ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬುಧವಾರ ಸಂಜೆ ಸುಮಾರು ಒಂದೂವರೆ ತಾಸು ಗುಡುಗು, ಗಾಳಿ ಸಹಿತ ಬಿರುಸಿನ ಮಳೆಯಾಗಿದೆ. ನಗರದ ಹಲವು ಕಡೆಗಳಲ್ಲಿ ಗಾಳಿಯಿಂದಾಗಿ ಹಾನಿ ಸಂಭವಿಸಿದೆ. ಪುತ್ತೂರು ತಾಲೂಕಿನಾದ್ಯಂತ ಸಂಜೆಯಿಂದ ರಾತ್ರಿಯ ತನಕ ವಿದ್ಯುತ್ ಸ್ಥಗಿತಗೊಂಡಿತ್ತು.

ಪುತ್ತೂರು ; ಪುತ್ತೂರು ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲಿ ಬುಧವಾರ ಸಂಜೆ ಸುಮಾರು ಒಂದೂವರೆ ತಾಸು ಗುಡುಗು, ಗಾಳಿ ಸಹಿತ ಬಿರುಸಿನ ಮಳೆಯಾಗಿದೆ. ನಗರದ ಹಲವು ಕಡೆಗಳಲ್ಲಿ ಗಾಳಿಯಿಂದಾಗಿ ಹಾನಿ ಸಂಭವಿಸಿದೆ. ಪುತ್ತೂರು ತಾಲೂಕಿನಾದ್ಯಂತ ಸಂಜೆಯಿಂದ ರಾತ್ರಿಯ ತನಕ ವಿದ್ಯುತ್ ಸ್ಥಗಿತಗೊಂಡಿತ್ತು. ನಗರದ ಆನೆಮಜಲು ಬಳಿಯಲ್ಲಿರುವ ನೂತನ ಕೋರ್ಟು ಆವರಣದ ಗೋಡೆಯು ಕುಸಿದು ರಸ್ತೆಗೆ ಬಿದ್ದು ಆನೆಮಜಲು ದೈಯ್ಯರಮಾಡ ರಸ್ತೆಯಲ್ಲಿ ಸಂಚಾರಕ್ಕೆ ತೊಡಕಾಗಿದೆ. ಕೋರ್ಟ್‌ನ ಇನ್ನೊಂದು ಬದಿಯ ಆವರಣ ಗೋಡೆಯೂ ಕುಸಿಯುವ ಹಂತದಲ್ಲಿದೆ.

ಬಿರುಸಿನ ಗಾಳಿಗೆ ಪುತ್ತೂರು ನಗರದ ಹೊರವಲಯದ ಕೇಪುಳು ಎಂಬಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ಕೆಲ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಬಳಿಕ ಮೆಸ್ಕಾಂ ಸಿಬ್ಬಂದಿಗಳು ಮರವನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸಿದರು.

ನಗರದ ಬನ್ನೂರು ಜೈನರಗುರಿ ಎಂಬಲ್ಲಿ ಮರದ ಕೊಂಬೆಯೊಂದು ವಿದ್ಯುತ್ ಕಂಬದ ಮೇಲೆ ತುಂಡಾಗಿ ಬಿದ್ದ ಪರಿಣಾಮದಿಂದ ವಿದ್ಯುತ್ ಕಂಬ ಹಾಗೂ ತಂತಿಗೆ ಹಾನಿಯಾಗಿದೆ. ಸ್ಥಳಕ್ಕೆ ಆಗಮಿಸಿದ ಮೆಸ್ಕಾಂ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು.