ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಕೃಷಿಕರಿಗೆ ತಾವು ಖರೀದಿಸಿದ ಗಿಡ, ತಳಿಗಳ ಮಾಹಿತಿಯನ್ನು ಸುಲಭದಲ್ಲಿ ಪಡೆಯಲು ಅನುವಾಗುವ ಕ್ಯೂಆರ್ ಕೋಡ್ ಹಾಗೂ ನರ್ಸರಿಯವರಿಗೆ ತಮ್ಮಲ್ಲಿ ಗಿಡ ಖರೀದಿಸಿದ ಕೃಷಿಕರ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಪತ್ತೆ ಹಚ್ಚುವ ಸರಳ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.
ಪುತ್ತೂರಿನ ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಮೋಹನ್ ತಲಕಾಲುಕೊಪ್ಪ ಮತ್ತವರ ತಂಡ ಗೇರು ತಳಿಗಳ ಗುರುತಿಸುವಿಕೆಗೆ ಕ್ಯೂಆರ್ ಕೋಡ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ. ಇದನ್ನು ಮೂಲತಃ ಗೇರು ಬೆಳೆಗೆ ಅಭಿವೃದ್ಧಿಪಡಿಸಿದ್ದರೂ, ರೈತಸ್ನೇಹಿಯಾದ ಈ ತಂತ್ರಾಂಶವನ್ನು ಭಾರತೀಯ ಕೃಷಿ ಸಂಶೋಧನಾ ಪರಿಷತ್ತಿನಡಿಯಲ್ಲಿ (ಐಸಿಎಆರ್) ಬರುವ ಹಲವು ಸಂಶೋಧನಾ ಸಂಸ್ಥೆಗಳು ಹಾಗೂ ಕೃಷಿ ವಿಶ್ವವಿದ್ಯಾಲಯಗಳೂ ತಮ್ಮ ಬೆಳೆಗಳಿಗೆ ಅಲ್ಪಸ್ವಲ್ಪ ಬದಲಾವಣೆಗಳೊಂದಿಗೆ ಅಳವಡಿಸಿಕೊಳ್ಳಲು ಸಾಧ್ಯವಿದೆ. ಅಂತೆಯೇ ವಿವಿಧ ರೀತಿಯ ಹೂ, ಹಣ್ಣಿನ ಗಿಡಗಳನ್ನು ಮಾರುವ ಖಾಸಗಿ ನರ್ಸರಿಯವರೂ ಇದನ್ನು ಬಳಸಿಕೊಳ್ಳಲು ಸಾಧ್ಯ ಎಂದು ಡಾ.ಮೋಹನ ತಲಕಾಲುಕೊಪ್ಪ ತಿಳಿಸಿದ್ದಾರೆ. ಸಾಮಾನ್ಯವಾಗಿ ನರ್ಸರಿಗಳಲ್ಲಿ ಅಪರಿಚಿತ ಇಲ್ಲವೇ ಪರಿಚಿತ ಗಿಡಗಳಲ್ಲಿ ಇರುವ ವಿವಿಧ ತಳಿಗಳ ಹೆಸರು ಯಾವತ್ತೂ ನೆನಪು ಇರಿಸಿಕೊಳ್ಳುವುದು ಸುಲಭವಲ್ಲ. ದೀರ್ಘಾವಧಿ ಬೆಳೆಗಳಲ್ಲಿ ಹೂವು-ಹಣ್ಣು ಆಗದ ಹೊರತು ತಳಿಗಳ ಪತ್ತೆಹಚ್ಚುವುದು ಕಷ್ಟ. ಕೇವಲ ಮೊಬೈಲ್‌ನಿಂದ ಕ್ಯೂಆರ್‌ಕೋಡ್ ಸ್ಕ್ಯಾನ್ ಮಾಡುವ ಮಾಡುವ ಮೂಲಕ ಗಿಡಗಳ ಮಾಹಿತಿ ಪಡೆದುಕೊಳ್ಳಲು ಸಾಧ್ಯವಿದೆ ಎನ್ನುತ್ತಾರೆ ಅವರು.ಮಾಹಿತಿ ಪಡೆಯುವ ವಿಧಾನ: ಉದಾಹರಣೆಗೆ ಯಾವುದೇ ನರ್ಸರಿಯಲ್ಲಿ ಗಿಡ ಖರೀದಿಸಿದಾಗ ಬಿಲ್ ಮೇಲೆ ಕ್ಯೂಆರ್ ಕೋಡ್ ಬರುತ್ತದೆ. ಅದನ್ನು ಮೊಬೈಲಿನಲ್ಲಿ ಸ್ಕ್ಯಾನ್ ಮಾಡಿದರೆ ಖರೀದಿಸಿದ ತಳಿಗಳ ಸಂಕ್ಷಿಪ್ತ ಮಾಹಿತಿ, ಸಂಪರ್ಕ ಸಂಖ್ಯೆ ಹಾಗೂ ಕೆಲವು ಉಪಯುಕ್ತ ಕೊಂಡಿಗಳು ಸಿಗುತ್ತವೆ. ಹಿಮ್ಮಾಹಿತಿ ನೀಡುವ ಅವಕಾಶವೂ ಇದೆ. ಗಿಡಗಳಿಗೆ ಕ್ಯೂಆರ್ ಕೋಡ್ ಲೇಬಲ್‌ಗಳನ್ನು ಹಾಕಿದರೆ ಮಳೆ, ಸಾಗಣೆ, ಮಣ್ಣಿನ ಸಂಪರ್ಕ ಇತ್ಯಾದಿಗಳಿಂದ ಹಾಳಾಗುವ ಸಾಧ್ಯತೆ. ಹಾಗಾಗಿ ಬಿಲ್ಲಿನಲ್ಲೇ ಕ್ಯೂಆರ್ ಕೋಡ್ ಬರುವ ಹಾಗೆ ವ್ಯವಸ್ಥೆ. ಈ ಕೋಡ್‌ನ್ನು ಮೊಬೈಲಿನಲ್ಲಿಟ್ಟುಕೊಂಡು ಬೇಕೆಂದಾಗ ಮಾಹಿತಿ ಪಡೆಯಬಹುದು.ಬಹೂಪಯೋಗಿ ತಂತ್ರಾಶ ಇದು ಈ ತಂತ್ರಾಂಶ ಇಷ್ಟಕ್ಕೇ ಸೀಮಿತವಲ್ಲ. ದೇಶದಾದ್ಯಂತ ಸಾವಿರಾರು ಕೃಷಿಕರು ಗೇರು ಸಂಶೋಧನಾ ಕೇಂದ್ರದಿಂದ ಗಿಡಗಳನ್ನು ತೆಗೆದುಕೊಂಡು ಹೋಗುತ್ತಾರೆ. ಇವರೆಲ್ಲರ ಮಾಹಿತಿಯನ್ನು ಪತ್ತೆಹಚ್ಚುವುದು ಕಷ್ಟಸಾಧ್ಯ. ತಂತ್ರಾಂಶದ ಮಾಹಿತಿಯಿಂದ ಗಿಡ, ತಳಿ ಹಂಚಿಕೆಯ ವಿವಿಧ ಪ್ರದೇಶಗಳ ನಕ್ಷೆ ತಯಾರಿಸಲು ಅನುಕೂಲ. ಅಂದರೆ ಇದು ಒಂದು ನರ್ಸರಿ ಅಥವಾ ಸಂಸ್ಥೆಯ ಕೆಲಸದ ಪ್ರಭಾವವನ್ನು ಪರೀಕ್ಷಿಸಲೂ ಅನುವಾಗುತ್ತದೆ.
ಇದಲ್ಲದೆ, ಗೇರು ಕೃಷಿಕರ ತೋಟಗಳಲ್ಲಿ ಎಷ್ಟು ಗಿಡ ಈಗ ಉಳಿದಿದೆ ಹಾಗೂ ಅವರು ಯಾವ ಅಂತರದಲ್ಲಿ ಗಿಡ ನೆಟ್ಟಿದ್ದಾರೆ ಅಂತ ವಿವರ ಪಡೆದು ದೇಶದ ಎಷ್ಟು ಎಕರೆ ಪ್ರದೇಶದಲ್ಲಿ ಸಂಸ್ಥೆಯ ಗಿಡಗಳಿವೆ ಎಂಬುದನ್ನು ಅಂದಾಜು ಮಾಡಬಹುದು. ಕೃಷಿಮಾಹಿತಿ ನಿಜವಾಗಿ ಯಾರಿಗೆ, ಎಲ್ಲಿಗೆ ಅಗತ್ಯ ಎಂಬುದೂ ಗೊತ್ತಾಗುತ್ತದೆ. ಜೊತೆಗೆ ಹಲವು ವರ್ಷಗಳ ಗಿಡ, ತಳಿ ಬೇಡಿಕೆಯನ್ನು ವಿಶ್ಲೇಷಿಸಿ ಈ ವರ್ಷ ಎಷ್ಟು ಬೇಡಿಕೆ ಬರಬಹುದು ಎಂಬ ಮುನ್ಸೂಚನೆಯನ್ನೂ ಕೆಲಮಟ್ಟಿಗೆ ಪಡೆಯಲು ಸಾಧ್ಯ. ಮಾತ್ರವಲ್ಲ, ಗಿಡ ಖರೀಸುವ ಕೃಷಿಕರ ವಿವರ ಪಡೆದು ವಾಟ್ಸಪ್ ಗುಂಪು ಮಾಡಿ ಅವರೊಡನೆ ನಿರಂತರ ಸಂಪರ್ಕದಲ್ಲಿರಲು ಕೂಡ ಇಲ್ಲಿ ಸಾಧ್ಯವಿದೆ.