ಪುತ್ತೂರು: ೧೨ ಅನಾಥ ನಿರ್ಗತಿಕರ ರಕ್ಷಣೆ, ಆಶ್ರಮಕ್ಕೆ ಸೇರ್ಪಡೆ

| Published : Apr 05 2024, 01:00 AM IST

ಪುತ್ತೂರು: ೧೨ ಅನಾಥ ನಿರ್ಗತಿಕರ ರಕ್ಷಣೆ, ಆಶ್ರಮಕ್ಕೆ ಸೇರ್ಪಡೆ
Share this Article
  • FB
  • TW
  • Linkdin
  • Email

ಸಾರಾಂಶ

೧೨ ನಿರ್ಗತಿಕ ಅನಾಥರು ಮತ್ತು ವೃದ್ಧರನ್ನು ಮನವೊಲಿಸಿ ನಗರದ ಹೊರವಲಯದಲ್ಲಿನ ಜಿಡೆಕಲ್ಲು ಎಂಬಲ್ಲಿರುವ ದೀಪಶ್ರೀ ವೃದ್ಧಾಶ್ರಮಕ್ಕೆ ಸೇರಿಸಲಾಯಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ನಗರದ ಹಲವು ಭಾಗಗಳಲ್ಲಿ ವಾಸವಿರುವ ಅನಾಥ ನಿರ್ಗತಿಕರು ಮತ್ತು ವೃದ್ಧರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಪುತ್ತೂರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರ ನೇತೃತ್ವದಲ್ಲಿ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬುಧವಾರ ರಾತ್ರಿ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ೧೨ ಮಂದಿ ಅನಾಥ ನಿರ್ಗತಿಕರನ್ನು ಪತ್ತೆ ಹಚ್ಚಿ ಅವರನ್ನು ಆಶ್ರಮಕ್ಕೆ ಸೇರಿಸಿ ಆಶ್ರಯ ಕಲ್ಪಿಸಲಾಯಿತು.

ಬುಧವಾರ ರಾತ್ರಿ ೮ ಗಂಟೆಗೆ ಪ್ರಾರಂಭವಾದ ಕಾರ್ಯಾಚರಣೆಯು ತಡರಾತ್ರಿ ೨ ಗಂಟೆ ತನಕ ನಡೆಯಿತು. ಈ ಸಂದರ್ಭದಲ್ಲಿ ಪತ್ತೆಯಾದ ೧೨ ನಿರ್ಗತಿಕ ಅನಾಥರು ಮತ್ತು ವೃದ್ಧರನ್ನು ಮನವೊಲಿಸಿ ನಗರದ ಹೊರವಲಯದಲ್ಲಿನ ಜಿಡೆಕಲ್ಲು ಎಂಬಲ್ಲಿರುವ ದೀಪಶ್ರೀ ವೃದ್ಧಾಶ್ರಮಕ್ಕೆ ಸೇರಿಸಲಾಯಿತು.

ಕಾರ್ಯಾಚರಣೆಯಲ್ಲಿ ನಗರದ ಏಳ್ಮುಡಿ ಪೆಟ್ರೋಲ್ ಪಂಪ್ ಬಳಿಯಿಂದ ಒಬ್ಬರು, ದರ್ಬೆ ಬಸ್ಸು ತಂಗುದಾಣದಿಂದ ಮೂವರು, ಸರ್ಕಾರಿ ಬಸ್‌ ನಿಲ್ದಾಣದಿಂದ ಮೂವರು, ರೈಲ್ವೆ ನಿಲ್ದಾಣದಿಂದ ಒಬ್ಬರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಂಬಳಗದ್ದೆಯಿಂದ ಒಬ್ಬರು, ಪಡೀಲ್‌ನಿಂದ ಇಬ್ಬರು ಹಾಗೂ ಉಪ್ಪಿನಂಗಡಿ ವೆಂಕಟರಮಣ ದೇವಾಲಯದ ಪಕ್ಕದಲ್ಲಿ ಒಬ್ಬರು ಸೇರಿದಂತೆ ೧೨ ಮಂದಿಯನ್ನು ಪತ್ತೆ ಮಾಡಿ ಅವರಿಗೆ ವ್ಯವಸ್ಥೆ ಕಲ್ಪಿಸಲಾಯಿತು.

ಪುತ್ತೂರಿನ ಕಾರ್ಯಾಚರಣೆಯಲ್ಲಿ ರೋಟರಿ ಕ್ಲಬ್ ಪುತ್ತೂರು ಯುವ ಅಧ್ಯಕ್ಷ ಪಶುಪತಿ ಶರ್ಮ, ವಿಶಾಲ್ ಮಂತೇರೂ, ಗೌರವ್ ಭಾರದ್ವಾಜ್, ಶಿಶು ಅಭಿವೃದ್ಧಿ ಇಲಾಖೆಯ ಯೋಜನೆ ನಿರ್ದೇಶಕರಾದ ಮಂಗಳ ಕಾಳೆ, ನಾಗರತ್ನ, ಸಮಾಜ ಕಲ್ಯಾಣ ಇಲಾಖೆಯ ಕಿಶೋರ್, ಪುತ್ತೂರು ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಕರಿಯ ಎಂ.ಎ., ಶರಣ್ ಪಾಟೀಲ್, ಶಿವರಾಜ್, ರೂಪೇಶ್, ಸಂತೋಷ್, ಹೋಂಗಾರ್ಡ್ ಸುರೇಶ್ ಸಹಕರಿಸಿದರು.

ಉಪ್ಪಿನಂಗಡಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪತ್ರಕರ್ತ ಉದಯಕುಮಾರ್ ಯು.ಎಲ್., ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ವಿದ್ಯಾಲಕ್ಷ್ಮೀ ಪ್ರಭು, ಸ್ಥಳೀಯರಾದ ನಾಗೇಶ್ ಪ್ರಭು ಸಹಕರಿಸಿದರು.