ಪುತ್ತೂರು: ಪುಡಾ ಅಧ್ಯಕ್ಷ ನೇಮಕ ರದ್ದು ಕೋರಿ ರಿಟ್‌

| Published : May 09 2025, 12:31 AM IST

ಸಾರಾಂಶ

ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅವರನ್ನು ಸರ್ಕಾರ ನೇಮಿಸಿದ್ದು. ಈ ನೇಮಕಾತಿ ರದ್ದುಪಡಿಸಬೇಕೆಂದು ಕೋರಿ ಪುತ್ತೂರಿನ ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಪುತ್ತೂರುಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಅಮಳ ರಾಮಚಂದ್ರ ಅವರನ್ನು ಸರ್ಕಾರ ನೇಮಿಸಿದ್ದು. ಈ ನೇಮಕಾತಿ ರದ್ದುಪಡಿಸಬೇಕೆಂದು ಕೋರಿ ಪುತ್ತೂರಿನ ಪುರಸಭಾ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದಾರೆ. ನೇಮಕ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.ಪ್ರಾಧಿಕಾರದ ನಿಯಮಗಳ ಪ್ರಕಾರ, ಅಧ್ಯಕ್ಷ ಸ್ಥಾನ ಪಡೆಯುವವರು ಸ್ಥಳೀಯ ಯೋಜನಾ ಪ್ರದೇಶದ ನಿವಾಸಿಯಾಗಿರಬೇಕು ಮತ್ತು ಪುತ್ತೂರು ನಗರಸಭಾ ವ್ಯಾಪ್ತಿಯಲ್ಲಿ ವಾಸಿಸುತ್ತಿರಬೇಕು. ಆದರೆ, ಅಮಳ ರಾಮಚಂದ್ರ ಮೂಲತಃ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಅಮಳ ನಿವಾಸಿಯಾಗಿದ್ದು, ಅಲ್ಲಿನ ಮತದಾರರಾಗಿದ್ದಾರೆ. ಅಲ್ಲದೆ, ಅವರು ಕೊಳ್ತಿಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರೂ ಆಗಿದ್ದಾರೆ.ಈ ಹುದ್ದೆ ಪಡೆಯುವ ಸಲುವಾಗಿ, ಅವರು ಬಾಡಿಗೆ ಕರಾರು ಪತ್ರವನ್ನು ಬಳಸಿ ತಮ್ಮ ವಾಸಸ್ಥಳದ ವಿಳಾಸವನ್ನು ಆಧಾರ್ ಕಾರ್ಡ್ನಲ್ಲಿ ಬದಲಾಯಿಸಿಕೊಂಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿಗೂ ದೂರು ಸಲ್ಲಿಸಲಾಗಿದೆ.ಅಮಳ ರಾಮಚಂದ್ರ ಅವರ ನೇಮಕಾತಿ ನಿಯಮಬಾಹಿರವಾಗಿದ್ದು ಅದನ್ನು ರದ್ದುಗೊಳಿಸಬೇಕು ಮತ್ತು ನೇಮಕಾತಿಗೆ ತಕ್ಷಣವೇ ತಡೆಯಾಜ್ಞೆ ನೀಡಬೇಕು ಎಂದು ರಾಜೇಶ್ ಬನ್ನೂರು ತಮ್ಮ ವಕೀಲರ ಮೂಲಕ ಹೈಕೋರ್ಟ್‌ ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಕೋರಿದ್ದಾರೆ.ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಹೈಕೋರ್ಟ್ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರು. ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಿಗೆ ಹಾಗೂ ಪ್ರಾಧಿಕಾರಕ್ಕೆ ತುರ್ತು ನೋಟಿಸ್ ಜಾರಿಗೊಳಿಸಲು ಆದೇಶಿಸಿ, ವಿಚಾರಣೆಯನ್ನು ಜೂ. 9ಕ್ಕೆ ಮುಂದೂಡಿದ್ದಾರೆ.ಪುಡಾ ಅಧ್ಯಕ್ಷರ ಸ್ಪಷ್ಟನೆ:ಕಳೆದ ಕೆಲ ವರ್ಷದಿಂದ ಪುತ್ತೂರಿನ ರಾಜಕೀಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹಿನ್ನೆಲೆಯಲ್ಲಿ, ಮತದಾರರ ಪಟ್ಟಿ ಹಾಗೂ ಆಧಾ‌ರ್ ಕಾರ್ಡ್''''''''ನಲ್ಲಿನ ವಿಳಾಸವನ್ನು ಪುತ್ತೂರಿಗೆ ವರ್ಗಾಯಿಸಿಕೊಂಡಿದ್ದೇನೆ ಹೊರತು, ಇದರಲ್ಲಿ ಯಾವುದೇ ದುರುದ್ದೇಶವಿಲ್ಲ. ಈ ಎಲ್ಲಾ ಅಂಶಗಳನ್ನು ಪರಿಗಣಿಸಿ ಸರ್ಕಾರವೇ ನನ್ನನ್ನು ಈ ಹುದ್ದೆಗೆ ನೇಮಕ ಮಾಡಿದೆ. ನಾನಾಗಿ ಅರ್ಜಿ ಸಲ್ಲಿಸಿ ಈ ಹುದ್ದೆಯನ್ನು ಪಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಸರ್ಕಾರ ಬಯಸುವಷ್ಟು ಕಾಲ ಈ ಹುದ್ದೆಯ ಮೂಲಕ ಸಾಮಾಜಿಕ ಸೇವೆ ಮಾಡಲು ನಾನು ಸಿದ್ದ. ಒಂದು ವೇಳೆ ನನ್ನ ನೇಮಕಾತಿ ನಿಯಮ ಬಾಹಿರ ಎಂದು ನ್ಯಾಯಾಲಯ ತೀರ್ಪು ನೀಡಿದರೆ, ತಕ್ಷಣವೇ ಹುದ್ದೆ ತೊರೆಯಲು ಸಿದ್ಧನಿದ್ದೇನೆ. ನ್ಯಾಯಾಲಯದಲ್ಲಿ ನಾನೇ ಖುದ್ದಾಗಿ ವಾದ ಮಂಡಿಸಲು ಸಿದ್ಧನಿದ್ದೇನೆ ಎಂದು ಪುಡಾ ಅಧ್ಯಕ್ಷ ಅಮಳ ರಾಮಚಂದ್ರ ಸ್ಪಷ್ಟನೆ ನೀಡಿದ್ದಾರೆ