ಪುತ್ತೂರು: ಕರ್ಣಾಟಕ ಬ್ಯಾಂಕಿನ ಸಿ.ಎಸ್.ಆರ್.ನಿಧಿಯಿಂದ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಅನ್ನ ಪ್ರಸಾದ ವಿತರಣೆಗಾಗಿ ಅನ್ನ ಬೇಯಿಸಲೆಂದು ನೀಡಲಾದ ರು. ೫ ಲಕ್ಷ ವೆಚ್ಚದ ಸೌದೆಯ ಸ್ಟೀಮ್ ಒಲೆಯನ್ನು ಶನಿವಾರ ಉದ್ಘಾಟಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ಮಾತನಾಡಿ, ದೇವಸ್ಥಾನದಲ್ಲಿ ಪ್ರತಿನಿತ್ಯವೂ ೪ ಸಾವಿರದಷ್ಟು ಭಕ್ತರಿಗೆ ವ್ಯವಸ್ಥಿತ ರೀತಿಯಲ್ಲಿ ಅನ್ನಪ್ರಸಾದ ವಿತರಿಸಲಾಗುತ್ತಿದೆ. ಇದಕ್ಕಾಗಿ ಬಳಸುವ ಗ್ಯಾಸ್ ಹೊರೆ ತಪ್ಪಿಸಲು ಭಕ್ತರು ಕಟ್ಟಿಗೆಯನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ. ಇದೀಗ ಇಲ್ಲಿ ಆರೇಳು ತಿಂಗಳಿಗೆ ಬೇಕಾದಷ್ಟು ಕಟ್ಟಿಗೆಯ ಸಂಗ್ರಹವಿದೆ. ಪ್ರಸ್ತುತ ಕರ್ಣಾಟಕ ಬ್ಯಾಂಕಿನಿಂದ ಸೌದೆಯ ಸ್ಟೀಮ್ ಒಲೆಯನ್ನು ಕೊಡುಗೆಯಾಗಿ ನೀಡಿದ್ದಾರೆ. ಅಲ್ಲದೆ ಸುಮಾರು ರು ೩೫ ಲಕ್ಷ ವೆಚ್ಚದ ಅಕ್ಕಿಯನ್ನೂ ಭಕ್ತರು ಕೊಡುಗೆಯಾಗಿ ನೀಡಿದ್ದಾರೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕರ್ಣಾಟಕ ಬ್ಯಾಂಕಿನ ಸೀನಿಯರ್ ಮ್ಯಾನೇಜರ್ ಶ್ರೀಶ ಕುಮಾರ್ ಹಾಗೂ ಸಿಬಂದಿ ಕಿರಣ್ ಕುಮಾರ್ ಅವರನ್ನು ಬ್ಯಾಂಕಿನ ಪರವಾಗಿ ಕ್ಷೇತ್ರದಿಂದ ಗೌರವಿಸಲಾಯಿತು. ಪ್ರಧಾನ ಅರ್ಚಕ ವೇ.ಮೂ. ವಿ.ಎಸ್.ಭಟ್ ಅವರು ಪ್ರಾರ್ಥಿಸಿದರು. ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಬಿ.ಈಶ್ವರ ಬೇಡೇಕರ್, ಕೃಷ್ಣವೇಣಿ, ಮಹಾಬಲ ರೈ ವಳತ್ತಡ್ಕ, ಸುಭಾಷ್ ರೈ ಬೆಳ್ಳಿಪ್ಪಾಡಿ, ದಿನೇಶ್ ಕುಲಾಲ್ ಪಿ.ವಿ. ಮತ್ತಿತರರು ಉಪಸ್ಥಿತರಿದ್ದರು.