ಪುತ್ತೂರು ನಗರಸಭೆ: ಅಧ್ಯಕ್ಷೆ ಲೀಲಾವತಿ ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಅವಿರೋಧ ಆಯ್ಕೆ

| Published : Sep 04 2024, 01:49 AM IST

ಪುತ್ತೂರು ನಗರಸಭೆ: ಅಧ್ಯಕ್ಷೆ ಲೀಲಾವತಿ ನಾಯ್ಕ್, ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಅವಿರೋಧ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ನಗರಸಭೆಯಲ್ಲಿ ಬಿಜೆಪಿ ೨೫ ಸ್ಥಾನ ಹೊಂದಿದೆ. ಪ್ರತಿಪಕ್ಷ ಕಾಂಗ್ರೆಸ್ ೫ ಮತ್ತು ಎಸ್‌ಡಿಪಿಐ ೧ ಸ್ಥಾನ ಹೊಂದಿವೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡದಿರಲು ನಿರ್ಧರಿಸಿದ ಕಾರಣ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಪುತ್ತೂರು

ಪುತ್ತೂರು ನಗರಸಭೆಯ ಎರಡನೇ ಅವಧಿಗೆ ಬಿಜೆಪಿ ಬೆಂಬಲಿತ ಸದಸ್ಯರಾದ ಲೀಲಾವತಿ ನಾಯ್ಕ್ ಅಧ್ಯಕ್ಷೆಯಾಗಿ ಹಾಗೂ ಬಾಲಚಂದ್ರ ಕೆಮ್ಮಿಂಜೆ ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾಗಿದ್ದಾರೆ.

ಮಂಗಳವಾರ ಮಧ್ಯಾಹ್ನ ಚುನಾವಣಾಧಿಕಾರಿಯಾದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರು ನಗರಸಭೆ ಸಭಾಂಗಣದಲ್ಲಿ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಲಾ ಒಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಇಬ್ಬರ ಅವಿರೋಧ ಆಯ್ಕೆಯನ್ನು ಚುನಾವಣಾಧಿಕಾರಿಗಳು ಘೋಷಿಸಿದರು.ನಗರಸಭೆಯಲ್ಲಿ ಬಿಜೆಪಿ ೨೫ ಸ್ಥಾನ ಹೊಂದಿದೆ. ಪ್ರತಿಪಕ್ಷ ಕಾಂಗ್ರೆಸ್ ೫ ಮತ್ತು ಎಸ್‌ಡಿಪಿಐ ೧ ಸ್ಥಾನ ಹೊಂದಿವೆ. ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡದಿರಲು ನಿರ್ಧರಿಸಿದ ಕಾರಣ ಬಿಜೆಪಿಯ ಇಬ್ಬರೂ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾದರು.

ಲೀಲಾವತಿ ಅವರು ೨೦೧೮ರ ಚುನಾವಣೆಯಲ್ಲಿ ಪ್ರಥಮ ಬಾರಿ ಸದಸ್ಯರಾಗಿ ಆಗಿ ಆಯ್ಕೆಯಾಗಿದ್ದು ಮೊದಲ ಸದಸ್ಯತ್ವದಲ್ಲೇ ಅಧ್ಯಕ್ಷ ಸ್ಥಾನದ ಅವಕಾಶ ಪಡೆದುಕೊಂಡಿದ್ದಾರೆ. ಬಾಲಚಂದ್ರ ಕೆಮ್ಮಿಂಜೆ ಅವರು ೨ನೇ ಬಾರಿ ಸದಸ್ಯರಾಗಿದ್ದಾರೆ. ಈ ಹಿಂದೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಬಾಲಚಂದ್ರ ಅವರಿಗೆ ಇದೆ.

ಈ ಬಾರಿ ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿತ್ತು. ಬಹುಮತ ಹೊಂದಿರುವ ಬಿಜೆಪಿಯಲ್ಲಿ ಲೀಲಾವತಿ ಮತ್ತು ಶಶಿಕಲಾ ಅರ್ಹತೆ ಹೊಂದಿದ್ದರು. ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಸ್ಥಾನಕ್ಕೆ ಮೀಸಲಾಗಿತ್ತು.

ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ಕಿಶೋರ್ ಬೊಟ್ಯಾಡಿ, ಪ್ರಸನ್ನ ಕುಮಾರ್ ಮಾರ್ತ, ಪಕ್ಷದ ಪ್ರಮುಖರಾದ ಜಗದೀಶ್ ಶೇಣವ, ಗೋಪಾಲಕೃಷ್ಣ ಹೇರಳೆ, ಅಪ್ಪಯ್ಯ ಮಣಿಯಾಣಿ, ರಾಜೇಶ್ ಬನ್ನೂರು, ಗ್ರಾಮಾಂತರ ಮಂಡಲ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರ್‌ಮಾರು, ನಗರ ಮಂಡಲ ಅಧ್ಯಕ್ಷ ಶಿವಕುಮಾರ್ ಮತ್ತಿತರು ನೂತನ ಅಧ್ಯಕ್ಷ- ಉಪಾಧ್ಯಕ್ಷರನ್ನು ಅಭಿನಂದಿಸಿದರು.