ಸಾರಾಂಶ
ಪುತ್ತೂರು: ಸಾಮೂಹಿಕವಾಗಿ ಸಮರ್ಪಣೆಯ ಭಾವದಿಂದ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಂದ ಒಡೆದ ಮನಸ್ಸುಗಳನ್ನು ಬೆಸೆಯುವ ಕೆಲಸಗಳಾಗುತ್ತಿದೆ. ಜ್ಞಾನ ಮತ್ತು ಪ್ರಜ್ಞೆಗಳಿರುವ ಸ್ಥಳದಲ್ಲಿ ಭಗವಂತ ನೆಲೆಸುತ್ತಾನೆ ಎಂದು ವಿವೇಕಾನಂದ ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್ ಡಾ. ವಿಜಯ ಸರಸ್ವತಿ ಹೇಳಿದ್ದಾರೆ.
ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ಮತ್ತು ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಆಶ್ರಯದಲ್ಲಿ ಶುಕ್ರವಾರ ಮುಕ್ರಂಪಾಡಿ ಸುಭದ್ರಾ ಸಭಾಂಗಣದಲ್ಲಿ ನಡೆದ ಸಾರ್ವಜನಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯ ಧಾರ್ಮಿಕ ಸಭೆಯಲ್ಲಿ ಅವರು ಉಪನ್ಯಾಸ ನೀಡಿದರು.ಲಕ್ಷ್ಮಿ ದೇವಿ ನಮಗೆ ಅಷ್ಟ ಐಶ್ವರ್ಯಗಳನ್ನು ಕೊಡುತ್ತಾರೆ ಎಂಬ ನಂಬಿಕೆ ಇದೆ. ದೇವಾಲಯಕ್ಕೆ ಕೊಂಡೊಯ್ಯುವ ಹಣ್ಣುಕಾಯಿ ಅಲ್ಲಿಂದ ಬರುವಾಗ ಪ್ರಸಾದ ರೂಪವಾಗುವಂತೆ ಭಗವಂತನ ಸೇವೆಯಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ. ದೇವರ ಸಾಮಿಪ್ಯದಿಂದ ನಾನೇ ಎಲ್ಲಾ ಎನ್ನುವುದನ್ನು ನಾನು ಏನೂ ಅಲ್ಲ ಎನಿಸುವ ಜ್ಞಾನವನ್ನು ನೀಡುತ್ತದೆ. ನಾನು ಎನ್ನುವುದು ಮನುಷ್ಯನಿಗೆ ದೊಡ್ಡ ಶತ್ರು. ನಾವು ಎನ್ನುವ ಭಾವದಿಂದ ಭಗವಂತನ ಕಡೆಗೆ ಹೋಗಬಹುದು ಎಂದು ಹೇಳಿದರು.ನ.೩೦ ರಂದು ನಡೆಯುವ ಮೂರನೇ ವರ್ಷದ ಶ್ರೀನಿವಾಸ ಕಲ್ಯಾಣೋತ್ಸವ ಹಾಗೂ ಸಾಮೂಹಿಕ ಮಾಂಗಲ್ಯಂ ತಂತುನಾನೇನ ಸಾಮೂಹಿಕ ವಿವಾಹದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಸಾಮೂಹಿಕ ವಿವಾಹಕ್ಕೆ ಈಗಾಗಲೇ ನೋಂದಣಿ ಮಾಡಿರುವ ಎರಡು ಕುಟುಂಬಗಳ ಮನೆಯವರಿಗೆ ನೋಂದಣಿ ಪ್ರಮಾಣಪತ್ರ ಹಸ್ತಾಂತರಿಸಲಾಯಿತು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವ ಸಂಭ್ರಮದ ಅಂಗವಾಗಿ ೧೦೦ ಬೂತ್‌ಗಳಿಗೆ ರಕ್ಷಾ ಬಂಧನಕ್ಕಾಗಿ ರಕ್ಷೆಯನ್ನು ನೀಡಲಾಯಿತು.
ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ ಅಧ್ಯಕ್ಷೆ ಪ್ರೇಮ ರಾಧಾಕೃಷ್ಣ ರೈ ಅಧ್ಯಕ್ಷತೆ ವಹಿಸಿದ್ದರು.ಗೌರವಾಧ್ಯಕ್ಷೆ ರಜತಾ ಗಿರೀಶ್ ಭಟ್, ಅಕ್ಷಯ ಕಾಲೇಜಿನ ಆಡಳಿತ ನಿರ್ದೇಶಕಿ ಕಲಾವತಿ ಜಯಂತ್ ನಡುಬೈಲು, ರಾಧಿಕಾ ದಿನೇಶ್ ರೈ ಮಡಪ್ಪಾಡಿ, ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಅಧ್ಯಕ್ಷ ಮಹೇಂದ್ರ ವರ್ಮ ಬಜತ್ತೂರು ಶುಭಹಾರೈಸಿದರು.ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ನ ಸಂಚಾಲಕ ಅರುಣ್ ಪುತ್ತಿಲ ಸ್ವಾಗತಿಸಿದರು. ಕಾರ್ಯದರ್ಶಿ ಅನ್ನಪೂರ್ಣ ಬಳ್ಳಾಲ್ ವಂದಿಸಿದರು. ನವೀನ್ ರೈ ಪಂಜಳ ಹಾಗೂ ರವಿ ಕುಮಾರ್ ರೈ ಮಠ ಕಾರ್ಯಕ್ರಮ ನಿರ್ವಹಿಸಿದರು.ಬೆಳಗ್ಗೆ ಭಜನ ಕಾರ್ಯಕ್ರಮವನ್ನು ಜಯಶ್ರೀ ಆಚಾರ್ಯ ಕೆಮ್ಮಿಂಜೆ ಉದ್ಘಾಟಿಸಿದರು. ಸುಮಾರು ೪ ಸಾವಿರ ಮಂದಿ ವರಮಹಾಲಕ್ಷ್ಮೀ ಪೂಜೆ ಸೇವೆ ಮಾಡಿ ಪ್ರಸಾದ ಸ್ವೀಕರಿಸಿದರು.