ಸಾರಾಂಶ
ರಾಜ್ಯ ಸರ್ಕಾರವು ಪ್ರಚಾರವಿಲ್ಲದೆ ಪ್ರತೀ ಕುಟುಂಬಕ್ಕೆ ತಿಂಗಳಿಗೆ ೫ ಸಾವಿರದಷ್ಟು ನೀಡುತ್ತಿದ್ದೇವೆ. ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ತಗ್ಗಿಸುವುದು ಗ್ಯಾರಂಟಿ ಯೋಜನೆಯ ಭಾಗವಾಗಿದ್ದು, ಬಡತನ ಕಡಿಮೆಯಾದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯವಿದೆ ಎಂದರು.
ಕನ್ನಡಪ್ರಭ ವಾರ್ತೆ ಪುತ್ತೂರು
ಚುನಾವಣಾ ಸಂದರ್ಭದಲ್ಲಿ ಘೋಷಿಸಿದ ೫ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ಕೆಲವೇ ದಿಗಳಲ್ಲಿ ಜನರಿಗೆ ತಲುಪಿಸಿದ್ದು ಸಿದ್ದರಾಮಯ್ಯ ಸರ್ಕಾರ ಮಾತ್ರ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವ ತನಕ ಗ್ಯಾರಂಟಿ ಯೋಜನೆಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ರಾಜ್ಯದ ಯಾವುದೇ ಹೆಣ್ಣು ಮಕ್ಕಳು ಸರ್ಕಾರದ ಗ್ಯಾರಂಟಿ ಯೋಜನೆಯನ್ನು ನಿರಾಕರಿಸಿಲ್ಲ. ಗ್ಯಾರಂಟಿ ಯೋಜನೆಯಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಬರುವುದಿಲ್ಲ ಹೇಳುತ್ತಿದ್ದವರಿಗೆ ನಾವು ಅಭಿವೃದ್ಧಿಯ ಮೂಲಕ ಉತ್ತರ ನೀಡುತ್ತಿದ್ದೇವೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.ಅವರು ದ.ಕ. ಜಿಲ್ಲಾಡಳಿತ, ಪುತ್ತೂರು ತಾಲೂಕು ಆಡಳಿತದ ವತಿಯಿಂದ ಪುತ್ತೂರಿನ ಕಿಲ್ಲೆ ಮೈದಾನದಲ್ಲಿ ಗುರುವಾರ ನಡೆದ ರಾಜ್ಯ ಸರ್ಕಾರದ ೫ ಗ್ಯಾರಂಟಿ ಯೋಜನೆಯ ಫಲಾನುಭವಿಗಳ ತಾಲೂಕು ಮಟ್ಟದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸರ್ಕಾರವು ಪ್ರಚಾರವಿಲ್ಲದೆ ಪ್ರತೀ ಕುಟುಂಬಕ್ಕೆ ತಿಂಗಳಿಗೆ ೫ ಸಾವಿರದಷ್ಟು ನೀಡುತ್ತಿದ್ದೇವೆ. ಬಡವರ ಮತ್ತು ಶ್ರೀಮಂತರ ನಡುವಿನ ಅಂತರ ತಗ್ಗಿಸುವುದು ಗ್ಯಾರಂಟಿ ಯೋಜನೆಯ ಭಾಗವಾಗಿದ್ದು, ಬಡತನ ಕಡಿಮೆಯಾದಾಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯವಿದೆ ಎಂದರು. ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ಮಾತನಾಡಿ ಕಾಂಗ್ರೆಸ್ ಸರ್ಕಾರ ಬದುಕು ಕೊಡುವ ಕೆಲಸವನ್ನು ಮಾಡಿದೆ. ಚುನಾವಣೆಯ ವೇಳೆ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಿ, ರಾಜ್ಯದ ಜನತೆಯ ಮನಗೆದ್ದಿದೆ. ಗ್ಯಾರಂಟಿ ಯೋಜನೆಗಳಿಗಾಗಿ ವರ್ಷಕ್ಕೆ ೬೪ ಸಾವಿರ ಕೋಟಿಯಷ್ಟು ಹಣ ಖರ್ಚು ಮಾಡಲಾಗುತ್ತಿದೆ. ಹಾಗೆಂದು ಅಭಿವೃದ್ಧಿ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಸಿದ್ದರಾಮಯ್ಯ ಸಮರ್ಥವಾಗಿ ನಿಭಾಯಿಸಿದ್ದಾರೆ ಎಂದರು.ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಪೈಕಿ ನಯನಾ ರೈ ನೆಲ್ಲಿಕಟ್ಟೆ, ವಿಶಾಲಾಕ್ಷಿ ಬನ್ನೂರು, ಆಶಾಲತಾ ನೈತಾಡಿ, ಭವ್ಯಾ ಬನ್ನೂರು, ತಾಜು ರಫೀಕ್, ಹನಿಮಿನೇಜಸ್, ರಜಿಯಾ ಬಪ್ಪಳಿಗೆ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಗ್ಯಾರಂಟಿ ಯೋಜನೆಗಳ ಪೈಕಿ ಗೃಹಲಕ್ಷ್ಮೀ ಯೋಜನೆಯ ಕುರಿತು ತಹಸೀಲ್ದಾರ್ ಪುರಂದರ ಹೆಗ್ಡೆ, ಶಕ್ತಿ ಯೋಜನೆಯ ಕುರಿತು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ, ಗೃಹಜ್ಯೋತಿ ಯೋಜನೆಯ ಕುರಿತು ಪುತ್ತೂರು ವಿಭಾಗದ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ರಾಮಚಂದ್ರ, ಯುವನಿಧಿ ಯೋಜನೆಯ ಕುರಿತು ದ.ಕ. ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ ಮಾಹಿತಿ ನೀಡಿದರು. ವಿವಿಧ ಯೋಜನೆಗಳ ಫಲಾನುಭವಿಗಳಾದ ತಾಜು ರಫೀಕ್ ರೆಂಜಲಾಡಿ, ಅನಿ ಮಿನೇಜಸ್, ನಯನಾ ರೈ, ವಿಶಾಲಾಕ್ಷಿ ಬನ್ನೂರು, ಆಶಾಲತಾ, ಸುಜಾತ ಇಡಬೆಟ್ಟು ಮತ್ತು ರಝಿಯಾ ಬಪ್ಪಳಿಗೆ ಅನಿಸಿಕೆ ವ್ಯಕ್ತ ಪಡಿಸಿದರು. ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿ ಉಸ್ಮಾನ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪುರ, ನಗರಸಭೆಯ ಪೌರಾಯುಕ್ತ ಮಧು.ಎಸ್. ಮನೋಹರ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಮತ್ತಿತರರು ಉಪಸ್ಥಿತರಿದ್ದರು. ಉಪವಿಭಾಗಾಧಿಕಾರಿ ಜುಬಿನ್ ಮೊಹಪಾತ್ರ ಸ್ವಾಗತಿಸಿದರು. ತಹಸೀಲ್ದಾರ್ ಪುರಂದರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.