ಭೌಗೋಳಿಕವಾಗಿ ಜಿಲ್ಲೆಯ ಮಧ್ಯಭಾಗದಲ್ಲಿರುವ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗಾಗಿ ಆಂದೋಲನ ನಡೆಸಿ ಯಶಸ್ವಿಯಾಗಿರುವ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯು ಇದೀಗ ಕಿದ್ವಾಯಿ, ಜಯದೇವ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳ ಘಟಕವನ್ನು ಸ್ಥಾಪಿಸುವಂತೆ ಆಗ್ರಹಿಸುವ ಮತ್ತೊಂದು ಆಂದೋಲನಕ್ಕೆ ಮುಂದಾಗಿದೆ.

ಪುತ್ತೂರು: ಭೌಗೋಳಿಕವಾಗಿ ಜಿಲ್ಲೆಯ ಮಧ್ಯಭಾಗದಲ್ಲಿರುವ ಪುತ್ತೂರಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜ್ ಸ್ಥಾಪನೆಗಾಗಿ ಆಂದೋಲನ ನಡೆಸಿ ಯಶಸ್ವಿಯಾಗಿರುವ ಪುತ್ತೂರು ಸರ್ಕಾರಿ ಮೆಡಿಕಲ್ ಕಾಲೇಜ್ ಹೋರಾಟ ಸಮಿತಿಯು ಇದೀಗ ಕಿದ್ವಾಯಿ, ಜಯದೇವ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳ ಘಟಕವನ್ನು ಸ್ಥಾಪಿಸುವಂತೆ ಆಗ್ರಹಿಸುವ ಮತ್ತೊಂದು ಆಂದೋಲನಕ್ಕೆ ಮುಂದಾಗಿದೆ.

ಜಿಲ್ಲೆಯ ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಒಂದೇ ಸೂರಿನಡಿಯಲ್ಲಿ ಎಲ್ಲಾ ಆರೋಗ್ಯ ವ್ಯವಸ್ಥೆಗಳು ಲಭ್ಯವಾಗುವ ನಿಟ್ಟಿನಲ್ಲಿ ಹಾಗೂ ಸರ್ಕಾರಿ ಮೆಡಿಕಲ್ ಕಾಲೇಜ್‌ಗೆ ಶಿಕ್ಷಣ ಪಡೆಯಲು ಆಗಮಿಸುವ ವಿದ್ಯಾರ್ಥಿಗಳಿಗೆ ಅನುಕೂಲಕರ ಆಯ್ಕೆಗೆ ಸಹಾಯಕವಾಗುವ ದೃಷ್ಟಿಯಿಂದ ಸರ್ಕಾರಿ ಸ್ವಾಮ್ಯದ ಹೃದ್ರೋಗ, ಕ್ಯಾನ್ಸರ್ ಮತ್ತು ನರ ಮಾನಸಿಕ ಚಿಕಿತ್ಸಾ ಕೇಂದ್ರಗಳಾದ ಜಯದೇವ, ಕಿದ್ವಾಯಿ ಮತ್ತು ನಿಮ್ಹಾನ್ಸ್ ಆಸ್ಪತ್ರೆಗಳ ಶಾಖೆಗಳು ಪುತ್ತೂರಿನಲ್ಲಿ ಸ್ಥಾಪನೆಯಾಗಬೇಕಾಗಿದೆ. ಈ ನಿಟ್ಟಿನಲ್ಲಿ ಆಂದೋಲನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಹೋರಾಟದ ರೂವಾರಿ ಡಾ. ಸಂದೀಪ್ ನಾಯಕ್ ಸಾಮೆತ್ತಡ್ಕ ತಿಳಿಸಿದರು.

ಅವರು ಸೋಮವಾರ ಪುತ್ತೂರಿನ ಮಂಜಲ್ಪಡ್ಪು ಸುದಾನ ದೇವಾಲಯದ ಎಡ್ವರ್ಡ್ ಸಭಾಂಗಣದಲ್ಲಿ ಆಂದೋಲನದ ರೂಪುರೇಷೆಗಳ ಬಗ್ಗೆ ಪ್ರಾತ್ಯಕ್ಷಿಕೆಯ ಮೂಲಕ ಮಾಹಿತಿ ನೀಡಿದರು.

ಹೃದಯ ಸಂಬಂಧಿ ಕಾಯಿಲೆಗಳು ಕಂಡು ಬಂದಾಗ ಅದಕ್ಕೆ ತುರ್ತು ಚಿಕಿತ್ಸೆಯ ಅಗತ್ಯವಿದೆ. ಕ್ಯಾನ್ಸರ್ ತಪಾಸಣೆ, ರೋಗ ನಿರ್ಣಯ ಮತ್ತು ಸಮಗ್ರ ಚಿಕಿತ್ಸೆ ಸಕಾಲದಲ್ಲಿ ನಡೆಯಬೇಕಾಗಿದೆ. ಈ ಭಾಗದ ಜನರಿಗೆ ಸಮರ್ಪಕ ವ್ಯವಸ್ಥೆಗಳಿರುವ ಆಸ್ಪತ್ರೆಗಳು ಲಭ್ಯವಿರುವುದಿಲ್ಲ. ಈ ಹಿನ್ನಲೆಯಲ್ಲಿ ನಮ್ಮ ಆಂದೋಲನ ನಡೆಯುತ್ತಿದೆ. ಅದಕ್ಕಾಗಿ ಈಗಾಗಲೇ ಸಹಿ ಸಂಗ್ರಹ ಅಭಿಯಾನ ನಡೆಸಲಾಗುತ್ತಿದ್ದು, 1 ಲಕ್ಷ ಸಹಿ ಸಂಗ್ರಹ ಅಭಿಯಾನದ ಗುರಿ ಹೊಂದಲಾಗಿದೆ. ಘಟಕ ಸ್ಥಾಪನೆಗೆ ಪುತ್ತೂರು ತಾಲೂಕಿನ ಸೇಡಿಯಾಪುವಿನಲ್ಲಿ 120 ಎಕ್ರೆ ಮತ್ತು ಆರ್ಯಾಪುವಿನಲ್ಲಿ 80 ಎಕ್ರೆ ಜಾಗವನ್ನು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದರು.

ಹೋರಾಟ ಸಮಿತಿಯ ಸಂಚಾಲಕ ಅಮಳ ರಾಮಚಂದ್ರ ಮಾತನಾಡಿ ಮೆಡಿಕಲ್ ಕಾಲೇಜ್ ಹೋರಾಟದ ಯಶಸ್ವಿಯ ಅಂತ್ಯದೊಂದಿಗೆ ಯಶಸ್ವಿಯಾಗಬೇಕಾದ ಹೋರಾಟಕ್ಕೆ ಮುಂದಡಿ ಇಡಲಾಗಿದೆ. ಹೋರಾಟ ಮತ್ತು ಅಭಿವೃದ್ಧಿಯು ನಿರಂತರ ಚಟುವಟಿಕೆಯಾಗಿದೆ ಎಂದರು. 2013ರಲ್ಲಿ ಪುತ್ತೂರು ಬಳಕೆದಾರರ ವೇದಿಕೆಯ ಕಾರ್ಯಕರ್ತ ದಿನೇಶ್ ಭಟ್ ಸರ್ಕಾರಿ ಮೆಡಿಕಲ್ ಕಾಲೇಜ್ ಪುತ್ತೂರಿನಲ್ಲಿ ಸ್ಥಾಪಿಸುವ ಬಗ್ಗೆ ಚಿಂತನೆಯ ಬೀಜ ಬಿತ್ತಿದ್ದರು. 2014 ರಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೊಂದು ಸರ್ಕಾರಿ ಮೆಡಿಕಲ್ ಕಾಲೇಜ್ ನೀಡುವ ಬಗ್ಗೆ ಪ್ರಸ್ತಾಪನೆ ಮಾಡಿದಾಗ ಪುತ್ತೂರು ಮೆಡಿಕಲ್ ಕಾಲೇಜ್ ಬೀಜ ಮೊಳಕೆ ಒಡೆಯಿತು. ಇದಕ್ಕಾಗಿ ಡಾ. ರಾಘವೇಂದ್ರ ಪ್ರಸಾದ್ ಬಂಗಾರಡ್ಕ ಅವರು ಸಾಕಷ್ಟು ಲೇಖನಗಳನ್ನು ಬರೆದರು. 2016 ರಲ್ಲಿ ಅಂದಿನ ಶಾಸಕ ಶಕುಂತಳಾ ಶೆಟ್ಟಿ ಮುಂದಾಳತ್ವದಲ್ಲಿ ಮೆಡಿಕಲ್ ಕಾಲೇಜ್‌ಗೆ ಜಾಗ ಮೀಸಲಿಡಲಾಯಿತು. ಮುಂದೇ ಅದೇ ಜಾಗದಲ್ಲಿ ಸೀ ಫುಡ್ ಪಾರ್ಕ್ ನಿರ್ಮಾಣದ ಪ್ರಸ್ತಾವನೆ ಬಂದಾಗ ಮೆಡಿಕಲ್ ಕಾಲೇಜ್ ಹೋರಾಟ ತೀವ್ರಗೊಂಡ ಹಿನ್ನಲೆಯಲ್ಲಿ ಈ ಪ್ರಸ್ತಾಪ ರದ್ದುಗೊಂಡಿತು. ಈ ಎಲ್ಲಾ ಹೋರಾಟಕ್ಕೆ ಡಾ. ಸಂದೀಪ್ ನಾಯಕ್ ಸಾಮೆತ್ತಡ್ಕ ಅವರು ಬೆನ್ನೆಲುಬಾಗಿ ಕಾರ್ಯ ನಿರ್ವಹಿಸಿದ್ದರು ಎಂದು ನೆನಪಿಸಿಕೊಂಡರು.

ಹೋರಾಟ ಸಮಿತಿಯ ಗೌರವ ಅಧ್ಯಕ್ಷ ಅಣ್ಣಾ ವಿನಯ ಚಂದ್ರ, ಅಧ್ಯಕ್ಷ ಎಂ.ಬಿ. ವಿಶ್ವನಾಥ, ಉಪಾಧ್ಯಕ್ಷ ವಿಶ್ವಪ್ರಸಾದ್ ಭಟ್ ಸೇಡಿಯಾಪು, ಪ್ರಧಾನ ಕಾರ್ಯದರ್ಶಿ ಝೇವಿಯರ್ ಡಿಸೋಜ ಇದ್ದರು.