ಸಾರಾಂಶ
ಬಿಪಿಎಲ್ ಕಾರ್ಡ್ ರದ್ದುಗೊಳಿಸದಂತೆ ಆಗ್ರಹಿಸಿ ಪಿಗ್ಮಿ ಸಂಗ್ರಹಕಾರರ ಮನವಿ
ಕನ್ನಡಪ್ರಭ ವಾರ್ತೆ ಭಟ್ಕಳ
ಇತ್ತೀಚಿನ ದಿನಗಳಲ್ಲಿ ಪಿಗ್ಮಿ ಸಂಗ್ರಹಕಾರರ ಕುಟುಂಬದ ಬಿಪಿಎಲ್ ಕಾರ್ಡ್ ಗಳು ರದ್ದಾಗುತ್ತಿರುವ ಹಿನ್ನೆಲೆ ತಾಲೂಕಿನ ಪಿಗ್ಮಿ ಸಂಗ್ರಹಕಾರರ ಸಂಘದ ವತಿಯಿಂದ ಪಿಗ್ಮಿ ಸಂಗ್ರಹಕಾರರ ಕುಟುಂಬವನ್ನು ಬಿಪಿಎಲ್ ಕಾರ್ಡ್ ನಿಂದ ಅನರ್ಹಗೊಳಿಸದಂತೆ ಆಗ್ರಹಿಸಿ ತಹಸೀಲ್ದಾರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಪಿಗ್ಮಿ ಸಂಗ್ರಹಕಾರರು ಅನೇಕ ವರ್ಷಗಳಿಂದ ಪಿಗ್ಮಿ ಸಂಗ್ರಹಣೆಯನ್ನ ವೃತ್ತಿಯನ್ನಾಗಿ ಮಾಡಿಕೊಂಡು ಬಂದಿದ್ದಾರೆ. ಪಿಗ್ಮಿ ಸಂಗ್ರಹಕಾರರಲ್ಲಿ ಕೆಲವರು ಪದವಿ ಪಡೆದವರು ಇದ್ದು. ಯಾವುದೇ ಕೆಲಸ ಸಿಗದೆ ಇದ್ದಾಗ ಪಿಗ್ಮಿ ಕೆಲಸವನ್ನು ವೃತ್ತಿಯನ್ನಾಗಿ ಆಯ್ದುಕೊಂಡಿದ್ದಾರೆ. ಹಗಲು ರಾತ್ರಿ, ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ ನಿರಂತರವಾಗಿ ಒಂದು ದಿನವೂ ರಜೆ ಇಲ್ಲದೆ ಕೆಲಸ ಮಾಡುವ ಪಿಗ್ಮಿ ಸಂಗ್ರಹಕಾರರು, ತುರ್ತು ಅವಶ್ಯಕತೆಗೆ ರಜೆ ಪಡೆದರೆ ಬ್ಯಾಂಕಿನಲ್ಲಿ ಮತ್ತು ಸಂಘ ಸಂಸ್ಥೆಯಲ್ಲಿ ಯಾವುದೇ ರೀತಿಯ ವೇತನ ನೀಡುವುದಿಲ್ಲ. ಪಿಗ್ಮಿ ಸಂಗ್ರಹಕಾರರಿಗೆ ಅನಾರೋಗ್ಯ ಸಂದರ್ಭ ಯಾವುದೇ ಸೌಲಭ್ಯ ದೊರಕುವುದಿಲ್ಲ. ಈ ನಡುವೆ ಸರ್ಕಾರ ಪಿಗ್ಮಿ ಸಂಗ್ರಾಹಕರ ಬಿಪಿಎಲ್ ಕಾರ್ಡ್ ಅನರ್ಹಗೊಳಿಸುತ್ತಿರುವುದು. ಪಿಗ್ಮಿ ಸಂಗ್ರಹಕಾರ ಕುಟುಂಬಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇಂತಹ ಪರಿಸ್ಥಿತಿಯನ್ನು ಅರಿತು ಸರ್ಕಾರ ಪಿಗ್ಮಿ ಸಂಗ್ರಹಕಾರ ಕುಟುಂಬವನ್ನು ಬಿಪಿಎಲ್ ಕಾರ್ಡ್‌ನಿಂದ ಅನರ್ಹಗೊಳಿಸಬಾರದು ಎಂದು ತಿಳಿಸಲಾಗಿದೆ.
ಈ ಸಂದರ್ಭ ತಾಲ್ಲೂಕು ಪಿಗ್ಮಿ ಸಂಗ್ರಹಕಾರ ಸಂಘದ ಅಧ್ಯಕ್ಷ ವೆಂಕಟೇಶ ನಾಯ್ಕ, ಉಪಾಧ್ಯಕ್ಷ ವಾಸು ಮಂಜಪ್ಪ ನಾಯ್ಕ, ವೆಂಕಟ್ರಮಣ ಶನಿಯಾರ ನಾಯ್ಕ, ಕಾರ್ಯದರ್ಶಿ ಈಶ್ವರ ನಾಗಪ್ಪ ನಾಯ್ಕ, ಹಾಗೂ ಸಂಘದ ಸದಸ್ಯರು ಹಾಜರಿದ್ದರು.