ಪುತ್ತೂರು: ನಾಳೆ ಆಂಜನೇಯ ಯಕ್ಷಗಾನ ಕಲಾ ಸಂಘದ 55ರ ಸಂಭ್ರಮ

| Published : Dec 22 2023, 01:30 AM IST

ಪುತ್ತೂರು: ನಾಳೆ ಆಂಜನೇಯ ಯಕ್ಷಗಾನ ಕಲಾ ಸಂಘದ 55ರ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

ಸಂಜೆ ಗಂಟೆ 5 ಗಂಟೆಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಆಂಜನೇಯ 55 ಸಂಭ್ರಮ- ಸಭಾ ಕಾರ್ಯಕ್ರಮ ನಡೆಯಲಿದೆ. `ಶ್ರೀ ಆಂಜನೇಯ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀ ನಾರಾಯಣ ಭಟ್ ಅವರಿಗೆ ಹಾಗೂ ಶ್ರೀ ಆಂಜನೇಯ 55 ರ ಗೌರವವನ್ನು ಅರ್ಥಧಾರಿ ಜಬ್ಬಾರ್ ಸಮೋ ಅವರಿಗೆ ಪ್ರದಾನ ಮಾಡಲಾಗುವುದು.

ಕನ್ನಡಪ್ರಭವಾರ್ತೆ ಪುತ್ತೂರುಬೊಳುವಾರು ಆಂಜನೇಯ ಯಕ್ಷಗಾನ ಕಲಾ ಸಂಘದ 55 ರ ಸಂಭ್ರಮ `ಆಂಜನೇಯ 55 ಕಾರ್ಯಕ್ರಮವು ಡಿ.23 ರಂದು ಬೆಳಗ್ಗೆ 9 ರಿಂದ ರಾತ್ರಿ 9ರ ತನಕ ಪುತ್ತೂರಿನ ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಳದ ಮುಂಭಾಗದಲ್ಲಿರುವ ನಟರಾಜ ವೇದಿಕೆಯಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 9.30ಕ್ಕೆ ಒಡಿಯೂರು ಕ್ಷೇತ್ರದ ಸಾದ್ವಿ ಮಾತಾನಂದಮಯಿ ಅವರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಮಹಾಲಿಂಗೇಶ್ವರ ದೇವಳದ ಕಾರ್ಯನಿರ್ವಹಣಾಧಿಕಾರಿ ಕೆ.ವಿ ಶ್ರೀನಿವಾಸ್ ಉಪಸ್ಥಿತರಿರುತ್ತಾರೆ. ಬೆಳಗ್ಗೆ 10 ರಿಂದ 11 ಗಂಟೆ ತನಕ ವಿದುಷಿ ಪವಿತ್ರಾ ರೂಪೇಶ್ ಅವರಿಂದ ಶಾಸ್ತ್ರೀಯ ಸಂಗೀತ, ಬಳಿಕ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಕಲಾವಿದರಿಂದ `ಹನುಮಾನ್ ಚಾಲೀಸ್ ತಾಳಮದ್ದಳೆ, 12.30ರಿಂದ ಕೆ.ಮಹಾಬಲ ಕೂಡ್ಲು ಅವರಿಂದ ಶರಸೇತು ಕಥಾಭಾಗದ ಹರಿಕಥಾ ಕಾಲಕ್ಷೇಪ, ಅಪರಾಹ್ನ ಗಂಟೆ 1.45 ರಿಂದ ಪುತ್ತೂರಿನ ವಿದುಷಿ ಮೇಘ ದೇವಾಡಿಗ ಅವರಿಂದ ಭರತನಾಟ್ಯ, ಸಂಜೆ 3 ರಿಂದ `ವೀರಮಣಿ ತಾಳಮದ್ದಳೆ ನಡೆಯಲಿದೆ.

ಸಂಜೆ ಗಂಟೆ 5 ಗಂಟೆಗೆ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಶ್ರೀ ಆಂಜನೇಯ 55 ಸಂಭ್ರಮ- ಸಭಾ ಕಾರ್ಯಕ್ರಮ ನಡೆಯಲಿದೆ. `ಶ್ರೀ ಆಂಜನೇಯ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ಪೂಕಳ ಲಕ್ಷ್ಮೀ ನಾರಾಯಣ ಭಟ್ ಅವರಿಗೆ ಹಾಗೂ ಶ್ರೀ ಆಂಜನೇಯ 55 ರ ಗೌರವವನ್ನು ಅರ್ಥಧಾರಿ ಜಬ್ಬಾರ್ ಸಮೋ ಅವರಿಗೆ ಪ್ರದಾನ ಮಾಡಲಾಗುವುದು. ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಉದ್ಯಮಿ ಕೆ.ಗೋಪಾಲಕೃಷ್ಣ ಭಟ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಕಲ್ಲಮೆ ಶ್ರೀರಾಘವೇಂದ್ರ ಮಠದ ವ್ಯವಸ್ಥಾಪಕ ಡಾ.ಕೆ.ಸೀತಾರಾಮ ಭಟ್ ಮತ್ತು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಸದಸ್ಯೆ ಬಿ.ಕೆ.ವೀಣಾ ಅವರು ಶುಭಾಶಂಸನೆ ಮತ್ತು ಡಾ. ವಿದ್ವಾನ್ ವಿನಾಯಕ ಭಟ್ ಗಾಳಿಮನೆ ಅವರು ಅಭಿನಂದನ ನುಡಿಗಳನ್ನಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಆಂಜನೇಯ ಯಕ್ಷಗಾನ ಕಲಾ ಸಂಘದ ಗೌರವ ಕಾರ್ಯದರ್ಶಿ ಟಿ. ರಂಗನಾಥ್ ರಾವ್, ಕೋಶಾಧಿಕಾರಿ ದುಗ್ಗಪ್ಪ ಎನ್, ಶ್ರೀ ಆಂಜನೇಯ ಮಹಿಳಾ ಯಕ್ಷಗಾನ ಸಂಘದ ಅಧ್ಯಕ್ಷೆ ಪ್ರೇಮಲತಾ ಟಿ. ರಾವ್, ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿ ಉಪಸ್ಥಿತರಿದ್ದರು.