ಸಾರಾಂಶ
ಇಲಾಖೆ ಆಸ್ತಿ ಉಳಿಸುವಲ್ಲಿ ವಿಫಲ ಆರೋಪ
ಕನ್ನಡಪ್ರಭ ವಾರ್ತೆ ಚಾಮರಾಜನಗರನಗರದಲ್ಲಿರುವ ಲೋಕೋಪಯೋಗಿ ಇಲಾಖೆಯ ಆಸ್ತಿ ಉಳಿಸುವಲ್ಲಿ ವಿಫಲರಾಗಿರುವ ಇಲಾಖೆಯ ಕಾರ್ಯಪಾಲಕ ಅಭಿಯಂತರರನ್ನು ಅಮಾನತು ಮಾಡಿ ತನಿಖೆಗೊಳಪಡಿಸಬೇಕೆಂದು ವಿದ್ಯಾವಂತ ನಿರುದ್ಯೋಗಿಗಳ ಸಂಘದ ರಾಜ್ಯಾಧ್ಯಕ್ಷ ಕೂಡ್ಲೂರು ಶ್ರೀಧರಮೂರ್ತಿ ಆಗ್ರಹಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಪಿಡಬ್ಲ್ಯುಡಿ ಕಾರ್ಯಪಾಲಕ ಅಭಿಯಂತರಾದ ಎಚ್.ಎನ್.ಮಹೇಶ್ ನಗರದ ಹೃದಯ ಭಾಗದಲ್ಲಿರುವ ಇಲಾಖೆಯ ಕ್ವಾಟ್ರಸ್‌ಗಳಲ್ಲಿ ಸರಿ ಸುಮಾರು ಜಿಲ್ಲಾಧಿಕಾರಿಗಳ ಅಧೀನದಲ್ಲಿರುವ 108 ಕ್ವಾಟ್ರಸ್‌ಗಳಿದ್ದು, ಜಿಲ್ಲಾಧಿಕಾರಿಗಳು ಶಿಫಾರಸ್ಸು ಮಾಡಿದ ಸರ್ಕಾರಿ ನೌಕರರಿಗೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರರಿಗೆ ಆದೇಶ ನೀಡಿ ಹಂಚಿಕೆ ಮಾಡಲು ಆದೇಶ ನೀಡಿರುತ್ತಾರೆ ಎಂದು ದೂರಿದರು.ಉಳಿದ ಕ್ವಾಟ್ರಸ್‌ಗಳಲ್ಲಿ ಕಾರ್ಯಪಾಲಕ ಅಭಿಯಂತರರು ಅಧೀನದಲ್ಲಿರುವ ಸುಮಾರು 78 ಕ್ವಾಟ್ರಸ್‌ಗಳನ್ನು ಇವರೇ ಹಂಚಿಕೆ ಮಾಡುತ್ತಾರೆ. ಈ ಎಲ್ಲಾ ಕ್ವಾಟ್ರಸ್‌ಗಳಿಂದ ಹಂಚಿಕೆಯಾಗಿರುವ ನೌಕರರ ಸರ್ಕಾರಿ ಸಂಬಳದಿಂದ ಬಾಡಿಗೆಯನ್ನು ಪಿಡಬ್ಲ್ಯುಡಿ ಅಕೌಂಟ್‌ಗೆ ಜಮಾ ಆಗುತ್ತಿರುತ್ತದೆ. ಆದರೆ ಈ ಕ್ವಾಟ್ರಸ್‌ಗಳಿಂದ ಪಿಡಬ್ಲ್ಯುಡಿ ಅಧಿಕಾರಿಗಳು ಬಾಡಿಗೆಯನ್ನು ಪಡೆದಿದ್ದು, ಈ ಕ್ವಾಟ್ರಸ್‌ಗಳು ತುಂಬಾ ಶಿಥಿಲಗೊಂಡಿದ್ದು, ಇದರ ಸುತ್ತಲು ಮರ, ಗಿಡ, ಬಳ್ಳಿಗಳು ಬೆಳೆದುಕೊಂಡಿವೆ. ಇದನ್ನು ದುರಸ್ತಿಪಡಿಸುವಂತೆ ವಸತಿ ಗೃಹದ ಸರ್ಕಾರಿ ನೌಕರರು ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ಕಳೆದ ಮಾರ್ಚ್ ಏಪ್ರಿಲ್ ತಿಂಗಳಿನಲ್ಲಿ ಸುಮಾರು 23 ಕೋಟಿ ರು. ಹಣ ಸರ್ಕಾರದಿಂದ ಬಂದಿರುತ್ತದೆ. ಜುಲೈ-ಆಗಸ್ಟ್‌ನಲ್ಲಿ ಸುಮಾರು 6 ಕೋಟಿ ರು. ಕಾರ್ಯಪಾಲಕ ಅಭಿಯಂತರರು ಪಿಡಬ್ಲ್ಯುಡಿ ಚಾಮರಾಜನಗರ ಇವರಿಗೆ ಎಲ್‌ಒಸಿ ಸಂದಾಯವಾಗಿರುತ್ತದೆ. ಈ ಹಣವನ್ನು ಸುಮಾರು ಶೇ.10ರಂತೆ ವಸೂಲಿ ಮಾಡುವ ದಂಧೆಯಲ್ಲಿರುವುದರಿಂದ ಸರ್ಕಾರದ ಸ್ವತ್ತುಗಳನ್ನು ಉಳಿಸುವುದರಲ್ಲಿ ಮೇಲ್ಕಂಡ ಅಧಿಕಾರಿಯು ನಿರ್ಲಕ್ಷ್ಯ ಧೋರಣೆಯನ್ನು ತೋರಿದ್ದರಿಂದ ಈ ಕ್ವಾಟ್ರಸ್‌ಗಳು ಇಂತಹ ಸ್ಥಿತಿಯಲ್ಲಿರುವುದಕ್ಕೆ ಕಾರಣವಾಗಿದೆ. ಆದ್ದರಿಂದ ಕರ್ತವ್ಯ ಲೋಪ, ಲಂಚಗುಳಿತನಕ್ಕೆ ನಿಂತಿರುವ ಈ ಎಂಜಿನಿಯರ್‌ನ್ನು ಅಮಾನತು ಮಾಡಬೇಕೆಂದು ಆಗ್ರಹಿಸಿದರು.ಚಾಮರಾಜನಗರ ಹೌಸಿಂಗ್ ಬೋರ್ಡ್ ರಸ್ತೆಯ ಬದಿಯಲ್ಲಿ ಹಾಪ್‌ಕಾಮ್ಸ್ ಇರುವ ಸ್ಥಳದ ಹಿಂಬದಿಯಲ್ಲಿ 3 ಮಳಿಗೆ ಕಟ್ಟಡ ಇದೆ. ಈ ಆಸ್ತಿಯು ಸಹ ಪಿಡಬ್ಲ್ಯುಡಿಗೆ ಸೇರಿದ ಸ್ವತ್ತಾಗಿರುತ್ತದೆ. ಅದರ ಬಗ್ಗೆ ಏನು ಕ್ರಮ ಕೈಗೊಂಡಿಲ್ಲ ಎಂಬ ಆರೋಪವಿದೆ ಹಾಗೂ ಚಾಮರಾಜನಗರ ತಾಲೂಕಿನ ಮಲೆಯೂರು ಗ್ರಾಮದಿಂದ ಕನಕಗಿರಿಗೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ 25 ಲಕ್ಷ ರು. ಎರಡು ಕೆಲಸಗಳಿಗೆ ಕೆ.ಎಲ್.ರವಿ ಎಂಬುವರಿಗೆ 25 ಲಕ್ಷ ರು. ಟೆಂಡರ್‌ನ್ನು ಯಾವುದೇ ದಾಖಲಾತಿ ಇಲ್ಲದೆ ಟೆಂಡರ್ ನಿಲ್ಲಿಸಿರುತ್ತಾರೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕರ್ತವ್ಯ ಲೋಪವೆಸಗಿ, ಇಲಾಖೆ ಆಸ್ತಿಯನ್ನು ಉಳಿಸುವಲ್ಲಿ ವಿಫಲರಾಗಿ ಇಲಾಖೆ ಕಾರ್ಯಪಾಲಕ ಅಭಿಯಂತರರನ್ನು ಜಿಲ್ಲಾಧಿಕಾರಿಗಳು ಕೂಡಲೇ ಅಮಾನತುಗೊಳಿಸಿ ತನಿಖೆಗೊಳಪಡಿಸಬೇಕು. ಇಲ್ಲದಿದ್ದರೆ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.ಸಂಘದ ಸಂಚಾಲಕರಾದ ಕೂಡ್ಲೂರು ಮಹೇಶ್, ಅಲ್ಕೆರೆ ಅಗ್ರಹಾರ ಶ್ರೀನಿವಾಸ, ಶ್ರೀನಾಥ್, ವೆಂಕಟೇಶ ಹಾಜರಿದ್ದರು.