ಪುತ್ತೂರು: ಯಕ್ಷಗಾನ ತಾಳಮದ್ದಳೆ ಸಪ್ತಾಹಕ್ಕೆ ಚಾಲನೆ

| Published : Jul 02 2025, 11:49 PM IST

ಸಾರಾಂಶ

ಪುತ್ತೂರಿನ ಶ್ರೀ ಸುಕೃತಿಂದ್ರ ಕಲಾ ಮಂದಿರದಲ್ಲಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ ದಿ. ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ನಡೆಯುವ ಯಕ್ಷಗಾನ ತಾಳಮದ್ದಳೆ ಸಪ್ತಾಹ ಸೋಮವಾರ ಉದ್ಘಾಟನೆಗೊಂಡಿತು.

ಯಕ್ಷಗಾನ ಅರ್ಥಗಾರಿಕೆಯು ಕಲಾವಿದರಿಗೆ ತಪಸ್ಸಾಗಲಿ: ಕೆ. ಗೋವಿಂದ ಭಟ್

ಕನ್ನಡಪ್ರಭ ವಾರ್ತೆ ಪುತ್ತೂರು

ಕಲಾವಿದರಿಗೆ ಯಕ್ಷಗಾನ ಅರ್ಥಗಾರಿಕೆ ಎನ್ನುವುದು ತಪಸ್ಸಾಗಬೇಕು. ಅರ್ಥಧಾರಿಯಿಂದ ಪುರಾಣ ಲೋಕದ ಅನಾವರಣ ಆಗಬೇಕು. ಕಲಾವಿದ ಅದಕ್ಕೆ ಶಕ್ತನಾಗಿರಬೇಕು. ಸುಂದರ ಪದ ಪ್ರಯೋಗಳ ಮೂಲಕ ನೀಡುವ ಪುರಾಣದ ಸಂದೇಶಗಳು ಜೀವನ ಉತ್ಕರ್ಷಕ್ಕೆ ದಾರಿಯಾಗಿದೆ ಎಂದು ಯಕ್ಷಗಾನ ದಶಾವತಾರಿ ಕೆ. ಗೋವಿಂದ ಭಟ್ ಹೇಳಿದ್ದಾರೆ.ಪುತ್ತೂರಿನ ಶ್ರೀ ಸುಕೃತಿಂದ್ರ ಕಲಾ ಮಂದಿರದಲ್ಲಿ ಆರಂಭಗೊಂಡ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ ಹಾಗೂ ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ ದಿ. ಪೆರುವಡಿ ನಾರಾಯಣ ಭಟ್ಟರ ನೆನಪಿನಲ್ಲಿ ನಡೆಯುವ ಯಕ್ಷಗಾನ ತಾಳಮದ್ದಳೆ ಸಪ್ತಾಹವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಬಲರಾಮ ಆಚಾರ್ಯ ಮಾತನಾಡಿ, ಯಕ್ಷಗಾನವೆಂಬುದು ವಿಶಿಷ್ಟ ಕಲಾ ಪ್ರಾಕಾರವಾಗಿದ್ದು, ಅಲ್ಲಿ ಉತ್ಪತ್ತಿಯಾಗುವ ರಸ ಏನಿದೆಯೋ ಅದು ಜ್ಞಾನಸದೃಶವಾಗಿದೆ ಎಂದರು.

ಪುತ್ತೂರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಅಶೋಕ ನಾಮದೇವ ಪ್ರಭು ಹಾಗೂ ಪುತ್ತೂರು ಶ್ರೀ ರಾಘವೇಂದ್ರ ಮಠದ ಕಾರ್ಯದರ್ಶಿ ಯು. ಪೂವಪ್ಪ ಮಾತನಾಡಿದರು.

ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ಸ್ವಾಗತಿಸಿ, ನಿರ್ವಹಿಸಿದರು. ವೆಂಕಟರಾಮ ಭಟ್ ಸುಳ್ಯ, ಸ್ವಸ್ತಿಕ ಪದ್ಯಾಣ, ಅಶೋಕ ಸುಬ್ರಹ್ಮಣ್ಯ ಪೆರುವಡಿ, ರಮೇಶ ಭಟ್ ಪುತ್ತೂರು ಸಹಕರಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಪ್ತಾಹದ ಮೊದಲ ತಾಳಮದ್ದಳೆ ‘ತರಣಿಸೇನ ಕಾಳಗ’ ನಡೆಯಿತು.