ಸಾರಾಂಶ
ಕನ್ನಡಪ್ರಭ ವಾರ್ತೆ ಪುತ್ತೂರು
ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿರುವ ಶ್ರೀ ಶಾರದಾ ಭಜನಾ ಮಂದಿರದಲ್ಲಿ ನಡೆಸಲಾಗುತ್ತಿರುವ ೯೦ ನೇ ವರ್ಷದ ನವರಾತ್ರಿ ಉತ್ಸವ ‘ಪುತ್ತೂರು ಶಾರದೋತ್ಸವ’ ಕಾರ್ಯಕ್ರಮ ಅ.೩ ರಿಂದ ೧೨ ರ ತನಕ ವಿವಿಧ ವೈದಿಕ, ಧಾರ್ಮಿಕ ಸಭಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶ್ರೀ ಶಾರದಾ ಭಜನಾ ಮಂದಿರದ ಆಡಳಿತ ಮಂಡಳಿ ಗೌರವಾಧ್ಯಕ್ಷ ಸೀತಾರಾಮ ರೈ ಕೆದಂಬಾಡಿಗುತ್ತು ತಿಳಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬುಧವಾರ ಸಂಜೆ ದರ್ಬೆ ವೃತ್ತದಿಂದ ಭಜನಾ ಮಂದಿರಕ್ಕೆ ಹೊರೆಕಾಣಿಕೆ ಮೆರವಣಿಗೆ ನಡೆಯಲಿದ್ದು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. 3ರಂದು ನವರಾತ್ರಿ ಪೂಜೆ ಆರಂಭವಾಗಲಿದೆ. ಈ ಬಾರಿ ವಿಶೇಷವಾಗಿ ‘ಅಕ್ಷರಯಜ್ಞ’ ಸೇವೆ ನಡೆಯಲಿದ್ದು, ಇದಕ್ಕಾಗಿ ಭಕ್ತಾದಿಗಳ ಸಹಿತ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ನಡೆಯಲಿದೆ. ಅ.೯ ಬೆಳಗ್ಗೆ ಶ್ರೀ ಶಾರದಾ ವಿಗ್ರಹ ಪ್ರತಿಷ್ಠೆ ಬಳಿಕ ಅಕ್ಷರಯಜ್ಞ, ಸರಸ್ವತಿ ಪೂಜೆ ನಡೆಯಲಿದೆ. ಅ.೧೦ರಂದು ಬೆಳಗ್ಗೆ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಚಂಡಿಕಾ ಹೋಮ ನಡೆಯಲಿದೆ ಎಂದರು.
೧೧ ರಂದು ಸಂಜೆ ನಡೆಯಲಿರುವ ಸಭಾ ಕಾರ್ಯಕ್ರಮವನ್ನು ಮಾಜಿ ಶಾಸಕ ಸಂಜೀವ ಮಠಂದೂರು ಉದ್ಘಾಟಿಸಲಿದ್ದಾರೆ. ಬ್ರಹ್ಮಶ್ರೀ ಕೆಮ್ಮಿಂಜೆ ಕಾರ್ತಿಕ ತಂತ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಶ್ರೀ ಶಾರದಾ ಭಜನಾ ಮಂದಿರದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. 12ರಂದು ಬೆಳಿಗ್ಗೆ ಅಕ್ಷರಾಭ್ಯಾಸ ನಡೆಯಲಿದೆ. ಸಂಜೆ ಶ್ರೀ ಶಾರದಾ ದೇವಿಯ ಶೋಭಾಯಾತ್ರೆ ಹಾಗೂ ವಿಗ್ರಹ ಜಲಸ್ತಂಭನ ನಡೆಯಲಿದೆ.ಪ್ರತೀ ದಿನ ಸಂಜೆ ೪ ರಿಂದ ೭.೩೦ ರ ತನಕ ಸಾಂಸ್ಕೃತಿ ಕಾರ್ಯಕ್ರಮ, ಭಜನೆ, ರಾತ್ರಿ ೮.೩೦ ಕ್ಕೆ ಮಹಾಪೂಜೆ, ಮಂಗಳ ನಡೆದು ಬಳಿಕ ಅನ್ನಸಂತರ್ಪನೆ ಜರಗಲಿದೆ. ನವರಾತ್ರಿ ಉತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತಾಧಿಕಾರಿ ಕೆ.ನವೀನ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸಮೂರ್ತಿ, ಶ್ರೀ ಶಾರದಾ ಭಜನಾ ಮಂದಿರದ ನಿಕಟಪೂರ್ವ ಅಧ್ಯಕ್ಷ ಸಾಯಿರಾಮ್ ರಾವ್ ಸಹಿತ ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಅ.೧೨ ಶನಿವಾರ ಸಂಜೆ ಬೊಳುವಾರು ವೃತ್ತದಲ್ಲಿ ಶ್ರೀ ಶಾರದಾ ದೇವಿಯ ಭವ್ಯ ಶೋಭಾಯಾತ್ರೆಗೆ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಲಿದ್ದಾರೆ. ಬಳಿಕ ಶೋಭಾಯಾತ್ರೆ ವೇದಘೋಷ, ಚೆಂಡೆ, ವಾದ್ಯಘೋಷ, ವಾದ್ಯವೃಂದ, ಕುಣಿತ ಭಜನೆಯೊಂದಿಗೆ ಮುಖ್ಯ ರಸ್ತೆಯಲ್ಲಿ ಚಲಿಸಿ ದರ್ಬೆ ವೃತ್ತಕ್ಕೆ ಸಾಗಿ ಬಳಿಕ ಪುನಃ ಹಿಂತಿರುಗಿ ಜಲಸ್ತಂಭನಗೊಳ್ಳಲಿದೆ ಎಂದು ತಿಳಿಸಿದರು.
ಶೋಭಾಯಾತ್ರೆಯಲ್ಲಿ ಡಿಜೆ ಹಾಗೂ ಪಟಾಕಿಗೆ ಅವಕಾಶವಿಲ್ಲ ಎಂದು ತಿಳಿಸಿದರು.ಭಜನಾ ಮಂದಿರದ ಪ್ರಧಾನ ಕಾರ್ಯದರ್ಶಿ ಜಯಂತ ಉರ್ಲಾಂಡಿ, ಹೊರೆಕಾಣಿಕೆ ಸಂಚಾಲಕ ರಾಜೇಶ್ ಬನ್ನೂರು, ಡಾ.ಸುರೇಶ್ ಪುತ್ತೂರಾಯ, ಶೋಭಾಯಾತ್ರೆ ಸಂಚಾಲಕ ನವೀನ್ ಕುಲಾಲ್ ಇದ್ದರು.