ್ರಿಯ ಪಾನೀಯಗಳು ಹಾಗೂ ವಿವಿಧ ತಿನಿಸುಗಳ ಮೂಲಕ ಮನೆಮಾತಾಗಿರುವ ಎಸ್.ಜಿ. ಸಮೂಹ ಸಂಸ್ಥೆ ಇದೀಗ ಶುಚಿತ್ವ ಮತ್ತು ನೈರ್ಮಲ್ಯಕ್ಕೂ ಆದ್ಯತೆ ನೀಡುವ ಮೂಲಕ ಸಾಮಾಜಿಕ ಕಾಳಜಿಗೆ ಮತ್ತೊಂದು ಹೆಜ್ಜೆ ಇಟ್ಟಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು ರು.50 ಲಕ್ಷ ವೆಚ್ಚದಲ್ಲಿ ನೂತನ ಆಧುನಿಕ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿರುವ ಸಂಸ್ಥೆಯ ವತಿಯಿಂದ ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು.

ಪುತ್ತೂರು : 50ಕ್ಕೂ ಅಧಿಕ ಜನಪ್ರಿಯ ಪಾನೀಯಗಳು ಹಾಗೂ ವಿವಿಧ ತಿನಿಸುಗಳ ಮೂಲಕ ಮನೆಮಾತಾಗಿರುವ ಎಸ್.ಜಿ. ಸಮೂಹ ಸಂಸ್ಥೆ ಇದೀಗ ಶುಚಿತ್ವ ಮತ್ತು ನೈರ್ಮಲ್ಯಕ್ಕೂ ಆದ್ಯತೆ ನೀಡುವ ಮೂಲಕ ಸಾಮಾಜಿಕ ಕಾಳಜಿಗೆ ಮತ್ತೊಂದು ಹೆಜ್ಜೆ ಇಟ್ಟಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಸುಮಾರು ರು.50 ಲಕ್ಷ ವೆಚ್ಚದಲ್ಲಿ ನೂತನ ಆಧುನಿಕ ಶೌಚಾಲಯ ನಿರ್ಮಿಸಿಕೊಡಲು ಮುಂದಾಗಿರುವ ಸಂಸ್ಥೆಯ ವತಿಯಿಂದ ಗುರುವಾರ ಶಿಲಾನ್ಯಾಸ ನೆರವೇರಿಸಲಾಯಿತು.ದೇವಸ್ಥಾನದ ಪ್ರಧಾನ ಅರ್ಚಕ ವೇ.ಮೂ. ವಸಂತ ಕೆದಿಲಾಯ ವೈದಿಕತ್ವದಲ್ಲಿ ಬಿಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಶಿಲಾನ್ಯಾಸ ನೆರವೇರಿಸಿದರು.

ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ತನ್ನ ಉತ್ಪಾದನೆಯ ಒಂದು ಭಾಗವನ್ನು ಸಮಾಜಕ್ಕೆ ಮೀಸಲಿಡುವ ಮೂಲಕ ಬಿಂದು ಸಂಸ್ಥೆ ಸಾಮಾಜಿಕ ಕಾಳಜಿಯನ್ನು ತೋರುತ್ತಿದೆ ಎಂದರು.

ಶಿಲಾನ್ಯಾಸ ನೆರವೇರಿಸಿ ಬಿಂದು ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕಿ ರಂಜಿತಾ ಶಂಕರ್ ಮಾತನಾಡಿ, ‘ಬಿಂದು’ ವಿನಿಂದ ಆರಂಭವಾದ ನಮ್ಮ ಪಯಣ ಇಂದು ‘ಸಿಂಧು’ವಿನಂತೆ ವಿಸ್ತರಿಸಲು ಊರಿನ ಜನರು, ಬಂಧುಗಳು ನೀಡಿದ ಸಹಕಾರ ಹಾಗೂ ಮಹಾಲಿಂಗೇಶ್ವರನ ಕೃಪೆಯೇ ಕಾರಣ ಎಂದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಳಿನಿ ಪಿ. ಶೆಟ್ಟಿ, ಈಶ್ವರ ಬೆಡೇಕರ್, ದಿನೇಶ್ ಪಿ.ವಿ., ಕೃಷ್ಣವೇಣಿ, ಸುಭಾಷ್ ರೈ ಬೆಳ್ಳಿಪ್ಪಾಡಿ, ಮಹಾಬಲ ರೈ ವಳತ್ತಡ್ಕ, ವಿನಯ ಸುವರ್ಣ, ಕಾರ್ಯನಿರ್ವಹಣಾಧಿಕಾರಿ ಕೆ.ವಿ. ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ಬೆಂಗಳೂರಿನ ಅರ್ಬನ್ ಪ್ರೇಮ್ ಸಂಸ್ಥೆಯ ಇಂಜಿನಿಯರ್ ಗಣೇಶ್ ಭಟ್, ಇಂಜಿನಿಯರ್ ಪಿ.ಜಿ. ಜಗನ್ನಿವಾಸ ರಾವ್, ನಡುಬೈಲುಗುತ್ತು ಗೋಪಾಲಕೃಷ್ಣ ಪೂಜಾರಿ, ಪ್ರಕಾಶ್ ಗೌಡ, ಪಿ.ಜಿ. ಚಂದ್ರಶೇಖರ್ ರಾವ್, ಲೋಕೇಶ್ ಪಡ್ಡಾಯೂರು, ರೋಹನ್‌ರಾಜ್, ಸುದೇಶ್ ಚಿಕ್ಕಪುತ್ತೂರು, ಗುತ್ತಿಗೆದಾರ ರಕ್ಷಿತ್, ವಿಶ್ವನಾಥ ಮತ್ತಿತರರಿದ್ದರು.

ಬಿಂದು ಸಂಸ್ಥೆಯ ರಂಜಿತಾ ಶಂಕರ್ ಅವರನ್ನು ದೇವಳದ ವತಿಯಿಂದ ಗೌರವಿಸಲಾಯಿತು.