ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಪೂರ್ವಭಾವಿಯಾಗಿ ನಿರ್ಮಾಣಗೊಳ್ಳಲಿರುವ ಪುತ್ತೂರು ಮೆಡಿಕಲ್ ಬೋಧನಾ ಆಸ್ಪತ್ರೆಗೆ ಶುಕ್ರವಾರ ಶಾಸಕ ಅಶೋಕ್ ಕುಮಾರ್ ರೈ ಭೂಮಿಪೂಜೆ
ಪುತ್ತೂರು: ಪುತ್ತೂರಿನಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಪೂರ್ವಭಾವಿಯಾಗಿ ನಿರ್ಮಾಣಗೊಳ್ಳಲಿರುವ ಪುತ್ತೂರು ಮೆಡಿಕಲ್ ಬೋಧನಾ ಆಸ್ಪತ್ರೆಗೆ ಶುಕ್ರವಾರ ಶಾಸಕ ಅಶೋಕ್ ಕುಮಾರ್ ರೈ ಭೂಮಿಪೂಜೆ ನೆರವೇರಿಸಿದರು. ತಾಲೂಕಿನ ಕೋಡಿಂಬಾಡಿ ಗ್ರಾಮದ ಸೇಡಿಯಾಪುವಿನಲ್ಲಿ ನೂತನ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಈಗಾಗಲೇ ಸರ್ಕಾರದಿಂದ ಸುಮಾರು ರು. ೫೫೦ ಕೋಟಿ ಅನುದಾನ ಮಂಜೂರುಗೊಂಡಿದೆ. ಅದಕ್ಕೂ ಮುನ್ನ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮೆಡಿಕಲ್ ಕಾಲೇಜ್ ನಿರ್ಮಾಣಕ್ಕೆ ಪೂರ್ವಭಾವಿಯಾಗಿ ೩೦೦ ಬೆಡ್‌ಗಳ ಮೆಡಿಕಲ್ ಬೋಧನಾ ಆಸ್ಪತ್ರೆ ನಿರ್ಮಿಸಲು ರು. ೧೮೨ ಕೋಟಿ ಅನುದಾನವನ್ನು ಮಂಜೂರುಗೊಳಿಸಿದ್ದರು. ಈ ಅನುದಾನದಲ್ಲಿ ಮೆಡಿಕಲ್ ಬೋಧನಾ ಕಾಲೇಜ್ ಕಟ್ಟಡ ಕಾಮಗಾರಿಗೆ ಶಾಸಕರು ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಯಾರಿಗೂ ಸಾಯುವ ತನಕ ರಾಜಕೀಯ ಇರುವುದಿಲ್ಲ. ಆದರೆ ಇರುವ ಅವಧಿಯಲ್ಲಿ ಜನರು ನೆನಪಿಡುವ ಕೆಲಸ ಮಾಡಬೇಕು. ಪುತ್ತೂರಿನಲ್ಲಿ ಬೆಂಚ್‌ಮಾರ್ಕ್ ಕೆಲಸ ಆಗಬೇಕು ಎಂಬ ಕನಸು ಕಂಡಿರುವ ನಾನು ಅದನ್ನು ನನಸು ಮಾಡುವ ನಿಟ್ಟಿನಲ್ಲಿ ಈ ಮೆಡಿಕಲ್ ಕಾಲೇಜ್ ತರುವ ಪ್ರಯತ್ನ ಮಾಡಿದ್ದೇನೆ ಎಂದರು.ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕೆಪಿಸಿಸಿ ಕಾರ್ಯದರ್ಶಿ ಎಂ.ಎಸ್. ಮಹಮ್ಮದ್, ಪುಡಾ ಅಧ್ಯಕ್ಷ ಅಮಳ ರಾಮಚಂದ್ರ, ಪಕ್ಷದ ಮುಖಂಡರಾದ ಮುರಳೀಧರ ರೈ ಮಠಂತಬೆಟ್ಟು, ಮಹಮ್ಮದ್ ಬಡಗನ್ನೂರು, ಕೆ.ಪಿ. ಆಳ್ವ, ರೈತ ಮುಖಂಡ ರೂಪೇಶ್ ರೈ ಅಲಿಮಾರ್ ಮತ್ತಿತರರಿದ್ದರು.